ಪ್ರಧಾನಿ ಮೋದಿ & ತಾರಿಕ್ ರೆಹಮಾನ್
ಢಾಕಾ: ಬಾಂಗ್ಲಾದೇಶದ 13ನೇ ಸಾರ್ವತ್ರಿಕ ಸಂಸತ್ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತವಾದಿ ಪಕ್ಷ(ಬಿಎನ್‌ಪಿ) ಭರ್ಜರಿ ಗೆಲುವು ಸಾಧಿಸಿದೆ. ಆದರೆ ಅಧಿಕೃತವಾದ ಅಂತಿಮ ಫಲಿತಾಂಶ ಇನ್ನೂ ಬರಬೇಕಿದೆ. ಈ ನಡುವೆ ಮುಂದೆ ಪ್ರಧಾನಿಯಾಗಲಿರುವ ತಾರಿಕ್ ರೆಹಮಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ(PM Modi) ಅಭಿನಂದಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿ ಅಭಿನಂದಿಸಿರುವ ಪ್ರಧಾನಿ ಮೋದಿ, ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿಯನ್ನು ನಿರ್ಣಾಯಕ ಗೆಲುವಿನತ್ತ ಕೊಂಡೊಯ್ದ ತಾರಿಕ್ ರೆಹಮಾನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಗೆಲುವು ಬಾಂಗ್ಲಾದೇಶದ ಜನರು ನಿಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ.
ಭಾರತವು ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ. ನಮ್ಮ ಬಹುಮುಖಿ ಸಂಬಂಧಗಳನ್ನು ಬಲಪಡಿಸಲು ಮತ್ತು ನಮ್ಮ ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಶೇಖ್ ಹಸೀನಾ ಸರ್ಕಾರದ ಪತನದ ನಂತರ ನಡೆದ ಈ ಚುನಾವಣೆಯಲ್ಲಿ ಬಿಎನ್‌ಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಒಟ್ಟು 299 ಸಂಸದೀಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಬಿಎನ್‌ಪಿ ತನ್ನ ಮಿತ್ರಪಕ್ಷಗಳೊಂದಿಗೆ 211 ಸ್ಥಾನಗಳನ್ನು ಗೆದ್ದಿದೆ. ಬಿಎನ್‌ಪಿ ಅಧ್ಯಕ್ಷೆ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಬಿಎನ್‌ಪಿ ಬಹಿರಂಗಪಡಿಸಿದೆ. ಬಿಎನ್‌ಪಿ ಎದುರು ಸ್ಪರ್ಧಿಸಿದ್ದ ಜಮಾತ್-ಇ-ಇಸ್ಲಾಮಿ ಪಕ್ಷವು ಕೇವಲ 70 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ತಾರಿಕ್ ರೆಹಮಾನ್ ಯಾರು?
ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP)ಯ ಹಂಗಾಮಿ ಅಧ್ಯಕ್ಷರಾಗಿದ್ದವರು. 2008ರಲ್ಲಿ ಭ್ರಷ್ಟಾಚಾರ ಮತ್ತು ಇತರ ಆರೋಪಗಳ ಮೇಲೆ ಮಿಲಿಟರಿ-ಬೆಂಬಲಿತ ಸರ್ಕಾರದಿಂದ ಬಂಧನಕ್ಕೊಳಗಾಗಿ ನಂತರ ದೇಶ ತ್ಯಜಿಸಿ ಲಂಡನ್‌ಗೆ ತೆರಳಿದರು. ಅಲ್ಲಿಂದಲೇ ಪಕ್ಷದ ಕಾರ್ಯಗಳನ್ನು ನಿರ್ವಹಿಸುತ್ತಾ ಸುಮಾರು 17 ವರ್ಷಗಳ ಕಾಲ ಸ್ವಯಂ ಗಡಿಪಾರಿನಲ್ಲಿ ವಾಸಿಸಿದರು. ಶೇಖ್ ಹಸೀನಾ ಸರ್ಕಾರದ ಆಡಳಿತದಲ್ಲಿ ರಾಜಕೀಯ ದೌರ್ಜನ್ಯ ಮತ್ತು ಕೇಸುಗಳ ಭಯದಿಂದಾಗಿ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಆದರೆ, 2024ರಲ್ಲಿ ಹಸೀನಾ ಸರ್ಕಾರ ಪತನಗೊಂಡ ನಂತರ ಎಲ್ಲಾ ಕೇಸುಗಳು ಹಿಂತೆಗೆದುಕೊಳ್ಳಲ್ಪಟ್ಟಿದ್ದರಿಂದ 2025ರ ಡಿಸೆಂಬರ್ 25ರಂದು ಭಾರೀ ಸ್ವಾಗತದೊಂದಿಗೆ ಢಾಕಾಗೆ ಮರಳಿದರು, ಇದು ಬಾಂಗ್ಲಾದೇಶದ ರಾಜಕೀಯದಲ್ಲಿ ದೊಡ್ಡ ಬದಲಾವಣೆಯನ್ನು ತಂದು 2026ರ ಚುನಾವಣೆಯಲ್ಲಿ BNPಗೆ ಭರ್ಜರಿ ಜಯ ಸಾಧಿಸಲು ನೆರವಾಯಿತು, (ಏಜೆನ್ಸೀಸ್).