Lord Ram was Muslim | ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ
Lord Ram was Muslim: ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ, ಶ್ರೀರಾಮ ಮುಸ್ಲಿಂ ಎಂದು ಹೇಳಿಕೆ ನೀಡಿದ ವಿಡಿಯೋವೊಂದು ವೈರಲ್ ಆಗಿದ್ದು, ಇದು ಹೊಸ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕರುಗಳು, ಈ ಹೇಳಿಕೆ ಹಿಂದೂ ನಂಬಿಕೆಗೆ ಮಾಡಿದ ಅವಮಾನ ಎಂದು ಕರೆದಿದ್ದಾರೆ.
ಬಂಗಾಳಿ ಭಾಷೆಯಲ್ಲಿ ಭಾಷಣ ಮಾಡಿರುವ ಮಿತ್ರಾ, ಹಿಂದೂ ಶ್ಲೋಕವನ್ನು ಪಠಿಸುವ ಮೂಲಕ ತಮ್ಮ ಮಾತುಗಳನ್ನು ಪ್ರಾರಂಭಿಸಿದರು ಮತ್ತು ಹಿಂದೂ ಧರ್ಮದ ಬಗೆಗಿನ ಬಿಜೆಪಿಯ ವ್ಯಾಖ್ಯಾನವನ್ನು ಟೀಕಿಸಿದರು. ತಮ್ಮ ಹೇಳಿಕೆಗಳು ಧರ್ಮವನ್ನು ಗುರಿಯಾಗಿಸಿ ನೀಡಿದ್ದಲ್ಲ, ಬದಲಾಗಿ ಹಿಂದೂ ಧರ್ಮದ ಬಗ್ಗೆ ಬಿಜೆಪಿ ನಾಯಕತ್ವದ ತಿಳುವಳಿಕೆಯನ್ನು ಪ್ರಶ್ನಿಸುವ ಇಚ್ಛೆ ಹೊಂದಿವೆ ಎಂದು ಹೇಳಿದರು.
ವೈಯಕ್ತಿಕ ಸಂವಾದವೊಂದನ್ನು ನೆನಪಿಸಿಕೊಂಡ ಕಾಮರ್ಹತಿ ಕ್ಷೇತ್ರದ ಶಾಸಕ ಮಿತ್ರಾ, ಬಿಜೆಪಿಯ ಹಿರಿಯ ನಾಯಕರೊಬ್ಬರಿಗೆ ರಾಮ ಹಿಂದೂ ಎಂದು ಸಾಬೀತುಪಡಿಸಲು ಸವಾಲು ಹಾಕಿದ್ದಾಗಿ ತಿಳಿಸಿದರು. ನಾನು ಅವರಿಗೆ ಹೇಳಿದೆ, ರಾಮ ಹಿಂದೂ ಎಂದು ನನಗೆ ಸಾಬೀತುಪಡಿಸಿ. ರಾಮನ ಉಪನಾಮ ಏನೆಂದು ಹೇಳಿ ಎಂದು ಪ್ರಶ್ನಿಸಿದ್ದೆ, ಹಾಜರಿದ್ದ ಯಾರೂ ಕೂಡ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಬಂಗಾಳದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸಹ ಇದಕ್ಕೆ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದ್ದಾರೆ.
ಮಿತ್ರಾ ಅವರು ನಂತರ ಒಬ್ಬ ಹಿಂದೂ ಸಾಧು ತಮಗೆ ಭಗವಾನ್ ರಾಮನ ಉಪನಾಮ "ರಾಮ್ಜೇಠ್ಮಲಾನಿ" ಎಂದು ಹೇಳಿದ್ದರು ಎಂದು ಆರೋಪಿಸಿದರು, ಈ ಹೇಳಿಕೆಯನ್ನು ಅವರು ತಮ್ಮ ಭಾಷಣದಲ್ಲಿ ಅಪಹಾಸ್ಯ ಮಾಡಿದರು. "ಯಾವುದೇ ಹಿಂದೂ ಇದನ್ನು ನಂಬುತ್ತಾರೆಯೇ? ಅವರು ಅಂತಹ ಜನರನ್ನು ನಂಬುತ್ತಾರೆಯೇ ಮತ್ತು ಅವರ ಪೂಜೆಯನ್ನು ಸಲ್ಲಿಸುತ್ತಾರೆಯೇ?" ಎಂದು ಮಿತ್ರಾ ಹೇಳಿದರು. ಅವರ ಹೇಳಿಕೆಗಳು ಬಿಜೆಪಿಯ ಹಿಂದೂ ಧರ್ಮದ ಮೇಲ್ನೋಟದ ತಿಳುವಳಿಕೆ ಎಂದು ಅವರು ವಿವರಿಸಿದ್ದನ್ನು ಅಪಹಾಸ್ಯ ಮಾಡುವ ಉದ್ದೇಶವನ್ನು ಹೊಂದಿವೆ ಎಂದು ಪ್ರತಿಪಾದಿಸಿದರು.
ಹೇಳಿಕೆಯ ಕುರಿತಾದ ರಾಜಕೀಯ ವಿವಾದ ಬಗ್ಗೆ ಯಾವುದೇ ಭಯವಿಲ್ಲ ಎಂದಿರುವ ಮಿತ್ರ, ನಾನು ಮದನ್ ಮಿತ್ರ. ನೀವು ಇದನ್ನು ಭಾರತದಾದ್ಯಂತ ಹರಡಬಹುದು. ಬಿಜೆಪಿ ಏನು ಮಾಡುತ್ತದೆ? ಅವರು ನನ್ನನ್ನು ಸೋಲಿಸುತ್ತಾರೆಯೇ? ಎಂದು ಪ್ರಶ್ನಿಸುತ್ತಾ, ಭಗವದ್ಗೀತೆಯ ಕೆಲ ಸಾಲುಗಳನ್ನು ಸಹ ಉಲ್ಲೇಖಿಸಿದರು.
ಬಿಜೆಪಿ ತಿರುಗೇಟು
ಶಾಸಕ ಮಿತ್ರಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಪ್ರಭು ಶ್ರೀರಾಮ ಹಿಂದೂ ಅಲ್ಲ, ಮುಸ್ಲಿಂ ಆಗಿದ್ದರು ಎಂಬ ಟಿಎಂಸಿ ಶಾಸಕ ಮದನ್ ಮಿತ್ರಾ ಮಾತು ಹಿಂದೂ ನಂಬಿಕೆಗೆ ಉದ್ದೇಶಪೂರ್ವಕವಾಗಿ ಮಾಡಿರುವ ಅವಮಾನವಾಗಿದೆ. ಟಿಎಂಸಿ ಹಿಂದೂ ನಂಬಿಕೆಯ ಮೇಲೆ ದೈನಂದಿನ ದಾಳಿಗೆ ಇಳಿದಿರುವುದಕ್ಕೆ ಇದೇ ನೈಜ ಉದಾಹರಣೆ. ತಮ್ಮ ಮತ ಬ್ಯಾಂಕ್ ಸಮಾಧಾನಪಡಿಸಲು ಅಗ್ಗದ ಪ್ರಚೋದನೆ. ಇದು ಮಮತಾ ಬ್ಯಾನರ್ಜಿ ಅವರ ಏಕೈಕ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ(ಏಜೆನ್ಸೀಸ್).