UP SIR  
ದೇಶ

ಯುಪಿಯಲ್ಲಿ ಬಿಜೆಪಿಗೆ ಎಸ್​ಐಆರ್​ ಶಾಕ್!... 2.89 ಕೋಟಿ ಮತದಾರರ ಹೆಸರು ಡಿಲೀಟ್..ಹೊಸ ಮಿಷನ್ ಆರಂಭಿಸಿದ ಕಮಲ ಕಲಿಗಳು | UP SIR

ಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಖರಣೆಯಲ್ಲಿ 2.89 ಕೋಟಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎನ್ನುವ ಅಂಶ ಕರಡು ಪಟ್ಟಿ ಬಿಡುಗಡೆಯಾದ ಬಳಿಕ ತಿಳಿದುಬಂದಿದ್ದು, ಇದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಮತ ನಷ್ಟವನ್ನು ತಡೆಗಟ್ಟಲು ಬಿಜೆಪಿ ಮಿಷನ್ ಮೋಡ್‌ಗೆ ಇಳಿದಿದೆ ಮತ್ತು ಅನೇಕ ತುರ್ತು ಕ್ರಮಗಳನ್ನು ತೆಗೆದುಕೊಂಡಿದೆ ಎನ್ನಲಾಗಿದ್ದು, ಪ್ರಸ್ತುತ ಎಸ್​ಐಆರ್​ ಪ್ರಕ್ರಿಯೆ ನಡೆಯುತ್ತಿರುವ ಎಲ್ಲಾ 12 ರಾಜ್ಯಗಳಲ್ಲಿ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮತದಾರರ ಹೆಸರನ್ನು ಡಿಲೀಟ್​ ಮಾಡಲಾಗಿದೆ.
ರಾಜ್ಯ ರಾಜಧಾನಿ ಲಖನೌದಲ್ಲಿ ಅತಿ ಹೆಚ್ಚು (ಸುಮಾರು ಶೇ. 30 ರಷ್ಟು) ಮತದಾರರ ಹೆಸರನ್ನು ಡಿಲೀಟ್​ ಮಾಡಲಾಗಿದ್ದು, ಗಾಜಿಯಾಬಾದ್‌ನಲ್ಲಿ ಶೇ. 28, ಪ್ರಮುಖ ನಗರಗಳಾದ ಬಲರಾಂಪುರ, ಕಾನ್ಪುರ, ಪ್ರಯಾಗ್‌ರಾಜ್, ಮೀರತ್, ಗೌತಮ್ ಬುದ್ಧ ನಗರ, ಹಾಪುರ್, ಸಹರಾನ್‌ಪುರ ಮತ್ತು ಆಗ್ರಾದಲ್ಲಿ ಸಾಕಷ್ಟು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ಪರಿಸ್ಥಿತಿಯನ್ನು ಅತ್ಯಂತ ಗಂಭೀರವೆಂದು ಪರಿಗಣಿಸಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಪಂಕಜ್ ಚೌಧರಿ ಮತ್ತು ಇತರರು ವರ್ಚುವಲ್ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಈ ವೇಳೆ ಸಂಸದರು, ಶಾಸಕರು, ವಿಧಾನಪರಿಷತ್​ ಸದಸ್ಯರು, ಸಚಿವರು, ಸಂಘಟನೆಯ ಜವಾಬ್ದಾರಿ ಹೊತ್ತವರು, ಜಿಲ್ಲಾ ಅಧ್ಯಕ್ಷರು ಸೇರಿದಂತೆ ಹಲವಾರು ಪಕ್ಷದ ನಾಯಕರು ಭಾಗವಹಿಸಿದ್ದರು ಎನ್ನಲಾಗಿದೆ.
ಶಾಸಕರುಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಸೂಚಿಸಲಾಗಿದ್ದು, ವೈಯಕ್ತಿಕ ಚುನಾವಣಾ ಸ್ಪರ್ಧೆ ಎಂಬಂತೆ ಪರಿಗಣಿಸಲು ಸೂಚನೆ ನೀಡಲಾಗಿದೆ. ಸಂಘಟನೆಯ ಜವಾಬ್ದಾರಿ ಹೊತ್ತಿರುವ ಪದಾಧಿಕಾರಿಗಳು ವಿಧಾನಸಭೆ, ಮಂಡಲ ಮತ್ತು ವಾರ್ಡ್ ಮಟ್ಟಗಳಿಗೆ ಫಾರ್ಮ್ -6 ತಲುಪಿಸಬೇಕು, ಸಾಂಸ್ಥಿಕ ಹಾನಿಯನ್ನು ತಡೆಗಟ್ಟಲು ನಿರಂತರ ಪ್ರಯತ್ನದ ಅಗತ್ಯವನ್ನು ಪಕ್ಷದ ನಾಯಕರು ಒತ್ತಿ ಹೇಳಿದ್ದು, ಪಕ್ಷಕ್ಕೆ ನಷ್ಟವಾಗದ ರೀತಿಯಲ್ಲಿ ಪರಿಶ್ರಮ ವಹಿಸಬೇಕು ಎಂದು ತಿಳಿಸಲಾಗಿದೆ.
ಕೇಂದ್ರ ಕಚೇರಿಗೆ ದೈನಂದಿನ ಬೂತ್ ಮಟ್ಟದ ವರದಿಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಮತ್ತು ನಗರ ಪ್ರದೇಶದ ಮತಗಳಿಗೆ ವಿಶೇಷ ಗಮನ ನೀಡುವಂತೆ ನಿರ್ದೇಶನ ನೀಡಿದ್ದು, ಜಿಲ್ಲಾಧ್ಯಕ್ಷರು 10 ಜನರ ತಂಡಗಳನ್ನು ರಚಿಸಿ ಪ್ರತಿದಿನ ಸಂಜೆ ದೈನಂದಿನ ಪ್ರಗತಿ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ಅಭಿಯಾನದ ಸಮಯದಲ್ಲಿ ಎಲ್ಲಾ ಪದಾಧಿಕಾರಿಗಳು ಬೂತ್‌ಗಳಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದ್ದು, ಜನವರಿ 17 ರಂದು ಸಮಗ್ರ ಪರಿಶೀಲನೆಯನ್ನು ನಿಗದಿಪಡಿಸಲಾಗಿದೆ.
ಪಕ್ಷದ ಹೈಕಮಾಂಡ್ ಈ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಒಬಿಸಿ ಮೋರ್ಚಾ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಕೆ. ಲಕ್ಷ್ಮಣ್ ಅವರನ್ನು ನಿಯೋಜಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ(ಏಜೆನ್ಸೀಸ್​).