- ಇಂಡಿಗೋ ವಿಮಾನಕ್ಕೆ ಬಾಂಬ್ ಮತ್ತು ಹೈಜಾಕ್ ಬೆದರಿಕೆ
- ಕುವೈತ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನ
- ಬೆದರಿಕೆ ಬಳಿಕ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಅಹಮದಾಬಾದ್: ಶುಕ್ರವಾರ (ಜ.30) ರಂದು ಕುವೈತ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ (IndiGo) ವಿಮಾನಕ್ಕೆ ಹೈಜಾಕ್ ಮತ್ತು ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ವರದಿಯಾಗಿದೆ.
ವಿಮಾನವನ್ನು ಬೆಳಿಗ್ಗೆ 6.40 ರ ಸುಮಾರಿಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಾಗಿದ್ದು, ವಿಮಾನದಲ್ಲಿದ್ದ 180 ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದ ಶೌಚಾಲಯದಲ್ಲಿದ್ದ ಟಿಶ್ಯೂ ಪೇಪರ್ನಲ್ಲಿ ವಿಮಾನವನ್ನು ಹೈಜಾಕ್ ಮತ್ತು ಬಾಂಬ್ ಸ್ಫೋಟ ಮಾಡುವ ಕುರಿತು ಬರೆಯಲಾದ ನೋಟ್ ದೊರೆತ ಹಿನ್ನಲೆಯಲ್ಲಿ ಈ ತುರ್ತು ಭೂಸ್ಪರ್ಶವನ್ನು ಕೈಗೊಳ್ಳಲಾಗಿದೆ.
ವಿಮಾನದ ಲ್ಯಾಂಡಿಗ್ ನಂತರ ಪ್ರಯಾಣಿಕರನ್ನು ಮತ್ತು ಅವರ ವಸ್ತುಗಳನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇನ್ನೂವರೆಗೆ ಯಾವುದೇ ಅನುಮಾನಸ್ಪದ ಬೆಳವಣಿಗೆ ಕಂಡುಬಂದಿಲ್ಲ ಎಂದು ಭದ್ರತಾ ಸಿಬ್ಬಂದಿಗಳು ತಿಳಿಸಿದ್ದಾರೆ. ಎಲ್ಲಾ ರೀತಿಯ ಪರಿಶೀಲನೆಗಳು ಮುಗಿದ ನಂತರ ವಿಮಾನವು ಮತ್ತೆ ದೆಹಲಿಯತ್ತ ಪ್ರಯಾಣ ಬೆಳೆಸಲಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಇದೇ ರೀತಿಯ ಘಟನೆ ನಡೆದಿತ್ತು
ಜನವರಿ 22 ರಂದು ದೆಹಲಿಯಿಂದ ಪುಣೆಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 2608 ವಿಮಾನವು ಪುಣೆ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಬಾಂಬ್ ಬೆದರಿಕೆ ಮಾಹಿತಿಯನ್ನು ಪಡೆಯಿತು. ಆದರೆ ಸಂಪೂರ್ಣ ತಪಾಸಣೆಯ ನಂತರ ಯಾವುದೇ ಅನುಮಾನಾಸ್ಪದ ಮಾಹಿತಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೌಲ್ಯಮಾಪನದ ನಂತರ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿತು. ಅದರೆ ಯಾವುದೇ ಅನುಮಾನಾಸ್ಪದ ಅಥವಾ ಪ್ರತಿಕೂಲ ಸಂಶೋಧನೆಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿ ಹೇಳಿದರು. ಕಾರ್ಯವಿಧಾನಗಳು ಪೂರ್ಣಗೊಂಡ ನಂತರ, ವಿಮಾನವನ್ನು ಪುಣೆಯತ್ತ ಹಾರಲು ಅನುವುಮಾಡಿಕೊಡಲಾಯಿತು ಎಂದು ತಿಳಿಸಿದರು,(ಏಜನ್ಸೀಸ್).