Raghupathy | ಟಿವಿಕೆ ಸೇರ್ಪಡೆಗೊಂಡಿರುವ ಕೆಎ ಸೆಂಗೋಟ್ಟೈಯನ್ ಮತ್ತು ಸಚಿವ ಎಸ್​ ರಘುಪತಿ 
ದೇಶ

ಟಿವಿಕೆ ಸೇರ್ಪಡೆಯಾಗಿರುವ ಸೆಂಗೋಟ್ಟೈಯನ್ ಬಿಜೆಪಿಯ ಸ್ಲೀಪರ್ ಸೆಲ್ ಎಂದ ಸಚಿವ ಎಸ್​ ರಘುಪತಿ | Raghupathy

ಚೆನ್ನೈ: ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡು ಸದ್ಯ ಟಿವಿಕೆ ಸೇರ್ಪಡೆಗೊಂಡಿರುವ ಕೆಎ ಸೆಂಗೋಟ್ಟೈಯನ್, ಟಿವಿಕೆ ಒಳಗಿನ ಬಿಜೆಪಿ ಸ್ಲೀಪರ್ ಸೆಲ್ ಎಂದು ತಮಿಳುನಾಡು ಸಚಿವ ಎಸ್​ ರಘುಪತಿ ಟೀಕಿಸಿದ್ದು, ವಿಜಯ್​ರ ಪಕ್ಷವನ್ನು ಬಿಜೆಪಿ ತೆಕ್ಕೆಗೆ ತರುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಸೆಂಗೊಟ್ಟೈಯನ್​ರನ್ನು ಬಿಜೆಪಿ ನಾಯಕರು ರಿಮೋಟ್ ಕಂಟ್ರೋಲ್ ಮೂಲಕ ನಿಭಾಯಿಸುತ್ತಿದ್ದು, ಗೃಹ ಸಚಿವ ಅಮಿತ್ ಷಾ ಕರೆ ಮಾಡಿದರೆ ಓಡುತ್ತಾರೆ. ಅವರ ಆಜ್ಞೆಯಂತೆ ಕೆಲಸ ಮಾಡುತ್ತಾರೆ, ಸೆಂಗೊಟ್ಟೈಯನ್​ ನೂತನ ಪಕ್ಷದ ಸೇರ್ಪಡೆ, ಟಿವಿಕೆಯನ್ನು ಬಿಜೆಪಿ ಕಡೆ ತರುವ ನಿಯೋಜನೆಯ ಭಾಗವಾಗಿದೆ ಎಂದಿದ್ದಾರೆ.
ಸೆಂಗೊಟ್ಟೈಯನ್​ ಮೊದಲು ದೆಹಲಿಗೆ ತೆರಳಿ ಅಮಿತ್ ಷಾ ರನ್ನು ಭೇಟಿಯಾದರು, ಆ ಬಳಿಕ ದಿನಕರನ್, ಪನ್ನೀರ್ ಸೆಲ್ವಂ, ಶಶಿಕಲಾ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಟಿವಿಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಎಡಪ್ಪಾಡಿ ಕೆ ಪಳನಿಸ್ವಾಮಿ ಜೊತೆಗಿನ ಭಿನ್ನಾಭಿಪ್ರಾಯದ ಬಳಿಕ ಡಿಎಂಕೆ ನಾಯಕರು ಸೆಂಗೊಟ್ಟೈಯನ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಚರ್ಚೆಗೆ ಸ್ಪಷ್ಟನೆ ಕೊಟ್ಟ ಸಚಿವ ರಘುಪತಿ, ಯಾವುದೇ ವ್ಯಕ್ತಿ ಒಂದು ಪಕ್ಷದಿಂದ ಹೊರಬಂದಾಗ, ಸ್ನೇಹಪರ ದೃಷ್ಟಿಯಿಂದ ಸಂಪರ್ಕಿಸುವುದು ಸಾಮಾನ್ಯ, ಆದರೆ, ಅವರು ಬಿಜೆಪಿ ಸ್ಲೀಪರ್ ಸೆಲ್ ಆಗಿದ್ದರಿಂದ ನಮ್ಮ ಪಕ್ಷಕ್ಕೆ ಸೇರಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದರು.
ಟಿವಿಕೆಯ ಭ್ರಷ್ಟಾಚಾರ ವಿರೋಧಿ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಸಚಿವರು, ಯಾವುದೇ ನಟ ಕಪ್ಪು ಹಣವಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಯಾರಾದರೂ 100 ಅಥವಾ 200 ಕೋಟಿ ರೂ. ಗಳಿಸಿದರೆ, ಅದನ್ನು ತಮ್ಮ ಖಾತೆಗಳಲ್ಲಿ 80 ಕೋಟಿ ತೆರಿಗೆ ಪಾವತಿಸಲು ತೋರಿಸುವುದಿಲ್ಲ, ಭ್ರಷ್ಟಾಚಾರ ಮುಕ್ತ ಸರ್ಕಾರದ ಭರವಸೆ ನೀಡುವವರು ಮೊದಲು ತಮ್ಮ ಸ್ವಂತ ಭ್ರಷ್ಟಾಚಾರವನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಉಚ್ಚಾಟನೆ ಮತ್ತು ಕಾರಣ

ಎಐಎಡಿಎಂಕೆ ಪಕ್ಷದಿಂದ ಈಗಾಗಲೇ ಹೊರಹಾಕಲ್ಪಟ್ಟ ನಾಯಕರೊಂದಿಗೆ ಸಂಪರ್ಕ ಸಾಧಿಸಿದ್ದು, ಪಕ್ಷದ ನಾಯಕರನ್ನು ಬಹಿರಂಗವಾಗಿ ಟೀಕಿಸಿದ ಕಾರಣಕ್ಕೆ, ಎಡಪ್ಪಾಡಿ ಕೆ ಪಳನಿಸ್ವಾಮಿ, ಕೆಎ ಸೆಂಗೊಟ್ಟೈಯನ್ ಅವರನ್ನು ಉಚ್ಚಾಟಿಸಿದ್ದರು. ಈ ಹಿಂದೆ ಉಚ್ಚಾಟಿತರಾಗಿದ್ದ ನಾಯಕರನ್ನು ಮರು ಸೇರ್ಪಡೆ ಮಾಡಿಕೊಳ್ಳುವಂತೆ ಸೆಂಗೊಟ್ಟೈಯನ್ ಒತ್ತಾಯಿಸಿದ್ದರು ಮತ್ತು ಪಕ್ಷ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕಾದರೆ ಒಗ್ಗಟ್ಟು ಮುಖ್ಯವಾಗಿತ್ತದೆ ಎಂದು ಹೇಳಿದ್ದರು.
ಕೆಎ ಸೆಂಗೊಟ್ಟೈಯನ್ ಅಭಿಪ್ರಾಯವನ್ನು ಪಳನಿಸ್ವಾಮಿಯನ್ನು ವಿರೋಧಿಸುತ್ತಿದ್ದ ಬಣಗಳು ಸ್ವಾಗತಿಸಿದ್ದವು. ಇದನ್ನೇ ಗಂಭೀರವಾಗಿ ಪರಿಗಣಿಸಿದ ಪಕ್ಷದ ನಾಯಕತ್ವ, ಅಶಿಸ್ತಿನ ವರ್ತನೆಯ ಕಾರಣ ನೀಡಿ ಸೆಂಗೊಟ್ಟೈಯನ್​ರನ್ನು ಉಚ್ಛಾಟಿಸಿತು.

ಕೆಎ ಸೆಂಗೊಟ್ಟೈಯನ್​ರ ಸುದೀರ್ಘ ರಾಜಕೀಯ ಜೀವನ..

1977 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಸೆಂಗೊಟ್ಟೈಯನ್, ಇಲ್ಲಿಯವರೆಗೂ ಒಂಬತ್ತು ಚುನಾವಣೆಯಗಳಲ್ಲಿ ಗೆಲುವು ಸಾಧಿಸಿದ್ದು, ಪಶ್ಚಿಮ ತಮಿಳುನಾಡು ಭಾಗದಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಈ ಹಿಂದೆ ಎಐಎಡಿಎಂಕೆ ವಿಭಜನೆಯಾದ ಸಂದರ್ಭದಲ್ಲಿ ಮಾಜಿ ಸಿಎಂ ಜಯಲಲಿತಾರನ್ನು ಬೆಂಬಲಿಸಿದ್ದರು ಮತ್ತು ಅವರ ಪ್ರಚಾರದ ವೇಳಾಪಟ್ಟಿಯನ್ನು ಸೆಂಗೊಟ್ಟೈಯನ್ ಅವರೇ ನಿಭಾಯಿಸುತ್ತಿದ್ದರು ಎನ್ನಲಾಗಿದೆ(ಏಜೆನ್ಸೀಸ್​).