ಜನರ ಧ್ವನಿ ಹತ್ತಿಕ್ಕುವುದೇ ಬಿಜೆಪಿ-ಆರ್‌ಎಸ್‌ಎಸ್ ಗುರಿ: ಅಧಿಕಾರ ಕೇಂದ್ರೀಕರಣದ ವಿರುದ್ಧ ರಾಹುಲ್ ಗಾಂಧಿ ಗುಡುಗು  
ದೇಶ

ಜನರ ಧ್ವನಿ ಹತ್ತಿಕ್ಕುವುದೇ ಬಿಜೆಪಿ-ಆರ್‌ಎಸ್‌ಎಸ್ ಗುರಿ: ಅಧಿಕಾರ ಕೇಂದ್ರೀಕರಣದ ವಿರುದ್ಧ ರಾಹುಲ್ ಗಾಂಧಿ ಗುಡುಗು | Rahul Gandhi

ತಿರುವನಂತಪುರಂ: ದೇಶದಲ್ಲಿ ಅಧಿಕಾರವನ್ನು ಕೇಂದ್ರೀಕರಿಸುವ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಸೋಮವಾರ (ಜ.19) ಆರೋಪಿಸಿದ್ದಾರೆ.
ಈ ಬಗ್ಗೆ ಕೇರಳದ ಕೊಚ್ಚಿಯಲ್ಲಿ ನಡೆದ ಯುಡಿಎಫ್ ಮಹಾಪಂಚಾಯತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಿದ್ಧಾಂತಿಕ ಸಂಘರ್ಷವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಗುರು ಆರ್‌ಎಸ್‌ಎಸ್ ಕೇವಲ ಅಧಿಕಾರ ಕೇಂದ್ರೀಕರಣದ ಮೇಲೆ ಗಮನ ಹರಿಸಿದರೆ, ಕಾಂಗ್ರೆಸ್ ಪಕ್ಷವು ಅಧಿಕಾರ ವಿಕೇಂದ್ರೀಕರಣದ ಪರವಾಗಿ ನಿಂತಿದೆ ಎಂದು ವಿಪಕ್ಷನಾಯಕ ಪ್ರತಿಪಾದಿಸಿದ್ದಾರೆ.

ಎರಡು ಸಿದ್ಧಾಂತಗಳ ನಡುವಿನ ಸಮರ

ಭಾರತದ ಪ್ರಜಾಪ್ರಭುತ್ವ ರಚನೆಯನ್ನು ಬಿಜೆಪಿ ವ್ಯವಸ್ಥಿತವಾಗಿ ಹಾಳುಮಾಡುತ್ತಿದೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ

ಬಿಜೆಪಿ-ಆರ್‌ಎಸ್‌ಎಸ್ ಗುರಿ

ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಲ್ಲ ನಿರ್ಧಾರಗಳನ್ನು ಒಂದೇ ಕೇಂದ್ರದಿಂದ ನಿಯಂತ್ರಿಸಲು ಬಯಸುತ್ತವೆ. ಅವರು ಸಾಮಾನ್ಯ ಜನರ ಧ್ವನಿಯನ್ನು ಕೇಳಲು ಸಿದ್ಧರಿಲ್ಲ. ದೆಹಲಿಯಿಂದ ದೇಶವನ್ನಾಳುವ ಅವರ ಈ ಸಿದ್ಧಾಂತವು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ರಾಹುಲ್ ಕಿಡಿಕಾರಿದ್ದಾರೆ.
ಮುಂದುವರೆದು ಮಾತನಾಡಿರುವ ರಾಹುಲ್​, ನನ್ನ ರಾಜಕೀಯ ಹೋರಾಟವು ಕೇವಲ ಅಧಿಕಾರಕ್ಕಲ್ಲ, ಅದು ಜನರ ಧ್ವನಿಯನ್ನು ರಕ್ಷಿಸಲು. ಆರ್‌ಎಸ್‌ಎಸ್ ನಮ್ಮನ್ನು ಮೌನಗೊಳಿಸಲು ಪ್ರಯತ್ನಿಸಬಹುದು. ಆದರೆ ಭಾರತದ ಜನತೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಿಲುವು

ಕಾಂಗ್ರೆಸ್ ಅಧಿಕಾರವು ಸಾಮಾನ್ಯ ಜನರ ಕೈಲಿರಬೇಕು ಎಂದು ನಂಬುತ್ತದೆ. ಅಲ್ಲದೆ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಕಟ್ಟಕಡೆಯ ವ್ಯಕ್ತಿಗೂ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನೀಡುವುದೇ ನಮ್ಮ ಆದ್ಯತೆ ಎಂದು ಗಾಂಧಿ ಸ್ಪಷ್ಟಪಡಿಸಿದರು.

ಜನರ ಧ್ವನಿ ಹತ್ತಿಕ್ಕುವ ಸಂಚು

ಬಿಜೆಪಿಯು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಧ್ವನಿಗಳನ್ನು ಹಡಗಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ಬಿಜೆಪಿಗೆ ದೇಶದ ವೈವಿಧ್ಯತೆಯ ಬಗ್ಗೆ ಗೌರವವಿಲ್ಲ. ಅವರು ಒಂದು ದೇಶ, ಒಂದು ಸಿದ್ಧಾಂತವನ್ನು ಹೇರಲು ಹೊರಟಿದ್ದಾರೆ. ಈ ಮೂಲಕ ಅವರು ಜನರ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ ಎಂದು ರಾಹುಲ್​ ಟೀಕಾಪ್ರಹಾರ ನಡೆಸಿದ್ದಾರೆ.

ಕೇರಳದ ನಿರುದ್ಯೋಗ ಸಮಸ್ಯೆ ಬಗ್ಗೆ ಕಳವಳ

ಕೇರಳದ ಎಲ್‌ಡಿಎಫ್ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದರು. ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ (UDF) ಅಧಿಕಾರಕ್ಕೆ ಬಂದರೆ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಮತ್ತು ಆರ್ಥಿಕ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ರಾಹುಲ್​ ಭರವಸೆ ನೀಡಿದರು,(ಏಜೆನ್ಸೀಸ್)