ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್
ಮುಂಬೈ: ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅದರಲ್ಲಿ ವಿಲೀನವಾಗಲು ಯಾರೂ ಬಯಸಲ್ಲ ಎಂಬ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್(Sanjay Raut), ಕಾಂಗ್ರೆಸ್ ಮುಳುಗುತ್ತಿರುವ ಹಡಗು ಅಲ್ಲ. ಹಿಂದೆ ಪಕ್ಷ ತೊರೆದು ಪ್ರತ್ಯೇಕ ಪಕ್ಷ ಕಟ್ಟಿದ್ದ ಎಲ್ಲರೂ ಒಗ್ಗೂಡಿ ಹಳೆಯ ಪಕ್ಷವನ್ನು ಬಲಪಡಿಸಬೇಕೆಂದು ಕರೆ ನೀಡಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ನಾವು ನಿಜವಾಗಿಯೂ ಬಿಜೆಪಿಯ ವಿಕೃತ ರಾಜಕೀಯದ ವಿರುದ್ಧ ಹೋರಾಡಲು ಬಯಸಿದರೆ, ಎಲ್ಲರೂ ಒಂದಾಗಬೇಕು. ಕಾಂಗ್ರೆಸ್ ಪಕ್ಷ ಬಲಗೊಳ್ಳಬೇಕು. ಕಾಂಗ್ರೆಸ್ ತೊರೆದ ಎಲ್ಲಾ ನಾಯಕರು ಮೊದಲು ಒಂದಾಗಬೇಕು. ಹಿರಿಯ ನಾಯಕ ಶರದ್ ಪವಾರ್ ಉಪಕ್ರಮ ತೆಗೆದುಕೊಂಡರೆ, ಅದು ಸಾಧ್ಯವಾಗುತ್ತದೆ. ನಾವು ಪ್ರಾದೇಶಿಕ ಪಕ್ಷ ಮತ್ತು ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯ ವಿಕೃತ ರಾಜಕೀಯವನ್ನು ಪ್ರಶ್ನಿಸಲು ಎಲ್ಲರೂ ಒಂದಾಗಬೇಕು. ಇಂದಿಗೂ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಹೆದರುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ಮುಳುಗುವ ಹಡಗು ಅಲ್ಲ. ಈ ಪ್ರಯತ್ನದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂದಾಳತ್ವ ವಹಿಸಬೇಕೆಂದು ಕರೆ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಿಜವಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳಲ್ಲಿ ಶೇ. 01ರಷ್ಟನ್ನಾದ್ರೂ ತೋರಿಸಿ, ಅವರು ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ. ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲೂ ಇರಲಿಲ್ಲ. ಈ ಚಳುವಳಿಗಳ ಸಮಯದಲ್ಲಿ ಅವರು ಎಲ್ಲಿಯೂ ಇರಲಿಲ್ಲ. ಇವರು ಹೇಡಿಗಳು ಎಂದು ಕಿಡಿಕಾರಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಆಪರೇಷನ್ ಟೈಗರ್' ಅನ್ನು ನೂರು ಬಾರಿ ನಡೆಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರನ್ನು ಒಡೆಯುವುದು ಪ್ರಜಾಪ್ರಭುತ್ವದ ವಿಕೃತಿಯ ಸಂಕೇತವಾಗಿದೆ. ಈ ವಿಕೃತ ಪ್ರವೃತ್ತಿ ಪ್ರಸ್ತುತ ಬಿಜೆಪಿ ನಾಯಕತ್ವದಲ್ಲಿ ಉತ್ತುಂಗಕ್ಕೇರಿದೆ. ಇದು ಒಂದು ದಿನ ಕೊನೆಗೊಳ್ಳುತ್ತದೆ. ಜನ ಇದರ ವಿರುದ್ಧ ದಂಗೆ ಏಳುತ್ತಾರೆ ಎಂದಿದ್ದಾರೆ (ಏಜೆನ್ಸೀಸ್).