BMC Elections | ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಏಕನಾಥ್ ಶಿಂಧೆ
ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಟಿಕೆಟ್ ಹಂಚಿಕೆಯ ವಿಷಯವಾಗಿ ಹಲವು ದಿನಗಳ ಕಾಲ ನಡೆದ ಹಗ್ಗಜಗ್ಗಾಟದ ಬಳಿಕ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಮಹಾಯುತಿಯ ಮಿತ್ರಪಕ್ಷಗಳ ನಡುವೆ ನಡೆದ ಮಾತುಕತೆಯ ಸೂತ್ರದ ಪ್ರಕಾರ, ಕೇಸರಿ ಪಾಳಯ 140 ಶಿಂಧೆ ಸೇನೆ 87 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ವರದಿಯಾಗಿದೆ.
ಟಿಕೆಟ್ ಹಂಚಿಕೆ ವಿಷಯವಾಗಿ ಮೈತ್ರಿಕೂಟದ ಪಾಲುದಾರ ಪಕ್ಷಗಳು ನಡುವೆ ಮ್ಯಾರಥಾನ್ ಮೀಟಿಂಗ್ ನಡೆದಿದ್ದು, ಅದಾದ ಬಳಿಕವೇ ಈ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇತ್ತ 200 ಸ್ಥಾನಗಳಿಗೆ ಸೀಟು ಹಂಚಿಕೆ ಮಾತುಕತೆಗಳು ಈಗಾಗಲೇ ಪೂರ್ಣಗೊಂಡಿದ್ದು, 27 ಸ್ಥಾನಗಳ ಕುರಿತಾಗಿ ಚರ್ಚೆ ಮುಂದುವರೆದಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಶಿಂಧೆ ಸೇನಾಗೆ ಫಡ್ನವೀಸ್ ಬೆಂಬಲ...
ಮಹಾಯುತಿಯಲ್ಲಿ ಅಸಮಾಧಾನವಿದೆ ಎನ್ನುವ ಸುದ್ದಿಗಳ ನಡುವೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಂತಹ ಊಹಾಪೋಹದ ಸುದ್ದಿಗಳನ್ನು ತಳ್ಳಿಹಾಕಿದ್ದು, ಶಿವಸೇನೆಗೆ ಬೆಂಬಲವಾಗಿ ನಿಂತಿದ್ದಾರೆ. ಶಿಂಧೆ ನೇತೃತ್ವದ ಶಿವಸೇನೆ ವಿರುದ್ಧ ಯಾವುದೇ ರೀತಿಯ ಟೀಕೆ, ಟಿಪ್ಪಣಿ ಮಾಡದಂತೆ ಕಟ್ಟಪ್ಪಣೆ ಹೊರಡಿಸಿರುವ ಸಿಎಂ, ಬಿಜೆಪಿ ಮತ್ತು ಶಿವಸೇನೆ ಒಗ್ಗಟ್ಟಾಗಿದೆ ಎನ್ನುವ ತಮ್ಮ ಮಾತನ್ನು ಪುನರುಚ್ಛರಿಸಿದ್ದು, ಮತ್ತೊಮ್ಮೆ ಮೈತ್ರಿಯನ್ನು ಸಾರ್ವಜನಿಕವಾಗಿ ಘೋಷಿಸುವ ಅಗತ್ಯವಿಲ್ಲ ಎಂದಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ಒಗ್ಗಟ್ಟಾಗಿವೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಜಿಹಾದಿ ಮನಸ್ಥಿತಿಯನ್ನು ಹತ್ತಿಕ್ಕಲು ಸ್ಪರ್ಧೆ
ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಎಂ ಫಡ್ನವೀಸ್, ಕೇಸರಿ ಪಕ್ಷವು ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಜನರಿಗಾಗಿ ಹೋರಾಡುತ್ತಿದೆ. ಜಿಹಾದಿ ಮನಸ್ಥಿತಿಯನ್ನು ಹತ್ತಿಕ್ಕಲು ನಾವು ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಪ್ರವೇಶಿಸಿದ್ದೇವೆ. ಜನವರಿ 16 ರಂದು ಬಿಎಂಸಿ ಮೇಲೆ ಮಹಾಯುತಿಯ ಕೇಸರಿ ಧ್ವಜವನ್ನು ಹಾರಿಸಬೇಕಾಗಿದೆ ಎಂದು ಹೇಳಿದರು.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಹಾಯುತಿಯ ಪ್ರಮುಖ ಪಾಲುದಾರರಾಗಿ ಮುಂದುವರೆಯುತ್ತಾರೆ ಎಂದಿರುವ ಫಡ್ನವೀಸ್, ಮೂರು ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು. ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ಎಲ್ಲರ ಬಯಕೆ, ಆದರೆ ಕೆಲವೇ ಜನರಿಗೆ ಟಿಕೆಟ್ ನೀಡಲು ಸಾಧ್ಯ. ಟಿಕೆಟ್ ಸಿಗಲಿ ಅಥವಾ ಸಿಗದಿರಲಿ, ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡುವತ್ತ ಗಮನಹರಿಸಬೇಕು ಎಂದರು.
ಎಲ್ಲಾ ಪುರಸಭೆಗಳ ಜೊತೆಗೆ ಜನವರಿ 15 ರಂದು ಬಿಎಂಸಿಗೆ ಮತದಾನ ನಡೆಯಲಿದೆ. ಮರುದಿನ ಜನವರಿ 16 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್).