- ಸಿಎಂ ಸ್ಟಾಲಿನ್ ಸೇರಿ ಹಲವರಿಗೆ ಬೆದರಿಕೆ
- ಇಮೇಲ್ ಮುಖಾಂತರ ನಾಲ್ವರಿಗೆ ಬೆದರಿಕೆ
- ಕಳೆದ ತಿಂಗಳು ಇದೇ ರೀತಿಯಲ್ಲಿ ಕರೆ
ತಮಿಳುನಾಡು: ನಿನ್ನೆ (ನ.16) ರಾತ್ರಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹಿರಿಯ ನಟ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ನಟಿ ಖುಷ್ಬೂ ಸುಂದರ್ ಅವರಿಗೆ ಏಕಕಾಲಕ್ಕೆ ಬಾಂಬ್ ಬೆದರಿಕೆಗಳು ಬಂದಿವೆ.
ಸ್ಟಾರ್ ಕಲಾವಿದರೇ ಟಾರ್ಗೆಟ್?
ಇ-ಮೇಲ್ ಮೂಲಕ ನಾಲ್ವರು ಜನಪ್ರಿಯ ವ್ಯಕ್ತಿಗಳಿಗೆ ಬಾಂಬ್ ಬೆದರಿಕೆ ಕಳುಹಿಸಿರುವ ಕಿಡಿಗೇಡಿಗಳು, ಈ ಹಿಂದೆಯೂ ಇದೇ ರೀತಿಯಲ್ಲಿ ಹಲವಾರು ತಮಿಳು ಸೆಲೆಬ್ರಿಟಿಗಳಿಗೆ ಬೆದರಿಕೆಯೊಡ್ಡಿದ್ದರು. ಇದೀಗ ಮತ್ತದೇ ಹಾದಿಯನ್ನು ಹಿಡಿದಿರುವ ದುಷ್ಕರ್ಮಿಗಳು, ಭಾನುವಾರ ರಾತ್ರಿ ಸಿಎಂ ಸ್ಟಾಲಿನ್ ಸೇರಿ ಸಿನಿಮಾ ಸ್ಟಾರ್ಗಳ ನಿವಾಸಕ್ಕೆ ಥ್ರೆಟ್ ಕಾಲ್ ಮಾಡಿದ್ದಾರೆ.
ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಗೆ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ನಾಲ್ಕೂ ಸ್ಥಳಗಳಲ್ಲಿ ತುರ್ತು ಭದ್ರತಾ ತಪಾಸಣೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಕಳೆದ ವಾರ, ಚೆನ್ನೈನ ಇಂಜಂಬಕ್ಕಂನಲ್ಲಿರುವ ಅಜಿತ್ ಕುಮಾರ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಬಂದಿತ್ತು. ಮಾಹಿತಿ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಶೋಧ ಕಾರ್ಯ ನಡೆಸಿದರು. ಆದರೆ, ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ.
ಕಳೆದ ತಿಂಗಳು ಹುಸಿ ಬೆದರಿಕೆ
ಕಳೆದ ತಿಂಗಳು ತಮಿಳಿನ ಖ್ಯಾತ ಮ್ಯೂಸಿಕ್ ಕಂಪೋಸರ್ ಇಳಯರಾಜ ಅವರ ಟಿ ನಗರ ಸ್ಟುಡಿಯೋಗೂ ಬಾಂಬ್ ಬೆದರಿಕೆ ಬಂದಿತ್ತು. ಅವರ ನಂತರದಲ್ಲಿ ಇತರ ಕಲಾವಿದರಿಗೂ ಹುಸಿ ಬೆದರಿಕೆಗಳು ಬಂದಿದ್ದವು. ಎರಡು ತಿಂಗಳಲ್ಲಿ ಪದೇ ಪದೇ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು, ಅದರಲ್ಲೂ ತಮಿಳಿನ ರಾಜಕೀಯ ಗಣ್ಯರು ಮತ್ತು ಖ್ಯಾತ ಸೆಲೆಬ್ರಿಟಿಗಳನ್ನು ಗುರಿಯಾಗಿಸುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ,(ಏಜೆನ್ಸೀಸ್).