ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ 
ದೇಶ

ಮಹಾರಾಷ್ಟ್ರದಲ್ಲಿ ಬೆರಳಿನ ಶಾಯಿ ವಿವಾದ: ಚುನಾವಣಾ ಆಯೋಗದ ವಿರುದ್ಧ ಮತ್ತೆ ಗುಡುಗಿದ ರಾಹುಲ್​ ಗಾಂಧಿ! BMC Results

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರ ಪಾಲಿಕೆ ಮತ್ತು 29 ಪುರಸಭೆಗಳ ಚುನಾವಣೆ
  • ಶಾಯಿ ವಿವಾದವನ್ನು ಮುಂದಿಟ್ಟು, ಚುನಾವಣಾ ಆಯೋಗದ ವಿರುದ್ಧ ರಾಹುಲ್​ ಗಾಂಧಿ ಗುಡುಗು
  • ಆಯೋಗವು ನಾಗರಿಕರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದ ರಾಹುಲ್​ ಗಾಂಧಿ
ನವದೆಹಲಿ: ಭಾರಿ ಕೂತುಹಲ ಮೂಡಿಸಿರುವ ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರ ಪಾಲಿಕೆ ಮತ್ತು 29 ಪುರಸಭೆಗಳ ಚುನಾವಣೆ ಮತ ಎಣಿಕೆ ( BMC Results ) ನಡೆಯುತ್ತಿದ್ದು, ಕಾಂಗ್ರೆಸ್​ ಭಾರಿ ಹಿನ್ನಡೆ ಅನುಭವಿಸಿದೆ. ಇದರ ನಡುವೆ ಶಾಯಿ ವಿವಾದವನ್ನು ಮುಂದಿಟ್ಟು, ಚುನಾವಣಾ ಆಯೋಗದ ವಿರುದ್ಧ ಗುಡುಗಿರುವ ಕಾಂಗ್ರೆಸ್​ ಹಿರಿಯ ನಾಯಕ ರಾಹುಲ್​ ಗಾಂಧಿ, ಆಯೋಗವು ನಾಗರಿಕರನ್ನು ದಿಕ್ಕು ತಪ್ಪಿಸುತ್ತಿದೆ ಎಂದಿದ್ದಾರೆ. 
ಮುಂಬೈ ಮಹಾನಗರ ಪಾಲಿಕೆ ಮತ್ತು 29 ಪುರಸಭೆಗಳ ಚುನಾವಣೆಗಳಿಗೆ ಗುರುವಾರ (ಜ.15) ಮತದಾನ ನಡೆಯಿತು. ಈ ವೇಳೆ ಮತ ಹಾಕಿ ಬಂದ ಮತದಾರರು ಅಸಿಟೋನ್‌ನಂತಹ ರಾಸಾಯನಿಕಗಳನ್ನು ಬಳಸಿ, ತಮ್ಮ ಬೆರಳಿಗೆ ಹಾಕಿದ ಶಾಯಿಯನ್ನು ಹೇಗೆ ತೆಗೆಯಬಹುದು ಎಂದು ತೋರಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ವಿಡಿಯೋಗಳು ವೈರಲ್​ ಆಗುತ್ತಿದ್ದಂತೆ ವಿಪಕ್ಷಗಳು ನಕಲಿ ಮತದಾನದ ಆರೋಪಗಳನ್ನು ಮಾಡಿದರು. ಆದರೆ, ಈ ಆರೋಪಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಳ್ಳಿಹಾಕಿದರು.
ಮತದಾರರು ತಮ್ಮ ಬೆರಳಿನ ಮೇಲಿನ ಗುರುತನ್ನು ಸುಲಭವಾಗಿ ತೆಗೆದುಹಾಕಬಹುದು. ಇದು ನಕಲಿ ಮತದಾನಕ್ಕೆ ಅನುವು ಮಾಡಿಕೊಡುತ್ತದೆ ಎಂದು ವಿಪಕ್ಷದ ನಾಯಕರು ಆರೋಪಿಸಿದ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ (SEC) ಗುರುವಾರ (ಜ.15) ಸಂಜೆ ಪುರಸಭೆಗಳ ಚುನಾವಣೆಗಳಲ್ಲಿ ಬಳಸಿದಿ ಮಾರ್ಕರ್ ಪೆನ್ನುಗಳಲ್ಲಿನ 'ಅಳಿಸಲಾಗದ' ಶಾಯಿಯ ಗುಣಮಟ್ಟದ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿಯೂ ಹೇಳಿದೆ.
ಈ ಘಟನೆಗಳ ಬೆನ್ನಲ್ಲೇ ತಮ್ಮ ಎಕ್ಸ್​ ಖಾತೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಮತದಾರರು ಬೆರಳಿನ ಶಾಯಿ ಗುರುತುಗಳನ್ನು ಅಳಿಸುವ ಬಗ್ಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾದ ಮಾಧ್ಯಮ ವರದಿಯನ್ನು ರಾಹುಲ್​ ಗಾಂಧಿ ತಮ್ಮ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಚುನಾವಣಾ ಆಯೋಗ ನಾಗರಿಕರನ್ನು ದಿಕ್ಕು ತಪ್ಪಿಸುತ್ತಿದೆ ಮತ್ತು ಜನರನ್ನು ವಂಚಿಸುತ್ತಿದ್ದು, ನಮ್ಮ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಹೇಗೆ ಕುಸಿಯುತ್ತಿದೆ ನೋಡಿ ಎಂದು ಕಿಡಿಕಾರಿದ್ದಾರೆ.
ಇನ್ನು ಈ ವಿವಾದವನ್ನು ಗಮನದಲ್ಲಿಟ್ಟುಕೊಂಡು, ಎಸ್‌ಇಸಿ ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಗಳಿಗೆ ಮಾರ್ಕರ್ ಪೆನ್ನುಗಳನ್ನು ಬಳಸುವುದಿಲ್ಲ, ಬದಲಿಗೆ ಕರ್ನಾಟಕ ಸರ್ಕಾರದ ಕಂಪನಿಯಾದ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಉತ್ಪಾದಿಸುವ ಸಾಂಪ್ರದಾಯಿಕ ಶಾಯಿಯನ್ನು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬಳಸುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ಹೇಳಿದ್ದಾರೆ.
ಅಂದಹಾಗೆ, ಮುಂಬೈನ ಪಾಲಿಕೆಯ 227 ವಾರ್ಡ್​ಗಳು ಸೇರಿ ಮಹಾರಾಷ್ಟ್ರ 28 ಪುರಸಭೆಗಳ 893 ವಾರ್ಡ್​ಗಳ 2,869 ಸ್ಥಾನಗಳಿಗೆ ನಿನ್ನೆ ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕವಾಗಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಸಾಧಿಸಿದೆ. ಠಾಕ್ರೆ ಬ್ರದರ್ಸ್​ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್​ ಸ್ಥಿತಿಯೂ ಹೀನಾಯವಾಗಿದೆ, (ಏಜೆನ್ಸೀಸ್​).