Priyanka Gandhi On Women's Quota Bill 
ದೇಶ

ಮಹಿಳಾ ಮೀಸಲು ಬಿಲ್ ಫೇಲ್; ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ: ಪ್ರಿಯಾಂಕಾ ಗಾಂಧಿ..Women's Quota Bill

ಪ್ರಮುಖ ಮುಖ್ಯಾಂಶಗಳು

  • ಲೋಕಸಭೆಯ ಪರೀಕ್ಷೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲು
  • ಎನ್‌ಡಿಎ ಮೈತ್ರಿಕೂಟ ಮೊದಲ ಬಾರಿಗೆ ಇಂತಹ ಸೋಲನ್ನು ಅನುಭವಿಸಿದೆ ಎಂದ ಪ್ರಿಯಾಂಕಾ ಗಾಂಧಿ
  • ಸಂಸತ್ತಿನಲ್ಲಿ ಅಗತ್ಯ ಸಂಖ್ಯಾಬಲ ಪಡೆಯುವಲ್ಲಿ ಎನ್‌ಡಿಎ ವಿಫಲ ಎಂದು ಲೇವಡಿ
ನವದೆಹಲಿ: ಎನ್​ಡಿಎ ಸರ್ಕಾರದ ಅಹಂಕಾರಕ್ಕೆ ಮಹಿಳೆಯರು ತಕ್ಕ ಉತ್ತರ ಕೊಟ್ಟಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯು ಸೋಲು ಕಂಡಿತ್ತಲ್ಲ ಅದು ಸರಿಯಾಗಿಯೇ ಆಗಿದೆ. ಎನ್​ಡಿಎ ನಾಯಕರು ಮೊದಲ ಬಾರಿಗೆ ಸೋಲಿನ ಅಘಾತವನ್ನು ಅನುಭವಿಸಿದ್ದಾರೆ. ನಿಮಗೆ ನಿಜಕ್ಕೂ ಮಹಿಳೆಯರಿಗಾಗಿ ಏನಾದರೂ ಮಾಡಬೇಕು ಎನ್ನುವ ಹಂಬಲವಿದ್ದರೆ ಹಳೆಯ ಮಸೂದೆ ತನ್ನಿ ನಾವು ಬೆಂಬಲಿಸುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರಕ್ಕೆ ಆಗ್ರಹಿಸಿದರು.
ಮಹಿಳಾ ಮೀಸಲಾತಿ ಮಸೂದೆಗೆ ಏಪ್ರಿಲ್​17ರಂದು ಸೋಲಾಗಿದೆ. ಮಸೂದೆ ಪರ 298 ಸದಸ್ಯರು ಮತ ಚಲಾಯಿಸಿದರೆ, ಮಸೂದೆಗಳ ವಿರುದ್ಧ 230 ಸದಸ್ತೆಯ ಮತ ಚಲಾಯಿಸಿದರು. ಒಟ್ಟಾರೆಯಾಗಿ 528 ಮತ ಚಲಾಯಿಸಿದ್ದು, ಮಸೂದೆ ಅಂಗೀಕಾರಕ್ಕೆ 352 ಸದಸ್ಯರ ಬೆಂಬಲವಿಲ್ಲದೆ ವಿಫಲವಾಯಿತು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಪರೀಕ್ಷೆಯಲ್ಲಿ ಸೋತ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸುದ್ದಿಗೋಷ್ಠಿ ನಡೆಸಿ, ಎನ್​ಡಿಎ ಸರ್ಕಾರದ ವಿರುದ್ಧ ಗುಡುಗಿದರು.

ಸೋಲಿನ ಭಯ ಕಂಡಿದ್ದಾರೆ

"ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಅಗತ್ಯ ಮತ ಸಿಗದೆ ಹಿನ್ನಡೆಯಾಯಿತು. ಎನ್​ಡಿಎ ನಾಯಕರಿಗೆ ಏಪ್ರಿಲ್​ 17 ಕರಾಳ ದಿನ. ಏಕೆಂದರೆ, ಮೊದಲ ಬಾರಿಗೆ ಸೋಲಿನ ಭಯವನ್ನು ಕಂಡಿದ್ದಾರೆ. ಇದು ಎನ್​ಡಿಎ ಸರ್ಕಾರದ ಅಹಂಕಾರಕ್ಕೆ ಮಹಿಳೆಯರು ಕೊಟ್ಟ ತಕ್ಕುದಾದ ಉತ್ತರ. ಪ್ರಜಾ ಪ್ರಭುತ್ವಕ್ಕೆ ಸಿಕ್ಕ ಗೆಲುವು" ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ರು.
"ಎನ್​ಡಿಎ ಸರ್ಕಾರವು ಮಹಿಳಾ ಮೀಸಲಾತಿ ವಿಚಾರವನ್ನು ತನ್ನ ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ ಹೊರತು, ಜಾರಿಗೆ ತರುವ ಇಚ್ಛೆಯನ್ನೇ ಹೊಂದಿಲ್ಲ. ಅಧಿಕಾರದಲ್ಲಿ ಇನ್ನಷ್ಟು ಕಾಲ ಮುಂದುವರೆಯಲು ನಡೆಸಿರುವ ಕುತಂತ್ರ ಇದು. ವಿರೋಧ ಪಕ್ಷಗಳು ಈ ಮಸೂದೆಯ ಲೋಪದೋಷಗಳನ್ನು ಎತ್ತಿ ತೋರಿಸಿದವು. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದ ಕೊರತೆಯಿಂದ ಮಸೂದೆ ಬಿದ್ದಿರುವುದು ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ. ಇದು ಸಂವಿಧಾನ ಮತ್ತು ವಿರೋಧ ಪಕ್ಷದ ಒಗ್ಗಟ್ಟಿನ ಗೆಲುವು" ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಹಳೆ ಬಿಲ್ ಜಾರಿಗೆ ತನ್ನಿ

"ಇಂದು ನಿಜಕ್ಕೂ ನನಗೆ ಸಂತೋಷವಾಗುತ್ತಿದೆ. ವಿಪಕ್ಷಗಳು ಒಟ್ಟಾಗಿ ಕಣಕ್ಕೆ ನಿಂತರೆ ಪರಿಣಾಮ ಹೇಗಿರುತ್ತದೆ ಎಂಬುದೀಗ ಎನ್​ಡಿಎಗೆ ಗೊತ್ತಾಗಿದೆ. ನೀವು ನಿಜವಾಗಿಯೂ ಮಹಿಳೆಯರಿಗಾಗಿ ಏನನ್ನಾದರೂ ಮಾಡಲು ಬಯಸಿದರೆ, 2023ರ 'ನಾರಿ ಶಕ್ತಿ ವಂದನ್' ಮಸೂದೆಯನ್ನು ಮರಳಿ ತನ್ನಿ, ನಾವು ಅದಕ್ಕೆ ಬೆಂಬಲ ನೀಡುತ್ತೇವೆ" ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸಬಲೀಕರಣ ಹೆಸ್ರಲ್ಲಿ ಬೇಳೆ ಬೇಯಿಸ್ಕೊಳ್ಳಬೇಡಿ

"ಮಹಿಳೆಯರ ಸಬಲೀಕರಣದ ನೆಪದಲ್ಲಿ ಆಡಳಿತ ಮುಂದುವರೆಸುವ ಪಿತೂರಿಯನ್ನು ಸರ್ಕಾರ ಹೂಡಿದೆ. ಮಹಿಳೆಯರನ್ನು ದಾಳವನ್ನಾಗಿ ಬಳಕೆ ಮಾಡುವ ಆಟವನ್ನು ಎನ್​ಡಿಎ ನಿಲ್ಲಿಸಬೇಕು. ಮಸೂದೆ ಅಂಗೀಕಾರವಾಗಿದ್ದರೆ ನಾವು ಗೆದ್ದೆವು ಎಂದು ಸರ್ಕಾರ ಹೇಳಿಕೊಳ್ಳುತ್ತಿತ್ತು. ಈಗ ಅದು ವಿಫಲವಾಗಿರುವುದರಿಂದ ಇತರ ಪಕ್ಷಗಳನ್ನು ಮಹಿಳಾ ವಿರೋಧಿ ಎಂದು ಬಿಂಬಿಸಲು ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಕೆಂಡಕಾರಿದರು.
"ಕ್ಷೇತ್ರ ಪುನರ್ ವಿಂಗಡಣೆಯ ಹೆಸರಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯವನ್ನು ಕುಗ್ಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಆರೋಪಿಸಿದರು, (ಏಜೆನ್ಸೀಸ್​)