Triple Murder  
ದೇಶ

Triple Murder: ಬರ್ತ್‌ಡೇ ಪಾರ್ಟಿಯಲ್ಲಿ ಮುಖಕ್ಕೆ ಕೇಕ್ ಹಚ್ಚಿದಕ್ಕೆ, ಸ್ನೇಹಿತನಿಂದಲೇ ಮೂವರ ಗುಂಡಿಕ್ಕಿ ಹತ್ಯೆ!

ಲಕ್ನೋ: ಸಂಭ್ರಮದಿಂದ ನಡೆಯಬೇಕಿದ್ದ ಹುಟ್ಟುಹಬ್ಬದ ಪಾರ್ಟಿಯೊಂದು ಕ್ಷಣಾರ್ಧದಲ್ಲಿ ಸ್ಮಶಾನ ಸದೃಶ್ಯವಾಗಿ ಬದಲಾದ ಭೀಕರ(Triple Murder) ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಖುರ್ಜಾದಲ್ಲಿ ನಡೆದಿದೆ. ಮುಖಕ್ಕೆ ಕೇಕ್ ಹಚ್ಚುವ ವಿಚಾರದಲ್ಲಿ ಸ್ನೇಹಿತರ ನಡುವೆ ಉಂಟಾದ ಸಣ್ಣ ವಿವಾದ ವಿಕೋಪಕ್ಕೆ ತಿರುಗಿ, ಮೂವರು ಯುವಕರನ್ನು ಗುಂಡಿಕ್ಕಿ ಬಲಿ ಪಡೆದಿದೆ. ಒಂದೇ ಕುಟುಂಬದ ಮೂವರು ಸದಸ್ಯರು ಹತ್ಯೆಯಾಗಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಜಿಮ್‌ನಲ್ಲಿ ನಡೆದ ಅವಾಂತರ

ಖುರ್ಜಾ ಪ್ರದೇಶದ ಸುಭಾಷ್ ರಸ್ತೆಯಲ್ಲಿರುವ 'ಆರ್‌.ಜೆ.ಎಸ್ ಫಿಟ್‌ನೆಸ್ ಜಿಮ್'ನಲ್ಲಿ ಶನಿವಾರ ತಡರಾತ್ರಿ ಜೀತು ಸೈನಿ ಎಂಬುವವರ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿತ್ತು. ಕೇಕ್ ಕತ್ತರಿಸಿದ ನಂತರ ಸ್ನೇಹಿತರೆಲ್ಲರೂ ಸೇರಿ ಜೀತು ಸೈನಿಯ ಮುಖಕ್ಕೆ ಕೇಕ್ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಮದ್ಯದ ಅಮಲಿನಲ್ಲಿದ್ದ ಯುವಕರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ ಎನ್ನಲಾಗಿದೆ.

ಪರವಾನಗಿ ಪಿಸ್ತೂಲಿನಿಂದ ಗುಂಡಿನ ದಾಳಿ

ಗಲಾಟೆಯ ನಂತರ ಆಕ್ರೋಶಗೊಂಡ ಆರೋಪಿಯು ಸ್ಥಳದಿಂದ ನಿರ್ಗಮಿಸಿದ್ದನು. ಆದರೆ, ಸುಮಾರು ಒಂದು ಗಂಟೆಯ ನಂತರ ತನ್ನ ಸಹಚರರೊಂದಿಗೆ ವಾಪಸ್ ಬಂದ ಆತ, ತನ್ನ ಸಹೋದರನ ಪರವಾನಗಿ ಹೊಂದಿದ ಪಿಸ್ತೂಲಿನಿಂದ ಜಿಮ್‌ನಲ್ಲಿದ್ದವರ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿದ್ದಾನೆ. ಈ ದಾಳಿಯಲ್ಲಿ ಅಮರ್‌ದೀಪ್ (35), ಮನೀಶ್ (32) ಮತ್ತು ಆಕಾಶ್ (19) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ 19 ವರ್ಷದ ಆಕಾಶ್‌ನನ್ನು ಬೆನ್ನಟ್ಟಿದ ಆರೋಪಿ, ಆತನ ತಲೆಗೆ ಗುಂಡಿಕ್ಕಿ ಕ್ರೌರ್ಯ ಮೆರೆದಿದ್ದಾನೆ.

ಒಂದೇ ಮನೆಯಲ್ಲಿ ಮೂರು ಶವಗಳು

ಮೃತರಲ್ಲಿ ಮನೀಶ್ ಮತ್ತು ಅಮರ್‌ದೀಪ್ ಕೃಷಿಕರಾಗಿದ್ದು, ಆಕಾಶ್ ಕೆಲಸದ ಹುಡುಕಾಟದಲ್ಲಿದ್ದನು. ಮನೀಶ್‌ಗೆ ಎರಡು ವರ್ಷದ ಪುಟ್ಟ ಹೆಣ್ಣು ಮಗಳಿದ್ದಾಳೆ. ಒಂದೂವರೆ ವರ್ಷದ ಹಿಂದೆಯಷ್ಟೇ ಅಮರ್‌ದೀಪ್ ಅವರ ಅಣ್ಣ ಮೃತಪಟ್ಟಿದ್ದು, ಈಗ ಈ ಘಟನೆಯಿಂದ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಭಾನುವಾರ ಮೂವರ ಶವಗಳು ಮನೆಗೆ ಬಂದಾಗ ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿತ್ತು.

ಪೊಲೀಸರ ತನಿಖೆ ಚುರುಕು

ಘಟನಾ ಸ್ಥಳಕ್ಕೆ ಡಿಐಜಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಹಳೆಯ ದ್ವೇಷವೇ ಈ ಕೃತ್ಯಕ್ಕೆ ಪ್ರೇರಣೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಈಗಾಗಲೇ 15ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಮುಖ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ,(ಏಜೆನ್ಸೀಸ್​).