ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ( Rahul Gandhi) ಅವರ ಸರಣಿ ವಿದೇಶಿ ಪ್ರವಾಸಗಳು ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ಬಾರಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಅತ್ಯಂತ ಸೃಜನಶೀಲ ಹಾಗೂ ವ್ಯಂಗ್ಯಭರಿತ ಹಾದಿ ಹಿಡಿದಿದ್ದು, ಜನಪ್ರಿಯ ಚಲನಚಿತ್ರಗಳ ಪೋಸ್ಟರ್‌ಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕನಿಗೆ ಟಾಂಗ್ ನೀಡಿದೆ.
ಬಾಲಿವುಡ್‌ನ ಪ್ರಸಿದ್ಧ ಸಿನಿಮಾಗಳ ಶೀರ್ಷಿಕೆಗಳನ್ನು ಆಧರಿಸಿ ಚಡ್ ದೇ ಇಂಡಿಯಾ (Chhad de India) ಮತ್ತು ಲಾಪತ್ತಾ ರಾಹುಲ್ (Laapata Rahul) ಎಂಬ ಒನ್‌ಲೈನರ್‌ಗಳನ್ನೊಳಗೊಂಡ ಪೋಸ್ಟರ್‌ಗಳನ್ನು ಬಿಜೆಪಿಯ ವಿವಿಧ ರಾಜ್ಯ ಘಟಕಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ. ಇಷ್ಟೇ ಅಲ್ಲದೆ, ಗೋ ರಾಹುಲ್ ಗಾನ್, ಟೂರಿಸ್ಟ್ ಜಿಂದಾ ಹೈ ಹಾಗೂ ಪರ್ದೇಸ್ ಎಂಬ ವಿಡಂಬನಾತ್ಮಕ ಪೋಸ್ಟರ್‌ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ವಿಪಕ್ಷ ನಾಯಕ ಅಲ್ಲ, ಪರ್ಯಟನ್ ನಾಯಕ
ದೆಹಲಿ ಬಿಜೆಪಿ ಘಟಕವು, ರಾಹುಲ್ ಬಾಬಾಗೆ ಏನು ಇಷ್ಟ? ಸ್ವದೇಶ್ (ತಪ್ಪು ಗುರುತು) ಪರ್ದೇಸ್ (ಸರಿ ಗುರುತು) ಎಂದು ಪ್ರಶ್ನಿಸಿದೆ. ಇತ್ತ ಗೋವಾ ಬಿಜೆಪಿ ಘಟಕವು, #WhereIsRahul? ಥಾಯ್ಲೆಂಡ್‌ನಲ್ಲಿ ರಜೆ ಎಂಜಾಯ್ ಮಾಡುತ್ತಿದ್ದಾರಾ? ಅಥವಾ ಭಾರತದ ವಿರುದ್ಧ ಹೊಸ ಪ್ರಚಾರದ ಸಂಚು ರೂಪಿಸಲು ರಹಸ್ಯ ಪ್ರವಾಸದಲ್ಲಿದ್ದಾರಾ? ಎಂದು ವ್ಯಂಗ್ಯವಾಡಿದೆ. ವಿರೋಧ ಪಕ್ಷದ ನಾಯಕ ಅಲ್ಲ, ಪರ್ಯಟನ್ ನಾಯಕ!. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ರಾಹುಲ್ ಗಾಂಧಿ ಅವರ ಹುದ್ದೆಯಾದ LoP (Leader of Opposition) ಎಂಬುದನ್ನು Leader of Paryatan and Partying (ಪ್ರವಾಸ ಮತ್ತು ಪಾರ್ಟಿ ಮಾಡುವ ನಾಯಕ) ಎಂದು ಬದಲಾಯಿಸಿಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ. ನಮ್ಮ ಪ್ರಧಾನಿಯವರು ದೇಶಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಮಾತ್ರ ಸದಾ ಪ್ರವಾಸ ಮತ್ತು ಪಾರ್ಟಿ ಮೂಡ್‌ನಲ್ಲಿ ಇರುತ್ತಾರೆ ಎಂದು ಟೀಕಿಸಿದ್ದಾರೆ.
ಮತ್ತೊಬ್ಬ ವಕ್ತಾರ ಆರ್ ಪಿ ಸಿಂಗ್ ರಾಹುಲ್ ಗಾಂಧಿ ಅವರ ಪ್ರವಾಸದ ವೆಚ್ಚದ ಬಗ್ಗೆ ಪ್ರಶ್ನೆ ಎತ್ತಿದ್ದು, ನನ್ನ ಮಾಹಿತಿಯ ಪ್ರಕಾರ ಇದು ರಾಹುಲ್ ಗಾಂಧಿ ಅವರ 55ನೇ ವಿದೇಶಿ ಪ್ರವಾಸವಾಗಿದೆ. ಸಾರ್ವಜನಿಕ ದಾಖಲೆಗಳ ಪ್ರಕಾರ ಅವರು ಈ ಪ್ರವಾಸಗಳಿಗಾಗಿ 60 ಕೋಟಿ ರೂ.ಗಿಂತ ಹೆಚ್ಚು ಹಣ ವ್ಯಯಿಸಿದ್ದಾರೆ. ಆದರೆ ಅವರ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಇದಕ್ಕೆ ಪೂರಕವಾದ ಆದಾಯದ ವಿವರಗಳಿಲ್ಲ. ಹಾಗಾದರೆ ಈ ಪ್ರವಾಸಗಳಿಗೆ ಹಣ ಎಲ್ಲಿಂದ ಬರುತ್ತಿದೆ..? ಇದರ ಖರ್ಚನ್ನು ಯಾರು ಭರಿಸುತ್ತಿದ್ದಾರೆ..? ಎಂದು ಆರ್ಥಿಕ ಮೂಲಗಳ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.
ರಾಹುಲ್ ಜಾಗತಿಕ ನಾಯಕ ಎಂದು ಕಾಂಗ್ರೆಸ್ ತಿರುಗೇಟು
ಬಿಜೆಪಿಯ ಈ ಸರಣಿ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ಇದೆ ಎಂದು ಸಮರ್ಥಿಸಿಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮಾತನಾಡಿ, ರಾಹುಲ್ ಗಾಂಧಿ ಕೇವಲ ನಮ್ಮ ದೇಶದ ನಾಯಕರಲ್ಲ, ಇಡೀ ವಿಶ್ವವೇ ಅವರನ್ನು ಒಬ್ಬ ಪ್ರಮುಖ ನಾಯಕನಾಗಿ ನೋಡುತ್ತದೆ. ಜಗತ್ತಿನಾದ್ಯಂತದ ಅನೇಕ ಸಂಸ್ಥೆಗಳು ಮತ್ತು ಗಣ್ಯರು ಅವರನ್ನು ಭೇಟಿಯಾಗಲು, ಅವರ ಮಾತುಗಳನ್ನು ಕೇಳಲು ಬಯಸುತ್ತಾರೆ. ನಿರಂತರ ಆಮಂತ್ರಣಗಳು ಬರುವುದರಿಂದ, ಅವರು ಕೇವಲ 2 ರಿಂದ 5 ದಿನಗಳ ಅಲ್ಪಾವಧಿಯ ಪ್ರವಾಸಗಳನ್ನು ಕೈಗೊಳ್ಳಬೇಕಾಗುತ್ತದೆ. ಜಗತ್ತಿನ ಎಲ್ಲರೂ ಬಿಜೆಪಿಯ ಸಿದ್ಧಾಂತವನ್ನೇ ಒಪ್ಪಬೇಕಾಗಿಲ್ಲ, ಅವರು ಭಾರತವನ್ನು ಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ ಮತ್ತು ಅದರಲ್ಲಿ ರಾಹುಲ್ ಗಾಂಧಿ ಅವರ ಪಾತ್ರ ದೊಡ್ಡದಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ಪ್ರಧಾನಿ ಮೋದಿ ಅವರ ನಡೆಗಳನ್ನೇ ಪ್ರಶ್ನಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ವಿದೇಶಿ ಪ್ರವಾಸ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ ಬೆನ್ನಲ್ಲೇ ತಾವೇ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಹೀಗಿರುವಾಗ ರಾಹುಲ್ ಗಾಂಧಿ ವಿದೇಶಕ್ಕೆ ಹೋದರೆ ತಪ್ಪೇನು..? ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕ ಎಂದು ಬಿಜೆಪಿಗೆ ಕೌಂಟರ್ ನೀಡಿದ್ದಾರೆ(ಏಜೆನ್ಸೀಸ್).