ಮಗ ಅಕ್ಷತ್​ ಪ್ರತಾಪ್ ಸಿಂಗ್​ ಮತ್ತು ತಂದೆ ಮಾನ್ವೇಂದ್ರ ಸಿಂಗ್ ( Lucknow father Death Case ) 
ದೇಶ

ಡಾಕ್ಟರ್​ ಆಗು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ: ಬ್ಲಿಂಕಿಟ್​ನಿಂದ ಚಾಕು ಖರೀದಿ, ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು! Lucknow father Death Case

ಪ್ರಮುಖ ಮುಖ್ಯಾಂಶಗಳು

  • ಲಖನೌದಲ್ಲಿ ಮಗನಿಂದಲೇ ಹತ್ಯೆಗೀಡಾದ ಪ್ರಕರಣವು ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ
  • ತನಿಖೆಯನ್ನು ಕೈಗೆತ್ತಿಕೊಂಡಿರುವ ಪೋಲಿಸರಿಗೆ ವಿಚಾರಣೆ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಸಿಕ್ಕಿವೆ
  • ಬ್ಲಿಂಕಿಟ್​ನಲ್ಲಿ ಚಾಕು ಖರಿದೀಸಿ, ತಂದೆಯ ದೇಹನ್ನು ತುಂಡು ತುಂಡಾಗಿ ಕತ್ತರಿಸಿದನು ಅಕ್ಷತ್​
Lucknow father Death Case : ಉತ್ತರ ಪ್ರದೇಶದ ಲಖನೌ ಮೂಲದ ಉದ್ಯಮಿಯೊಬ್ಬರು ತಮ್ಮ ಮಗನಿಂದಲೇ ಹತ್ಯೆಗೀಡಾದ ಪ್ರಕರಣವು ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ತನಿಖೆಯನ್ನು ಕೈಗೆತ್ತಿಕೊಂಡಿರುವ ಪೋಲಿಸರಿಗೆ ವಿಚಾರಣೆ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಸಿಕ್ಕಿವೆ.
ಉದ್ಯಮಿ ಮಾನ್ವೇಂದ್ರ ಸಿಂಗ್ ಅವರನ್ನು ಅವರ ಮಗನಾದ ಅಕ್ಷತ್ ಪ್ರತಾಪ್ ಸಿಂಗ್​ನು ಗುಂಡಿಕ್ಕಿ ಕೊಂದನು. ಬಳಿಕ ಬ್ಲಿಂಕಿಟ್​ನಲ್ಲಿ ಚಾಕು ಖರಿದೀಸಿ, ತಂದೆಯ ದೇಹನ್ನು ತುಂಡು ತುಂಡಾಗಿ ಕತ್ತರಿಸಿದನು. ಇದಾದ ಬಳಿಕ ಆ ತುಂಡುಗಳನ್ನು ಲಖನೌದಲ್ಲಿರುವ ತಮ್ಮ ನಿವಾಸದಲ್ಲಿನ ನೀಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುಂಬಿಸಿಟ್ಟಿದ್ದ. ಒಂದಿಷ್ಟು ತುಂಡುಗಳನ್ನು ಬೇರೆಡೆ ಎಸೆದು ಬಂದಿದ್ದ. ಕೊಲೆ ನಡೆದ ಐದು ದಿನಗಳ ನಂತರ ಪೊಲೀಸ್​ ತನಿಖೆಯ ವೇಳೆ ಪಾಪಿ ಕೃತ್ಯ ಬಯಲಾಗಿದೆ. ಇದರ ನಡುವೆ ಈ ಪ್ರಕರಣವನ್ನು ಮುಚ್ಚಿಹಾಕಲು ಹಾಗೂ ಸಾಕ್ಷ್ಯಗಳನ್ನು ಅಳಿಸಿಹಾಕಲು ಪ್ರಯತ್ನಿಸುವ ಮೂಲಕ ಸಂಬಂಧಿಕರು ಹಾಗೂ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ ಸಂಗತಿಯೂ ಬಯಲಾಗಿದೆ.
ಪರವಾನಗಿ ಪಡೆದು ಲಖನೌದಲ್ಲಿ ಮದ್ಯದ ಅಂಗಡಿಗಳನ್ನು ನಡೆಸುತ್ತಿದ್ದ ಮನ್ವೇಂದ್ರ ಸಿಂಗ್, ತಮ್ಮ ಮಗನ ಮೇಲೆ ವೈದ್ಯಕೀಯ ಅಧ್ಯಯನದತ್ತ ಗಮನಹರಿಸಲು ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಒತ್ತಡ ಹೇರುತ್ತಿದ್ದರು ಎಂದು ವರದಿಯಾಗಿದೆ. ಆದರೆ, ಅಕ್ಷತ್​ಗೆ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುವದರಲ್ಲಿ ಆಸಕ್ತಿ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ತಂದೆ ಹಾಗೂ ಮಗನ ನಡುವೆ ಆಗಾಗ ಕಿತ್ತಾಟ ನಡೆಯುತ್ತಲೇ ಇತ್ತು. ಕೊಲೆಗೂ ಮೊದಲು ತಂದೆ ಮತ್ತು ಮಗ ಜಗಳವಾಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕೊಲೆಗೆ ಮೊದಲೇ ಸಂಚು ರೂಪಿಸಿದ್ದ ಮಗ, ಅದಕ್ಕೆ ಬೇಕಾಗಿದ್ದ ಎಲ್ಲ ಸಲಕರಣೆಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ. ಅಲ್ಲದೆ, ನಿರೀನ ಡ್ರಮ್​ ಅನ್ನು ಆಫ್‌ಲೈನ್‌ನಲ್ಲಿ ಖರೀದಿಸಿದ್ದ. ಪೊಲೀಸ್ ಮೂಲಗಳ ಪ್ರಕಾರ, ಕೊಲೆ ನಡೆಯುವ ಒಂದು ದಿನದ ಮೊದಲು ಬ್ಲಿಂಕಿಟ್ ಮೂಲಕ ಎರಡು ಚಾಕುಗಳನ್ನು ಆರ್ಡರ್ ಮಾಡಿದ್ದ ಮತ್ತು ಸ್ವತಃ ಮಾರುಕಟ್ಟೆಗೆ ಹೋಗಿ ಒಂದು ಗರಗಸ ಮತ್ತು ನೀಲಿ ಪ್ಲಾಸ್ಟಿಕ್ ಡ್ರಮ್ ಅನ್ನು ಖರೀದಿಸಿದ್ದ. ಬಳಿಕ, ಅವುಗಳನ್ನು ಬಳಸಿಕೊಂಡು ಕೃತ್ಯ ಎಸಗಿರುವುದಾಗಿ ಆರೋಪಿ ಅಕ್ಷತ್, ಪೊಲೀಸ್​ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಹಿರಿಯ ಪೊಲೀಸ್ ಅಧಿಕಾರಿ ಅಭಯ್ ಪ್ರತಾಪ್ ಮಾಲ್ ಅವರ ನೇತೃತ್ವದಲ್ಲಿ ಆರೋಪಿಯನ್ನು ಸ್ಥಳ ಪರಿಶೀಲನೆಗಾಗಿ ಅವರ ನಿವಾಸಕ್ಕೆ ಕರೆದೊಯ್ದು, ಅಲ್ಲಿ ಘಟನೆಗೆ ಸಂಭಂಧಿಸಿದಂತೆ ಸ್ಥಳ ಮಹಜರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಗುಂಡೇಟಿನಿಂದ ಭಾರೀ ರಕ್ತಸ್ರಾವವಾಗಿ, ಕಂಬಳಿಗಳು, ಬೆಡ್‌ಶೀಟ್‌ಗಳು ಮತ್ತು ದಿಂಬುಗಳು ಕಲೆಯಾಗಿದ್ದರಿಂದ ಆರೋಪಿ ಅಕ್ಷತ್ ಅವುಗಳನ್ನು ಚೀಲಗಳಲ್ಲಿ ಪ್ಯಾಕ್ ಮಾಡಿ, ಸಾಕ್ಷ್ಯವನ್ನು ನಾಶಮಾಡುವ ಪ್ರಯತ್ನದಲ್ಲಿ ಅವುಗಳನ್ನು ಸುಟ್ಟು ಹಾಕಿದ್ದಾನೆ. ತನಿಖಾಧಿಕಾರಿಗಳು ಆ ಸ್ಥಳದಲ್ಲಿ ಸಿಕ್ಕ ಭಾಗಶಃ ಸುಟ್ಟ ಬಟ್ಟೆಗಳು ಮತ್ತು ಬೂದಿಯನ್ನು ವಶಪಡಿಸಿಕೊಂಡು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.

ಗೋಡೆಗಳಿಗೆ ಬಣ್ಣ

ಫೆಬ್ರವರಿ 20ರ ಮುಂಜಾನೆ ಗುಂಡು ಹಾರಿಸಿದ ತಕ್ಷಣ ಕೋಣೆಯ ಕೆಲವು ಭಾಗಗಳು ರಕ್ತ ಸಿಕ್ತವಾಗಿದ್ದವು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ರಕ್ತದ ಕಲೆಗಳನ್ನು ಮರೆಮಾಚಲು ಆರೋಪಿ ಅಕ್ಷತ್​, ಬಣ್ಣವನ್ನು ಖರೀದಿಸಿ ಗೋಡೆಯ ಭಾಗಗಳಿಗೆ ಬಣ್ಣ ಬಳಿದಿದ್ದಾನೆ ಎಂದು ತಿಳಿಸಿದ್ದಾರೆ.

ತಂದೆಯ ಹುಡುಕಾಟದ ನಾಟಕ

ತಂದೆಯ ಹತ್ಯೆಯ ನಂತರ, ಆರೊಪಿ ಅಕ್ಷತ್ "ಪಾಪಾ ಲೌತ್ ಆವೋ" ಎಂಬ ಶೀರ್ಷಿಕೆಯಡಿ ವಾಟ್ಸಾಪ್ ಗ್ರೂಪ್​ ಅನ್ನು ರಚಿಸಿ, ಮನ್ವೇಂದ್ರ ಸಿಂಗ್ ಅವರ ಸ್ನೇಹಿತರು ಮತ್ತು ಸಹಚರರನ್ನು ಸೇರಿಸಿ, ತನ್ನ ತಂದೆಯನ್ನು ಮನೆಗೆ ಹಿಂತಿರುಗುವಂತೆ ಭಾವನಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡಿ, ತನ್ನ ಮೇಲೆ ಅನುಮಾನ ಬಾರದಂತೆ ಎಲ್ಲರ ಗಮನವನ್ನು ಬೇರೆಡೆ ಸೆಳೆದಿದ್ದ ಎನ್ನಲಾಗ್ತಿದೆ.
ಪೊಲೀಸ್ ಮೂಲಗಳು ಹೇಳುವಂತೆ, ಅಕ್ಷತ್​ ತನ್ನ ಸ್ನೇಹಿತರ ಜೊತೆ ಸೇರಿ ತನ್ನ ತಂದೆಯನ್ನು ಹುಡುಕುವ ನಾಟಕವಾಡುತ್ತಿದ್ದ. ಈಗ ವಾಟ್ಸಾಪ್​ ಗ್ರೂಪ್​ನ ಮೆಸೇಜ್​ ಹಾಗೂ ಚಾಟ್​ ಹಿಸ್ಟರಿಗಳನ್ನೇ ಡಿಜಿಟಲ್ ದಾಖಲೆಗಳೆಂದು ಪರಿಗಣಿಸಿ ಪೋಲಿಸರು ತನಿಖೆ ಮುಂದುವರೆಸಿದ್ದಾರೆ.

ಸಹೋದರಿಯ ಪಾತ್ರವೇ ಕೇಂದ್ರ ಬಿಂದು

ಅಕ್ಷತ್ ಅವರ ಸಹೋದರಿ ಕೃತಿ ಪಾತ್ರವು ತನಿಖೆಯಲ್ಲಿ ಪ್ರಮುಖ ಕೇಂದ್ರಬಿಂದುವಾಗಿದೆ. ಫೆಬ್ರವರಿ 20ರ ಮುಂಜಾನೆ ಗುಂಡಿನ ದಾಳಿ ನಡೆದಾಗ ಅವಳು ಕೋಣೆಯಲ್ಲಿದ್ದಳು ಮತ್ತು ಘಟನೆಯನ್ನು ನೇರವಾಗಿ ನೋಡಿದ್ದಳು. ಆದರೆ, ಸುಮಾರು 24 ಗಂಟೆಗಳ ಕಾಲ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಪೊಲೀಸರು ಸುಮಾರು 40 ನಿಮಿಷಗಳ ಕಾಲ ನಿರಂತರ ವಿಚಾರಣೆ ನಡೆಸಿದ ನಂತರ ಆಕೆ ಬಾಯ್ಬಿಟ್ಟಿದ್ದಾಳೆ. ಆಕೆಯ ಮೌನವು ಹತ್ಯೆಯ ನಂತರದ ಬೆದರಿಕೆಯಿಂದ ಹುಟ್ಟಿಕೊಂಡಿದೆಯೇ ಅಥವಾ ಅಪರಾಧದ ಸುತ್ತಲಿನ ಘಟನೆಗಳ ಬಗ್ಗೆ ಆಕೆಗೆ ಮೊದಲೇ ಅರಿವಿತ್ತೋ ಎಂಬುದು ವಿಚಾರಣೆಯಿಂದ ತಿಳಿದು ಬರಬೇಕಿದೆ, (ಏಜೆನ್ಸೀಸ್​).