- 10 ಮಿನಿಟ್ ಡೆಲಿವರಿ ಫೀಚರ್ ಅನ್ನು ಕೈಬಿಡಲು ಇ-ಕಾರ್ಮರ್ಸ್ ಕಂಪನಿ ಬ್ಲಿಂಕಿಟ್ ಮುಂದಾಗಿದೆ
- ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದ ಬಳಿಕ ಈ ಕ್ರಮಕ್ಕೆ ಬ್ಲಿಂಕಿಟ್ ಸೇರಿ ಇತರೆ ಕಂಪನಿಗಳು ಮುಂದಾಗಿವೆ
- ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಡೆಲಿವರಿ ಏಜೆಂಟ್ಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು
ನವದೆಹಲಿ: ಆರ್ಡರ್ ಮಾಡಿದ ಕೂಡಲೇ ಕೇವಲ 10 ನಿಮಿಷದಲ್ಲಿ ಪದಾರ್ಥಗಳನ್ನು ಗ್ರಾಹಕರ ಮನೆಗೆ ತಂದುಕೊಡುವಂತಹ 10 ಮಿನಿಟ್ ಡೆಲಿವರಿ ಫೀಚರ್ ಅನ್ನು ಕೈಬಿಡಲು ಇ-ಕಾರ್ಮರ್ಸ್ ಕಂಪನಿ ಬ್ಲಿಂಕಿಟ್ ಮುಂದಾಗಿದೆ. ಗಿಗ್ ಕಾರ್ಮಿಕರ ( Gig Workers ) ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದ ಬಳಿಕ ಇಂಥದ್ದೊಂದು ಕ್ರಮಕ್ಕೆ ಬ್ಲಿಂಕಿಟ್, ಸ್ವಿಗ್ಗಿ ಸೇರಿದಂತೆ ಇತರೆ ಇ ಕಾಮರ್ಸ್ ಕಂಪನಿಗಳು ಮುಂದಾಗಿವೆ.
ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಇ-ಕಾಮರ್ಸ್ ವೇದಿಕೆಯ ಡೆಲಿವರಿ ಏಜೆಂಟ್ಗಳು ದೇಶಾದ್ಯಂತ ಪ್ರತಿಭಟನೆ ನಡೆಸಿ, ಕೆಲಸದ ಪರಿಸ್ಥಿತಿಗಳು, ಉತ್ಪನ್ನಗಳನ್ನು ಡೆಲಿವರಿ ಮಾಡುವಲ್ಲಿನ ತೀವ್ರ ಒತ್ತಡ ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ಬಗ್ಗೆ ಧ್ವನಿ ಎತ್ತಿದ ಬಳಿಕ ಇಂಥದ್ದೊಂದು ಕ್ರಮ ತೆಗೆದುಕೊಳ್ಳಲಾಗಿದೆ. ಈ ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರ ಪಾತ್ರ ಪ್ರಮುಖವಾಗಿದೆ.
ಈ ಒಂದು ಕ್ರಮದಿಂದಾಗಿ ಬ್ಲಿಂಕಿಟ್ ತನ್ನ ಆನ್ಲೈನ್ ವೇದಿಕೆಯಲ್ಲಿ "10 ಮಿನಿಟ್ ಡೆಲಿವರಿ" ಎಂಬ ಬ್ರ್ಯಾಂಡಿಂಗ್ ಅನ್ನು ತೆಗೆದುಹಾಕಲಿದೆ. ಇದು ಕೇವಲ ವೆಬ್ಸೈಟ್ಗೆ ಮಾತ್ರ ಸೀಮಿತವಾಗುವುದಿಲ್ಲ, ಜಾಹೀರಾತುಗಳು ಮತ್ತು ಸಾಮಾಜಿಕ ಜಾಲತಾಣಗಳಿಗೂ ಅನ್ವಯಿಸುತ್ತದೆ.
ಇದೇ ವಿಚಾರವಾಗಿ ಮಾಂಡವಿಯಾ ಅವರು ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೋ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಚರ್ಚೆಯ ಸಮಯದಲ್ಲಿ, ಸಚಿವರು, ಕಂಪನಿಗಳು ತಮ್ಮ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಸಂವಹನದಿಂದ ನಿಗದಿತ ವಿತರಣಾ ಸಮಯದ ಮಿತಿಗಳನ್ನು ತೆಗೆದುಹಾಕುವಂತೆ ಕೇಳಿಕೊಂಡರು. ಆದರೆ, ಅಂಗಡಿಗಳು ಸಮೀಪ ಇರುವುದರಿಂದ ಡೆಲಿವರಿ ಸಾಧ್ಯವೆಂದು ಕಂಪನಿಗಳು ವಾದಿಸಿದವು. ಆದರೆ, 10 ಮಿನಿಟ್ ಡೆಲಿವರಿ ಎಂಬುದು ಕಾರ್ಮಿಕರ ಮೇಲೆ ಒತ್ತಡವನ್ನು ಹೆಚ್ಚಿಸಬಹುದು ಎಂಬ ಅಂಶವನ್ನು ಸಚಿವರು ಉಲ್ಲೇಖಿಸಿದರು.
ಅಂತಿಮವಾಗಿ ಎಲ್ಲಾ ಕಂಪನಿಗಳು ತಮ್ಮ ಬ್ರ್ಯಾಂಡ್ ಜಾಹೀರಾತುಗಳು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳಿಂದ 10 ಮಿನಿಟ್ ಡೆಲಿವರಿ ಭರವಸೆ ಸಂದೇಶಗಳನ್ನು ತೆಗೆದುಹಾಕುವುದಾಗಿ ಸರ್ಕಾರಕ್ಕೆ ಭರವಸೆ ನೀಡಿವೆ ಎಂದು ಮೂಲಗಳು ತಿಳಿಸಿವೆ, (ಏಜೆನ್ಸೀಸ್).