ಶಿಕ್ಷಣ ಸಚಿವ ಬ್ರಾತ್ಯ ಬಸು 
ದೇಶ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 50 ಸೀಟು ದಾಟಲ್ಲ; ಅಮಿತ್ ಶಾರ 2/3 ಮ್ಯಾಜಿರಿಟಿ ಮಾತಿಗೆ ಟಿಎಂಸಿ ತಿರುಗೇಟು | TMC

ಕೋಲ್ಕತ್ತಾ: ಕೆಲವೇ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 2/3ರಷ್ಟು ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಆಡಳಿತರೂಢ ಟಿಎಂಸಿ, ಬಿಜೆಪಿ 50 ಸೀಟು ದಾಟಲ್ಲ ಎಂದಿದೆ. 
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಹಿರಿಯ ಟಿಎಂಸಿ ನಾಯಕ ಮತ್ತು ರಾಜ್ಯ ಶಿಕ್ಷಣ ಸಚಿವ ಬ್ರಾತ್ಯ ಬಸು, ಅಮಿತ್ ಶಾ ರಾಜ್ಯಕ್ಕೆ ಬಂದು ಸುಳ್ಳು ಹರಡುತ್ತಿದ್ದು, ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ 50 ಸ್ಥಾನಗಳನ್ನು ದಾಟುವುದಿಲ್ಲ. ಅವಮಾನಕಾರ ಸೋಲನ್ನು ಅನುಭವಿಸುತ್ತದೆ. ಅಮಿತ್ ಶಾ ಅವರು ರಾಜ್ಯಕ್ಕೆ ಪ್ರವಾಸಿ ರೀತಿ ಬಂದು ಹೋಗುತ್ತಲೇ ಇರುತ್ತಾರೆ. ಅಂತಹ ಭೇಟಿಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವೆ ಶಶಿ ಪಂಜಾ ಮಾತನಾಡಿ, ರಾಜ್ಯದಲ್ಲಿ ಏನಾದರೂ ಆಕಸ್ಮಿಕ ಘಟನ ನಡೆದ್ರೆ ನಮ್ಮ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುತ್ತದೆ. ಅಪರಾಧಿಗಳನ್ನು ಬಂಧಿಸುತ್ತದೆ. ಆದರೆ ಬಿಲ್ಕಿಸ್ ಬಾನೋ ಅವರ ಅತ್ಯಾಚಾರಿ ಅಪರಾಧಿಗಳಿ ನಿಮ್ಮ ಪಕ್ಷದ ಕಾರ್ಯಕರ್ತರು ಹಾರ ಹಾಕಿದಂತೆ, ಕುಲದೀಪ್ ಸೆಂಗಾರ್ ಹಾಗೂ ಬ್ರಿಜ್ ಭೂಷಣ್ ನಿಮ್ಮ ಪಕ್ಷ ರಕ್ಷಿಸಿದಂತೆ ನಾವು ಮಾಡಲ್ಲ. ನಮಗೆ ಮಹಿಳಾ ಭದ್ರತೆಯ ಬಗ್ಗೆ ಉಪನ್ಯಾಸ ನೀಡಲು ಬರಬೇಡಿ ಎಂದು ಕಿಡಿಕಾರಿದ್ದಾರೆ.
ಅಮಿತ್ ಶಾ ಹೇಳಿದ್ದೇನು? 
ಕೇಂದ್ರ ಗೃಹಸಚಿವ ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯದ ಪ್ರವಾಸದಲ್ಲಿದ್ದು, ಮುಂದಿನ ವಿಧಾನಸಭೆ ಚುನಾವಣೆಗಾಗಿ ಸ್ಥಳೀಯ ನಾಯಕರ ಜೊತೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಅವರು, ನಾವು ಒಳನುಸುಳುಕೋರರನ್ನು ಗುರುತಿಸವುದಲ್ಲದೇ ಅವರನ್ನು ಓಡಿಸುತ್ತೇವೆ. ಈಗಾಗಲೇ ಜನ ನಿರ್ಧರಿಸಿದ್ದಾರೆ, 2026ರ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದ್ದರು.
ಮಹಿಳಾ ಸಂರಕ್ಷಣೆ ಕುರಿತು ಟಿಎಂಸಿಯನ್ನು ಟೀಕಿಸಿದ್ದ ಅವರು, ಸಂಜೆ 7 ಗಂಟೆಯ ನಂತರ ಮಹಿಳೆಯರು ತಮ್ಮ ಮನೆಗಳಿಂದ ಹೊರಗೆ ಕಾಲಿಡಬಾರದು ಎಂದು ಅಧಿಕೃತವಾಗಿ ಹೇಳಲಾಗಿದೆ. ನಾವು ಯಾವ ಯುಗದಲ್ಲಿ ಬದುಕುತ್ತಿದ್ದೇವೆ? ನಾವು ಮೊಘಲ್ ಕಾಲದಲ್ಲಿ ಬದುಕುತ್ತಿದ್ದೇವೆಯೇ? ಎಂದು ಮಮತಾ ಬ್ಯಾನರ್ಜಿಯವರನ್ನು ಟೀಕಿಸಿದ್ದರು (ಏಜೆನ್ಸೀಸ್).