ಘಟನೆಯ ಸ್ಥಳ 
ದೇಶ

ಮಣಿಪುರದಲ್ಲಿ ಮತ್ತೆ ನಾಗರಿಕರ ಮನೆ ಗುರಿಯಾಗಿಸಿ ಬಾಂಬ್ ದಾಳಿ; ಇಬ್ಬರು ಮಕ್ಕಳು ಸಾವು, ತಾಯಿಗೆ ಗಂಭೀರ ಗಾಯ | Bomb attack

ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಂದುವರೆದಿದ್ದು, ಮಂಗಳವಾರ ಮುಂಜಾನೆ(ಏ. 07) ನಾಗರಿಕರ ನಿವಾಸಗವನ್ನು ಗುರಿಯಾಗಿಸಿ ಉಗ್ರಗಾಮಿಗಳು ಬಾಂಬ್ ದಾಳಿ(Bomb attack) ನಡೆಸಿದ್ದು, ಘಟನೆಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಪ್ರದೇಶದಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕುಟುಂಬವು ನಿದ್ರಿಸುತ್ತಿದ್ದಾಗ ಮನೆಯ ಮೇಲೆ ಸ್ಫೋಟಕ ಸಾಧನವನ್ನು ಎಸೆಯಲಾಗಿದೆ. ಐದು ವರ್ಷ ಬಾಲಕ ಮತ್ತು ಆರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಗಾಯಗೊಂಡ ಮಕ್ಕಳ ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆ ಬಗ್ಗೆ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಚುರಚಂದ್‌ಪುರದ ಬೆಟ್ಟದ ಜಿಲ್ಲೆಗಳ ಬಳಿ ಇರುವ ತಗ್ಗು ಪ್ರದೇಶವಾದ ಮೊಯಿರಾಂಗ್ ಟ್ರೋಂಗ್ಲಾಬಿ, 2023ರಲ್ಲಿ ಉಲ್ಬಣಗೊಂಡು 2024ರವರೆಗೂ ಮುಂದುವರಿದ ಜನಾಂಗೀಯ ಅಶಾಂತಿಯ ಸಮಯದಲ್ಲಿ ಮಧ್ಯಂತರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.
ಇನ್ನೂ ಬಾಂಬ್ ದಾಳಿಯನ್ನು ಖಂಡಿಸಿರುವ ಬಿಜೆಪಿ ಶಾಸಕಿ ತಿ ಶಾಂತಿ ಸಿಂಗ್, ಇದು ಘೋರ ಕೃತ್ಯವಾಗಿದ್ದು, ಕುಕಿ ಉಗ್ರಗಾಮಿಗಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾಗರಿಕರ ಮೇಲಿನ ದಾಳಿ ಸ್ವೀಕಾರ್ಹವಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ (ಏಜೆನ್ಸೀಸ್).