ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ
ನವದೆಹಲಿ: ಮತದಾನದ ಹಕ್ಕನ್ನು ದುರ್ಬಲಗೊಳಿಸಲು ಚುನಾವಣೆ ಪ್ರಕ್ರಿಯೆಯನ್ನೇ ಉದ್ದೇಶಪೂರ್ವಕವಾಗಿ ಅನುಮಾನಸ್ಪದಗೊಳಿಸಲಾಗಿದ್ದು, ಬ್ಯಾಲೆಟ್ ಪೇಪರ್‌ಗಳ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ತನ್ನ ಶಕ್ತಿಯನ್ನು ಸಾಬೀತುಪಡಿಸಲಿ ಎಂದು ಭಾನುವಾರ(ಡಿ. 14) ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanka Gandhi) ಸವಾಲು ಹಾಕಿದ್ದಾರೆ.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್‌ನ 'ವೋಟ್ ಚೋರ್, ಗಡ್ಡಿ ಛೋಡ್' ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಬೆಂಬಲವಿಲ್ಲದೆ ಬಿಜೆಪಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಮತಗಳ್ಳತನದಿಂದ ಗೆಲುವು ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಹೆಸರುಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ. ದೇಶದ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅವರು ಹೇಗೆ ಪಿತೂರಿ ನಡೆಸಿದರು ಎಂಬುದಕ್ಕೆ ಒಂದು ದಿನ ಅವರು ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.
ನಾನು ಭಾರತೀಯ ಜನತಾ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಅವರು ಒಮ್ಮೆ ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ನ್ಯಾಯಯುತ ಚುನಾವಣೆಯನ್ನು ನಡೆಸಿ ಗೆಲ್ಲಲಿ ನೋಡೋಣ. ಅವರು ಎಂದಿಗೂ ಗೆಲ್ಲಲು ಸಾಧ್ಯವಾಗಲ್ಲ. ಈ ಸತ್ಯ ಅವರಿಗೂ ತಿಳಿದಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಡೀ ವಿರೋಧ ಪಕ್ಷಗಳು ಚುನಾವಣೆ ಆಯೋಗವನ್ನು ನಂಬುತ್ತಿಲ್ಲ. ಚುನಾವಣೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸುತ್ತಿವೆ. ಚುನಾವಣೆ ಘೋಷಣೆ, ಮತದಾರರ ಪಟ್ಟಿ, ಮಾದರಿ ನೀತಿ ಸಂಹಿತೆ, ಪ್ರಚಾರ, ಮತದಾನ, ಎಣಿಕೆ, ಇವಿಎಂಗಳು ಮತ್ತು ಫಲಿತಾಂಶಗಳಿಂದ ಹಿಡಿದು ಪ್ರತಿಯೊಂದು ಹೆಜ್ಜೆಯನ್ನೂ ಅನುಮಾನಸ್ಪದವಾಗಿ ನೋಡುತ್ತಿದ್ದಾರೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಸರ್ಕಾರದ ಮುಂದೆ ಭಾಗುವಂತೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರನ್ನು ನೋಡಿ ಅವರು, ತತ್ತರಿಸಿರುವಂತೆ ಕಾಣುತ್ತಿದ್ದಾರೆ. ಸಂಸತ್ನಲ್ಲಿ ನಾನು ನೋಡುತ್ತೇನೆ ಅವರಲ್ಲಿ ಆತ್ಮವಿಶ್ವಾಸ ಕುಸಿದಿದೆ. ಜನರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿರುವುದರಿಂದ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗ್ತಿಲ್ಲ ಎಂದು ಕುಟುಕಿದ್ದಾರೆ
ಈ ಸರ್ಕಾರ ಪ್ರತಿಯೊಂದು ರಂಗದಲ್ಲೂ ವಿಫಲವಾಗಿದೆ. ಮತ್ತು ರೂಪಾಯಿ ಈಗ ಅಮೆರಿಕನ್ ಡಾಲರ್ ವಿರುದ್ಧ 90 ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 60 ಇದ್ದಾಗ, ಬೀದಿಗಳಲ್ಲಿ ಯಾರು ಅಳುತ್ತಿದ್ದರು? ನರೇಂದ್ರ ಮೋದಿಜಿ ನಿಯಮಿತವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಈಗ ಏನಾಯಿತು? ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).