BNP thanks PM Modi: ಬಾಂಗ್ಲಾದ ವಿಪಕ್ಷ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಜಿಯಾ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವ ಸಂದೇಶಕ್ಕೆ ಬಿಎನ್‌ಪಿ ಪಕ್ಷ ಧನ್ಯವಾದ ತಿಳಿಸಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ಬಾಂಗ್ಲಾದೇಶದ ಸಾರ್ವಜನಿಕ ಜೀವನಕ್ಕೆ ಹಲವು ವರ್ಷಗಳಿಂದ ಕೊಡುಗೆ ನೀಡಿರುವ ಬೇಗಂ ಖಲೀದಾ ಜಿಯಾ ಅವರ ಆರೋಗ್ಯದ ಬಗ್ಗೆ ತಿಳಿದು ತೀವ್ರ ಕಳವಳ ವ್ಯಕ್ತಪಡಿಸಿ, ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದರು ಮತ್ತು ಭಾರತ ಅಗತ್ಯವಿರುವ ನೆರವನ್ನು ನೀಡುತ್ತದೆ ಎಂದಿದ್ದರು.
ಖಲೀದಾ ಜಿಯಾ ಅವರಿಗೆ ಏನಾಗಿದೆ...?
ಸುಮಾರು ಎಂಬತ್ತು ವರ್ಷ ವಯಸ್ಸಿನ ಖಲೀದಾ ಜಿಯಾ ಹೃದಯ ಸಮಸ್ಯೆ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಅವರನ್ನು ನವೆಂಬರ್ 23 ರಂದು ಢಾಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ನಾಯಕಿ ಜಿಯಾರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದ್ದು, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ತಜ್ಞರನ್ನು ಒಳಗೊಂಡ ವೈದ್ಯಕೀಯ ತಂಡಗಳು ಆರೋಗ್ಯದ ಬಗ್ಗೆ ಗಮನಹರಿಸಿವೆ. ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಬಿಎನ್‌ಪಿ ಉಪಾಧ್ಯಕ್ಷ ಅಹ್ಮದ್ ಆಜಂ ಖಾನ್, ತಮ್ಮ ನಾಯಕಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದಿದ್ದು, ಇಡೀ ರಾಷ್ಟ್ರ ಪ್ರಾರ್ಥನೆ ಮಾಡುವುದನ್ನು ಬಿಟ್ಟು ಬೇರೇನೂ ಸಾಧ್ಯವಿಲ್ಲ. ತಜ್ಞ ವೈದ್ಯರು ತಮ್ಮ ಕೈಲಾದಷ್ಟರ ಮಟ್ಟಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಆಸ್ಪತ್ರೆಗೆ ದಾಖಲಾದ ಬಳಿಕವು ಅವರ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದು, ಹಿರಿಯ ನಾಯಕಿ ಜಿಯಾ, ದೀರ್ಘಕಾಲದಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ, ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ತೊಂದರೆಗಳು, ಮಧುಮೇಹ, ಸಂಧಿವಾತ ಮತ್ತು ಕಣ್ಣಿನ ಸಮಸ್ಯೆಗಳು ಸೇರಿವೆ. ಲಂಡನ್‌ನಲ್ಲಿ ನಾಲ್ಕು ತಿಂಗಳುಗಳ ಕಾಲ ವೈದ್ಯಕೀಯ ಆರೈಕೆ ಪಡೆದ ಬಳಿಕ ಅವರು ಇದೇ ವರ್ಷದ ಮೇ 6 ರಂದು ಬಾಂಗ್ಲಾದೇಶಕ್ಕೆ ಮರಳಿದರು(ಏಜೆನ್ಸೀಸ್).