Traitor Remark | ರಾಹುಲ್ ಗಾಂಧಿಗೆ ಬಿಜೆಪಿ ಸಿಖ್ ನಾಯಕರ ಎಚ್ಚರಿಕೆ 
ದೇಶ

ಬಿಟ್ಟು ವಿರುದ್ಧದ 'ದೇಶದ್ರೋಹಿ' ಹೇಳಿಕೆಗೆ ಸಿಖ್ ನಾಯಕರ ಕೆಂಡ..ರಾಹುಲ್ ಗಾಂಧಿಗೆ ಬಿಜೆಪಿ ಎಚ್ಚರಿಕೆ! | Traitor Remark

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟುರನ್ನು ದೇಶದ್ರೋಹಿ ಎಂದ ರಾಹುಲ್ ಗಾಂಧಿ
  • ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಪ್ರಮುಖ ಸಿಖ್ ನಾಯಕರು
  • ಸಿಖ್ಖರು ದೇಶದ್ರೋಹಿಯಾಗಲು ಸಾಧ್ಯವಿಲ್ಲ ಎಂದು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿರುಗೇಟು
ದೆಹಲಿ: ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ವಿರುದ್ಧ ರಾಹುಲ್ ಗಾಂಧಿ ನೀಡಿರುವ ದೇಶದ್ರೋಹಿ ಹೇಳಿಕೆಗೆ ಬಿಜೆಪಿಯ ಪ್ರಮುಖ ಸಿಖ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ವಿಪಕ್ಷ ನಾಯಕರ ಹೇಳಿಕೆಯನ್ನು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಯನ್ನು ಖಂಡಿಸಿರುವ ಸಚಿವ ಪುರಿ, ರವನೀತ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಾರಣ ರಾಹುಲ್​ ದೇಶದ್ರೋಹಿ ಎಂದು ಕರೆದಿರುವುದಾಗಿ ತಿಳಿಸಿದರು.
ರಾಹುಲ್​ ಬಳಸಿರುವ ದೇಶದ್ರೋಹಿ ಎಂಬ ಪದವನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಇದರ ಅರ್ಥ ದೇಶಕ್ಕೆ ದ್ರೋಹ ಮಾಡುವವನು. ಇದು ಸಿಖ್ ಸಮುದಾಯಕ್ಕೆ ಗಂಭೀರ ವಿಷಯವಾಗಿದ್ದು, ಬಿಟ್ಟು ಅವರು ಕಾಂಗ್ರೆಸ್​ ತೊರೆದಿರುವುದರಿಂದ ಅಸಮಧಾನಗೊಂಡಿರುವ ರಾಹುಲ್ ಗಾಂಧಿ ಈ ಮಟ್ಟಕ್ಕಿಳಿದಿದ್ದಾರೆ ಎಂದರು. 
ಪೇಟ ಧರಿಸಿದ ವ್ಯಕ್ತಿ ನಿಮ್ಮ ಪಕ್ಷವನ್ನು ತೊರೆದ ಮಾತ್ರಕ್ಕೆ, ನೀವು ಅವರನ್ನು ದೇಶದ್ರೋಹಿ ಎಂದು ಕರೆಯುತ್ತೀರಿ, ನೀವು ಬಳಸಿದ ಪದ ಸ್ವೀಕಾರಾರ್ಹವಲ್ಲ. ಯಾವುದೇ ಸಮುದಾಯದ ಯಾರನ್ನಾದರೂ ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟುವುದು ಸರಿಯಲ್ಲ, ಸಂಸತ್ತಿನ ಹೊರಗೆ ಮತ್ತು ಒಳಗಿನ ಭಾಷಣವು ಸಭ್ಯತೆಯಿಂದ ಕೂಡಿರಬೇಕೆಂದರು.

ಸಿಖ್ಖರು ದೇಶದ್ರೋಹಿಯಾಗಲು ಸಾಧ್ಯವಿಲ್ಲ 

ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದು, ಸಿಖ್ಖರು ಎಂದಿಗೂ ದೇಶದ್ರೋಹಿಯಾಗಲು ಸಾಧ್ಯವಿಲ್ಲ ಮತ್ತು ಅವರ ಪಕ್ಷ ಇಷ್ಟಾದ ಮೇಲೂ ತನ್ನ ಮನಸ್ಥಿತಿಯನ್ನು ಬದಲಾಯಿಸಿಲ್ಲ ಎಂದು ಟೀಕಿಸುತ್ತಾ, ಸುವರ್ಣ ದೇವಾಲಯದ ಮೇಲಿನ ದಾಳಿಗೆ ಕಾಂಗ್ರೆಸ್​ ಕೈವಾಡವಿದೆ ಎಂದು ಆರೋಪಿಸಿದರು.
ಕ್ರಮ ಕೈಗೊಳ್ಳುವಂತೆ ಲೋಕಸಭಾ ಸ್ಪೀಕರ್​​ಗೆ ಮನವಿ ಸಲ್ಲಿಸಿದ ನಾಯಕರು 
ನೀವು ಮಾಡಿದ ಪಾಪ, ಸಿಖ್ಖರಿಗೆ ನೀವು ಮಾಡಿದ ಅವಮಾನ, ಬಳಸಿದ ಅಸಭ್ಯ ಪದಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದನ್ನು ಸಹಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಲೋಕಸಭಾ ಸ್ಪೀಕರ್‌ಗೆ ನಾನು ಹೇಳಲು ಬಯಸುತ್ತೇನೆ ಎಂದು ಸಿರ್ಸಾ ಹೇಳಿದರು.
ದೆಹಲಿ ಬಿಜೆಪಿ ಶಾಸಕ ಮತ್ತು ಮಾಜಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಕೂಡ ರಾಹುಲ್ ಗಾಂಧಿ ದೇಶದ್ರೋಹಿ ಹೇಳಿಕೆ ವಿರುದ್ಧ ಕಿಡಿಕಾರಿದ್ದು, ಬಿಟ್ಟು ಅವರ ತಾತ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ, ಹೀಗಿದ್ದಾಗ ಇಂತಹ ಹೇಳಿಕೆ ನೀಡುವುದು ದುರದೃಷ್ಟಕರ ಎಂದಿದ್ದಾರೆ. 
ಕೆಲವು ಜನರು ಇನ್ನೂ ಊಳಿಗಮಾನ್ಯ, ರಾಜಮನೆತನದ ಮನಸ್ಥಿತಿಯಿಂದ ಹೊರಬಂದಿಲ್ಲ. ಕೆಲವು ಕುಟುಂಬಗಳು ಇನ್ನೂ ತಮ್ಮನ್ನು ತಾವು ಅರ್ಹರು ಎಂದು ಪರಿಗಣಿಸುತ್ತಾರೆ ಮತ್ತು ತಮ್ಮನ್ನು ಈ ದೇಶದ ಮಾಲೀಕರೆಂದು ನೋಡುತ್ತಾರೆ. ಅವರು ಆ ಚಿಂತನೆಯಿಂದ ಮೇಲೇರಲು ಸಾಧ್ಯವಾಗುತ್ತಿಲ್ಲ. ಅವರು ತಮ್ಮ ಆಲೋಚನಾ ವಿಧಾನ ಮತ್ತು ಕಾರ್ಯನಿರ್ವಹಣೆ ಮಾತ್ರ ಸರಿ ಎಂದು ನಂಬುತ್ತಾರೆ ಮತ್ತು ಇದು ದುರದೃಷ್ಟಕರ ಸಂಗತಿ ಎಂದರು.
ಈ ರೀತಿಯ ಹೇಳಿಕೆ ಇದೇ ಮೊದಲ ಬಾರಿಯಲ್ಲ, ಇಂತಹ ನಡವಳಿಕೆ ಆ ಪಕ್ಷದ ನಾಯಕರಿಗೆ ಸರ್ವೆ ಸಾಮಾನ್ಯವಾಗಿದೆ, ಸಿಖ್ಖರನ್ನು ನಿಂದಿಸುವ ಮತ್ತು ಅವಮಾನಿಸುವ ಯಾವುದೇ ಅವಕಾಶವನ್ನು ಕಾಂಗ್ರೆಸ್​ ಪಕ್ಷದವರು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಹಿನ್ನೆಲೆ ಏನು..?

ರವನೀತ್ ಸಿಂಗ್ ಬಿಟ್ಟು ಅವರು ಹಿಂದೆ ಕಾಂಗ್ರೆಸ್ ಸಂಸದರಾಗಿದ್ದರು ಮತ್ತು ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದರು. ಲೋಕಸಭಾ ಚುನಾವಣೆಗೆ ಮೊದಲು ಅವರು ಬಿಜೆಪಿಗೆ ಸೇರ್ಪಡೆಗೊಂಡು ಕೇಂದ್ರ ಸಚಿವರಾದರು.
ಅಂದಿನಿಂದ ಬಿಟ್ಟು ಅವರು ರಾಹುಲ್ ಗಾಂಧಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ, ಈ ಹಿಂದೆ ರಾಹುಲ್ ಗಾಂಧಿಯನ್ನು ನಂಬರ್ ಒನ್​ ಭಯೋತ್ಪಾದಕ ಎಂದೂ ಕರೆದಿದ್ದರು. ಇಂದು ರಾಹುಲ್ ಗಾಂಧಿ ಅವರು ಬಿಟ್ಟು ಅವರ ಪಕ್ಷಾಂತರವನ್ನು ಗುರಿಯಾಗಿಸಿಕೊಂಡು ಈ ದೇಶದ್ರೋಹಿ ಎಂಬ ಪದವನ್ನು ಬಳಸಿದ್ದಾರೆ,(ಏಜೆನ್ಸೀಸ್).