ಚೆನ್ನೈ: ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ವಿರುದ್ಧ ತಮಿಳುನಾಡಿನಾದ್ಯಂತ ಡಿಎಂಕೆ ಕಪ್ಪು ಬಾವುಟ ಪ್ರದರ್ಶನದ ಪ್ರತಿಭಟನೆಯನ್ನು ಕೇವಲ ಟ್ರೇಲರ್ ಎಂದು ಬಣ್ಣಿಸಿರುವ ಸಿಎಂ ಎಂ.ಕೆ.ಸ್ಟಾಲಿನ್, ಕೇಂದ್ರ ಸರ್ಕಾರ ಪೂರ್ತಿ ಸಿನಿಮಾ ನೋಡಲು ಬಯಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ನಾಮಕ್ಕಲ್‌ನಲ್ಲಿ ಕಪ್ಪು ಬಾವುಟ ಹಾರಿಸಿ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಪ್ರತಿಯನ್ನು ಸುಟ್ಟ ಬಳಿಕ ಮಾತನಾಡಿರುವ ಅವರು, ಇಂದು ಕ್ಷೇತ್ರ ಪುನರ್ವಿಂಗಡಣೆಯ ವಿರುದ್ಧ ಕಪ್ಪು ಬಾವುಟಗಳನ್ನು ಹಾರಿಸಿದ್ದೇವೆ, ಇದು ಕೇವಲ ಟ್ರೇಲರ್. ಕೇಂದ್ರವು ಮುಖ್ಯ ಚಿತ್ರವನ್ನು ನೋಡಲು ಬಯಸಬಾರದು ಎಂದಿದ್ದಾರೆ.
ತಮಿಳುನಾಡು ತನ್ನ ರಾಜಕೀಯ ಹಕ್ಕುಗಳನ್ನು ದುರ್ಬಲಗೊಳಿಸಿದರೆ ಅದು ಮೂಕ ಪ್ರೇಕ್ಷಕರಾಗಿ ಉಳಿಯುವುದಿಲ್ಲ. ತಮಿಳು ಜನರು ಭಾಷೆಗಾಗಿ ಬೀದಿಗಿಳಿಯಲು ಸಾಧ್ಯವಾದರೆ, ನಾವು ನಮ್ಮ ಹಕ್ಕುಗಳಿಗಾಗಿ ಹೊರಬರುವುದಿಲ್ಲವೇ? ನಾವು ಸಾವಿರ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾರತವು ರಾಜ್ಯಗಳ ಒಕ್ಕೂಟ ಎಂದು ಕರೆದಿರುವ ಅವರು, ರಾಜ್ಯದ ಹಕ್ಕುಗಳಿಗೆ ಯಾವುದೇ ಬೆದರಿಕೆ ಬಂದರೆ ಅದನ್ನು ದೃಢವಾಗಿ ವಿರೋಧಿಸಲಾಗುವುದು. ದೆಹಲಿ ಏನೇ ಹೇಳಿದರೂ ಇತರರು ತಲೆಬಾಗಬಹುದು, ಆದರೆ ತಮಿಳುನಾಡು ಎಂದಿಗೂ ತಲೆಬಾಗುವುದಿಲ್ಲ. ಕ್ಷೇತ್ರ ಪುನರ್ವಿಂಗಡಣೆಯಿಂದ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದ ದಕ್ಷಿಣ ರಾಜ್ಯಗಳು ಈಗ ಶಿಕ್ಷೆಗೆ ಒಳಗಾಗುತ್ತಿವೆ. ಜನಸಂಖ್ಯೆಯ ಬೆಳವಣಿಗೆ ಹೊಂದಿರುವ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತವೆ ಎಂದು ಕಿಡಿಕಾರಿದ್ದಾರೆ.
1971ರಿಂದ ಇಲ್ಲಿಯವರೆಗೆ ತಮಿಳುನಾಡಿನ ಜನಸಂಖ್ಯೆಯು ಸುಮಾರು ನಾಲ್ಕು ಕೋಟಿಯಿಂದ ಸುಮಾರು ಎಂಟು ಕೋಟಿಗೆ ಏರಿದೆ. ಆದರೆ ಉತ್ತರ ಪ್ರದೇಶದ ಜನಸಂಖ್ಯೆಯು ಸುಮಾರು ಎಂಟು ಕೋಟಿಯಿಂದ 20 ಕೋಟಿಗೆ ಏರಿದೆ. ಇದು ಆಧಾರವಾದರೆ, ಇದು ಹೇಗೆ ನ್ಯಾಯಯುತವಾಗುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಅದರ ಮಿತ್ರಪಕ್ಷ ಎಐಎಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಎರಡು ಪಕ್ಷಗಳು ತಮಿಳುನಾಡಿನ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿವೆ. ಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಬಿಜೆಪಿಗೆ ಶರಣಾಗಿದ್ದಾರೆ. ಇಂತಹ ಕ್ರಮಗಳು ರಾಜ್ಯದ ಹಕ್ಕುಗಳನ್ನು ಕಸಿದುಕೊಳ್ಳಬಹುದು, ಮೀಸಲಾತಿ ನೀತಿಗಳಿಗೆ ಬೆದರಿಕೆ ಹಾಕಬಹುದು ಹಾಗೂ ಹಿಂದಿ ಹೇರಿಕೆಗೆ ಕಾರಣವಾಗಬಹುದು. ಇದಕ್ಕಾಗಿಯೇ ನಾನು ಈ ಚುನಾವಣೆಯನ್ನು ತಮಿಳುನಾಡು ವರ್ಸಸ್ ದೆಹಲಿ ಎಂದು ಕರೆಯುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).