Nitin Nabin | ನಿತಿನ್ ನಬಿನ್​ 
ದೇಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕೌಂಟ್ ಡೌನ್..ಜನವರಿ 20ರೊಳಗೆ ನಿತಿನ್ ನಬಿನ್ ಪಟ್ಟಾಭಿಷೇಕ..? | Nitin Nabin

ದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕೊನೆಗೂ ಮೂಹೂರ್ತ ಕೂಡಿ ಬಂದಂತಿದ್ದು, ಜನವರಿ 15 ರ ಬಳಿಕ ನೂತನ ಅಧ್ಯಕ್ಷರ ಆಯ್ಕೆಗಾಗಿ ಬಿಜೆಪಿಯ ಎಲ್ಲಾ ರಾಜ್ಯ ಘಟಕದ ಮುಖ್ಯಸ್ಥರನ್ನು ದೆಹಲಿಗೆ ಕರೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಜನವರಿ 18 ಮತ್ತು ಜನವರಿ 20 ರ ನಡುವೆ ರಾಷ್ಟ್ರೀಯ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಜನವರಿ 20 ರೊಳಗೆ ನೂತನ ಅಧ್ಯಕ್ಷರಾಗಿ ನಿತಿನ್ ನಬಿನ್​ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಬಿಜೆಪಿ ಆಡಳಿತವಿರುವ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯು ಪೂರ್ಣಗೊಂಡಿದ್ದು, 37 ರಾಜ್ಯಗಳಲ್ಲಿ, 29 ರಾಜ್ಯಗಳು ತಮ್ಮ ಆಂತರಿಕ ಚುನಾವಣೆಗಳನ್ನು ಅಂತಿಮಗೊಳಿಸಿವೆ
ಈ ರಾಜ್ಯಗಳ ಮುಖ್ಯಸ್ಥರು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ನಬಿನ್ ಅವರ ಉಮೇದುವಾರಿಕೆಯನ್ನು ಬೆಂಬಲಿಸುವ ಒಂದು ಸೆಟ್ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮಂಡಳಿಯ ಸದಸ್ಯರು ಮತ್ತೊಂದು ಸೆಟ್ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ನಿತಿನ್ ನಬಿನ್ ಅವರನ್ನು ಬೆಂಬಲಿಸುವ ನಾಮಪತ್ರಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಹಿಗಳನ್ನು ಸಹ ಹೊಂದಿರುತ್ತವೆ ಎಂದು ಮೂಲಗಳು ತಿಳಿಸಿವೆ.

ನಿತಿನ್ ನಬಿನ್ ನಾಮಪತ್ರ ಸಲ್ಲಿಕೆ..

ನಿತಿನ್ ನಬಿನ್ ಮಾತ್ರವೇ ನಾಮಪತ್ರ ಸಲ್ಲಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಬಿಜೆಪಿಯ ಮುಖ್ಯ ಚುನಾವಣಾ ಅಧಿಕಾರಿ ಕೆ. ಲಕ್ಷ್ಮಣ್ ನಾಮಪತ್ರಗಳ ಪರಿಶೀಲನೆಯ ಬಳಿಕ, ಅವಿರೋಧವಾಗಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರನ್ನು ಈ ಸಂದರ್ಭದಲ್ಲಿ ದೆಹಲಿಯಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ.
2029 ರ ಲೋಕಸಭಾ ಚುನಾವಣೆ ಮುಗಿಯುವವರೆಗೂ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರೇ ಮುಂದುವರೆಯುವುದು ಖಾತ್ರಿಯಾಗಿದೆ, ಯುವ ನಾಯಕತ್ವವನ್ನು ಪ್ರಸ್ತುತಪಡಿಸುವ ಸಲುವಾಗಿಯೇ ಪಕ್ಷ ಈ ತೀರ್ಮಾನಕ್ಕೆ ಬಂದಿರುವುದು ಸತ್ಯ.

ಯಾರು ನಿತಿನ್ ನಬಿನ್?

ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿರುವ 45 ವರ್ಷದ ನಬಿನ್, ಭಾನುವಾರ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇವರೇ ಮುಂಬರುವ ರಾಷ್ಟ್ರೀಯ ಅಧ್ಯಕ್ಷರಾಗುವ ಸಾಧ್ಯತೆ ಇದ್ದು, ಕಳೆದ ಸಲ ನಡ್ಡಾ ರಾಷ್ಟ್ರೀಯ ಅಧ್ಯಕ್ಷರಾಗುವ ಮುನ್ನ ಅಮಿತ್​ ಷಾ ನೇತೃತ್ವದಲ್ಲಿ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದರು.
ಬಿಜೆಪಿಯ ಹಿರಿಯ ಮತ್ತು ಮಾಜಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ ನಬಿನ್​​ರನ್ನು ಕ್ರಿಯಾಶೀಲ, ಸೈದ್ಧಾಂತಿಕವಾಗಿ ಬೇರೂರಿರುವ ಮತ್ತು ಸಂಘಟನೆಗೆ ಆಳವಾಗಿ ಬದ್ಧರಾಗಿರುವ ವ್ಯಕ್ತಿ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿನ್ನೆಲೆಯಿಂದ ಬಂದವರಾಗಿದ್ದು, ಐದು ಬಾರಿ ಶಾಸಕರಾಗಿರುವ ನಬಿನ್ ಪಾಟ್ನಾದ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಎರಡು ಬಾರಿ ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ(ಏಜೆನ್ಸೀಸ್​).