ಬಿಜೆಪಿ ಹಂಚಿಕೊಂಡಿರುವ ತೇಜಸ್ವಿ ಯಾದವ್ ಪೋಸ್ಟರ್ 
ದೇಶ

Tejashwi Yadav's missing | ತೇಜಸ್ವಿ ಯಾದವ್​ ಕಾಣೆಯಾಗಿದ್ದಾರಂತೆ... ಬಿಜೆಪಿ ಪೋಸ್ಟ್​ ಹಿಂದಿನ ಮರ್ಮವೇನು.?

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಹೀನಾಯ ಸೋಲನುಭವಿಸಿದ ಬಳಿಕ ವಿಧಾನಸಭೆಯ ವಿಪಕ್ಷ ನಾಯಕ ತೇಜಸ್ವಿ ಯಾದವ್ ನಾಪತ್ತೆಯಾದ ಪೋಸ್ಟರ್​ವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಆರ್‌ಜೆಡಿ ನಾಯಕ ಮಾಧ್ಯಮಗಳಿಗೆ ಮುಖ ತೋರಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ.
ಇತ್ತೀಚಿನ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲಿನ ಬಳಿಕ ತೇಜಸ್ವಿ ಯಾದವ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದ್ದು, ವಿಪಕ್ಷಗಳ ಒಕ್ಕೂಟದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಸೋಲಿನ ಮುಖಭಂಗದ ನಡುವೆ ತೇಜಸ್ವಿ ಯಾದವ್ ತಮ್ಮ ಸಹೋದರಿ ಹೊಣೆಗಾರಿಕೆಯ ಕೊರತೆಯನ್ನು ಉಲ್ಲೇಖಿಸಿ ಪಕ್ಷ ಮತ್ತು ಕುಟುಂಬ ಎರಡರೊಂದಿಗಿನ ಸಂಬಂಧವನ್ನು ಕಡಿದುಕೊಂಡ ಕಾರಣ, ಮನೆಯ ವಿಷಯ ಬೀದಿಗೆ ಬಂದವು.

ವಿಪಕ್ಷ ನಾಯಕರಾಗಿ ತೇಜಸ್ವಿ ಆಯ್ಕೆ

ನವೆಂಬರ್ 29 ರಂದು ಮಹಾಘಟಬಂಧನ್ ಶಾಸಕರು ತೇಜಸ್ವಿ ಯಾದವ್​ರನ್ನು ವಿಧಾನಸಭೆಯಲ್ಲಿ ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು. ಐದು ದಿನಗಳ ಶಾಸಕಾಂಗ ಅಧಿವೇಶನಕ್ಕೂ ಮುನ್ನ ಪಾಟ್ನಾದಲ್ಲಿ ಆರ್‌ಜೆಡಿ ನಾಯಕರು ಆಯೋಜಿಸಿದ್ದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

2025 ರ ಬಿಹಾರ ಚುನಾವಣೆ

2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಎನ್‌ಡಿಎ ಒಟ್ಟು 202 ಕ್ಷೇತ್ರಗಳಲ್ಲಿ ಗೆದ್ದು ಅಭೂತಪೂರ್ವ ಜಯ ಸಾಧಿಸಿತು. ಬಿಜೆಪಿ 89 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಇತ್ತ ಜೆಡಿಯು 85 ಸ್ಥಾನಗಳಿಗೆ ಪಡೆಯಿತು. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ 19, ಎಚ್‌ಎಎಂ ಮತ್ತು ಆರ್‌ಎಲ್‌ಎಂ ಕ್ರಮವಾಗಿ 5 ಮತ್ತು 4 ಕ್ಷೇತ್ರಗಳಲ್ಲಿ ಜಯಸಾಧಿಸಿದವು. ಈ ಕಡೆ ಮಹಾಘಟಬಂಧನ್ ಹೀನಾಯ ಸೋಲನ್ನು ಅನುಭವಿಸಿದ್ದು, 243 ಸಂಖ್ಯಾಬಲವಿರುವ ಬಿಹಾರ ವಿಧಾನಸಭೆಯಲ್ಲಿ 35 ಸ್ಥಾನಗಳನ್ನು ಮಾತ್ರ ಗಳಿಸಿತು. 2020 ರಲ್ಲಿ ಅತಿದೊಡ್ಡ ಪಕ್ಷವಾಗಿದ್ದ ಆರ್‌ಜೆಡಿ 25 ಸ್ಥಾನಗಳಿಗೆ ಇಳಿದರೆ, ಕಾಂಗ್ರೆಸ್ ಕೇವಲ ಆರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು(ಏಜೆನ್ಸೀಸ್​).