Blinkit delivery agent: ಸಾಮಾನ್ಯವಾಗಿ ಬೆಳಗಿನ ಜಾವ 3 ಗಂಟೆಗೆ ಯಾರಾದರೂ ಆರ್ಡರ್ ಮಾಡಿದರೆ ಅದು ಬಿರಿಯಾನಿಯೋ ಅಥವಾ ಐಸ್‌ಕ್ರೀಮ್ ಆಗಿರುತ್ತೆ. ಆದರೆ, ಪುಣೆಯ ಈ ವ್ಯಕ್ತಿ ಆರ್ಡರ್ ಮಾಡಿರುವುದು ತನಗಾಗಿ ಅಲ್ಲ. ಬದಲಿಗೆ ತನ್ನನ್ನು ಲಾಕ್ ಮಾಡಿದ್ದ ಬಾಗಿಲಿಗಾಗಿ! ಹೌದು ಪುಣೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ಬೆಳಿಗ್ಗೆ 3 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನೊಂದಿಗೆ ಬಾಲ್ಕನಿಯಲ್ಲಿ ಕುಳಿತು ಮಾತನಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಗಿಲು ಲಾಕ್ ಆಗಿತ್ತು.
ಈ ಸಮಯದಲ್ಲಿ ಮನೆಯೊಳಗೆ ಹೋಗಲು ಬೇರೆ ದಾರಿಯಿಲ್ಲದೇ, ಇಬ್ಬರೂ ಅಸಹಾಯಕರಾಗಿ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಅವರು ಭಯಭೀತರಾಗುವ ಬದಲಿಗೆ ಅನಿರೀಕ್ಷಿತ ಪರಿಹಾರವನ್ನು ಕಂಡುಕೊಂಡರು. ಅದೇನಂತಿರಾ? ಆ ವ್ಯಕ್ತಿ ಬ್ಲಿಂಕಿಟ್‌ನಲ್ಲಿ ಒಂದು ವಸ್ತುವನ್ನು ಆರ್ಡರ್ ಮಾಡಿ, ನಂತರ ಏಜೆಂಟ್‌ನ ಸಹಾಯವನ್ನು ಕೋರಿ ಬಾಗಿಲನ್ನು ತೆರೆಸಿಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ಕ್ಲಿಪ್‌ನಲ್ಲಿ ಇಬ್ಬರು ಯುವಕರು ಬಾಲ್ಕನಿಯಿಂದಲೇ ಡೆಲಿವರಿ ಏಜೆಂಟ್ಗೆ ಮಾರ್ಗದರ್ಶನವನ್ನು ನೀಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರ ಪೋಷಕರು ಗಾಢ ನಿದ್ರೆಯಲ್ಲಿದ್ದು, ಅವರಿಗೆ ತೊಂದರೆಯಾಗದಂತೆ ಬಾಗಿಲನ್ನು ಹೇಗೆ ತೆರೆಯಬೇಕು. ಹಾಗೆಯೇ ಮನೆಯ ಕೀ ಎಲ್ಲಿ ಇಡಲಾಗಿದೆ ಎಂಬುದನ್ನು ನಿಧಾನವಾಗಿ ವಿವರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಈ ಹಾಸ್ಯಮಯ ವಿಡಿಯೋವನ್ನು ಯುವಕರು ಸೆರೆಹಿಡಿದು @mihteeor ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆಯೇ ಸ್ವತಃ ಬ್ಲಿಂಕಿಟ್ ಸಂಸ್ಥೆ ಪ್ರತಿಕ್ರಿಸಿದ್ದು, ಇದು ಪುಣೆಯಲ್ಲಿ ಮಾತ್ರ ಸಂಭವಿಸಲು ಸಾಧ್ಯ! ಎಂದು ಕಾಮೆಂಟ್ ಮಾಡಿದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಜನರ ಮೆಚ್ಚುಗೆಯನ್ನು ಗಳಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ನಾನು ಕೆಲಸಕ್ಕೆ ಹೋಗಿದ್ದೆ ಈ ಸಮಯದಲ್ಲಿ ನನ್ನ ಗಂಡ ನನ್ನ ಕರೆಗಳನ್ನು ಉತ್ತರಿಸುತ್ತಿರಲಿಲ್ಲ. ಹಾಗಾಗಿ ನಾನು ಬ್ಲಿಂಕಿಟ್ ಏಜೆಂಟ್ಗೆ ಮನೆಯಿಂದ ಹೊರಗೆ ಬರುವವರೆಗೂ ಬಾಗಿಲನ್ನು ಬಡಿಯಿರಿ ಎಂದು ಹೇಳಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಬಳಕೆದಾರರು ಬ್ಲಿಂಕಿಟ್ ವಿತರಣಾ ಏಜೆಂಟ್‌ನ ಅಸಾಧಾರಣ ಪ್ರಯತ್ನಕ್ಕೆ ಪ್ರಶಂಸಿಸಿದರು (ಏಜೆನ್ಸೀಸ್).