ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ಅಮಿತ್ ಶಾ
ಚೆನ್ನೈ: ಮುಂದಿನ ತಮಿಳುನಾಡು ವಿಧಾನಸಭೆಯಲ್ಲಿ ಎನ್ಡಿಎ ಸರ್ಕಾರ ರಚಿಸುತ್ತೇವೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಎಂ.ಕೆ.ಸ್ಟಾಲಿನ್(CM M K Stalin), ಅವರು ತಮಿಳುನಾಡಿಗೆ ಇಡೀ ಸಂಘಿ ಸೇನೆಯನ್ನು ಕರೆ ತಂದರೂ ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಟಾಂಗ್ ನೀಡಿದ್ದಾರೆ.
ಭಾನುವಾರ(ಡಿ. 14) ತಿರುವಣ್ಣಾಮಲೈನಲ್ಲಿ ನಡೆದ ಡಿಎಂಕೆ ಯುವ ವಿಭಾಗದ ಉತ್ತರ ವಲಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ತಮಿಳುನಾಡಿನ ರಾಜಕೀಯ ಸ್ವರೂಪ ಮೂಲಭೂತವಾಗಿ ವಿಭಿನ್ನವಾಗಿದೆ. ಇದು ತಮಿಳುನಾಡು, ಅಮಿತ್ ಶಾ ನಮ್ಮ ಪಾತ್ರವನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ. ಪ್ರೀತಿಯಿಂದ ಬರುವವರನ್ನು ನಾವು ಅಪ್ಪಿಕೊಳ್ಳುತ್ತೇವೆ, ಆದರೆ ನಾವು ಎಂದಿಗೂ ದುರಹಂಕಾರಕ್ಕೆ ತಲೆಬಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಎಂಕೆಯ ಜವಾಬ್ದಾರಿ ತಮಿಳುನಾಡನ್ನು ರಕ್ಷಿಸುವುದನ್ನು ಮೀರಿ, ಬಿಜೆಪಿಯ ಫ್ಯಾಸಿಸ್ಟ್ ಸಿದ್ಧಾಂತದಿಂದ ದೇಶವನ್ನು ರಕ್ಷಿಸುವತ್ತ ವಿಸ್ತರಿಸಿದೆ. ಆ ಸಿದ್ಧಾಂತದ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿರುವ ಏಕೈಕ ರಾಜ್ಯ ಪಕ್ಷ ಡಿಎಂಕೆ ಎಂದು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ತಮ್ಮ ಪುತ್ರ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರನ್ನು ಹೊಗಳಿರುವ ಸ್ಟಾಲಿನ್, ಅವರು ಈಗ ತಮ್ಮ ಜವಾಬ್ದಾರಿಯ ಅರಿವನ್ನು ಹೊಂದಿದ್ದಾರೆ ಮತ್ತು ಇನ್ನೂ ಹೆಚ್ಚು ಶ್ರಮಿಸುತ್ತಿದ್ದಾರೆ. ರಾಜಕೀಯ ವಿರೋಧಿಗಳು ಅವರನ್ನು ಅತ್ಯಂತ ಅಪಾಯಕಾರಿ ಎಂದು ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
2026 ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ, ಯುವ ಘಟಕದ ಸದಸ್ಯರು ಕ್ಷೇತ್ರಕ್ಕೆ ಹೋಗಿ ಡಿಎಂಕೆ ಮಾದರಿ 2.0 ಕಡೆಗೆ ಕೆಲಸ ಮಾಡುವಂತೆ ಒತ್ತಾಯಿಸಿದರು. 2026ರಲ್ಲಿ ಜನರ ಮುಂದಿರುವ ಆಯ್ಕೆ ಎಂದರೆ ಅವರು 50 ವರ್ಷ ಮುಂದಕ್ಕೆ ಹೋಗಬೇಕೆ ಅಥವಾ ನಮ್ಮನ್ನು ಕೆಳಕ್ಕೆ ಎಳೆಯುವವರೊಂದಿಗೆ ಹಿಂದಕ್ಕೆ ಹೋಗಬೇಕೆ ಎಂಬುದನ್ನು ತಿಳಿಸಬೇಕು ಎಂದಿದ್ದಾರೆ.
ಡಿಸಿಎಂ ಉದಯನಿಧಿ ಸ್ಟಾಲಿನ್ ಸಹ ವಾಗ್ದಾಳಿ
ತಂದೆ ಸಿಎಂ ಸ್ಟಾಲಿನ್ ಹೇಳಿಕೆಗಳಿಗೆ ಧ್ವನಿಗೂಡಿಸಿರುವ ಉದಯನಿಧಿ ಸ್ಟಾಲಿನ್, ಬಿಜೆಪಿ ತಮಿಳುನಾಡಿನಲ್ಲಿ ನೆಲೆಯೂರಲು ಬಿಡುವುದಿಲ್ಲ. ಸಂಘಿಗಳು ತಮಿಳುನಾಡನ್ನು ಮುಟ್ಟಲು ಸಾಧ್ಯವಿಲ್ಲ. ನಿಮ್ಮ ಕನಸಿನಲ್ಲಿಯೂ ನೀವು ಅದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಶಾ ಹೆಸರೇಳದೇ ಕಿಡಿಕಾರಿದ್ದಾರೆ (ಏಜೆನ್ಸೀಸ್)