Assam Election | ಅಸ್ಸಾಂ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  
ದೇಶ

6 ದಶಕದ ಕಾಂಗ್ರೆಸ್ ಆಡಳಿತದಲ್ಲಿ ಆಗದ ಬದಲಾವಣೆ 10 ವರ್ಷದಲ್ಲಿ ಸಾಧ್ಯವಾಗಿದೆ.. ಪ್ರಣಾಳಿಕೆ ಬಿಡುಗಡೆಗೊಳಿಸಿ ನಿರ್ಮಲಾ ಸೀತಾರಾಮನ್ ಟಾಂಗ್ | Assam Election

ದಿಸ್ಪೂರ್​​: ಅಸ್ಸಾಂನ ಮುಂಬರುವ ವಿಧಾನಸಭಾ ಚುನಾವಣೆಗಾಗಿ (Assam Election) ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದ್ದಾರೆ.
ಈ ಪ್ರಣಾಳಿಕೆಯು ಪ್ರಮುಖವಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ, ಜನಕಲ್ಯಾಣ ಯೋಜನೆಗಳು, ಯುವಜನರಿಗೆ ಉದ್ಯೋಗಾವಕಾಶಗಳು, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕೃತವಾಗಿದೆ. ಅದರಲ್ಲೂ ವಿಶೇಷವಾಗಿ ಅಸ್ಸಾಂ ಜನರ ಅಸ್ಮಿತೆ, ಸ್ಥಳೀಯ ಸಮುದಾಯಗಳ ಹಿತರಕ್ಷಣೆ, ಭೂಮಿ ಮತ್ತು ಪರಂಪರೆಯ ರಕ್ಷಣೆಗೆ ಬಿಜೆಪಿ ಹೆಚ್ಚಿನ ಒತ್ತು ನೀಡಿದೆ ಎಂದು ಸೀತಾರಾಮನ್ ವಿವರಿಸಿದರು.
ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕಳೆದ ಹತ್ತು ವರ್ಷಗಳ ಸಾಧನೆಯ ಅಡಿಪಾಯದ ಮೇಲೆ ಈ ಸಂಕಲ್ಪ ಪತ್ರವನ್ನು ಸಿದ್ಧಪಡಿಸಲಾಗಿದ್ದು, ಕಾಂಗ್ರೆಸ್ ಪಕ್ಷದ ಆರು ದಶಕಗಳ ಆಡಳಿತವು ಸಾಧಿಸಲು ಸಾಧ್ಯವಾಗದ ಅಭಿವೃದ್ಧಿಯನ್ನು ಬಿಜೆಪಿ ಕೇವಲ ಒಂದು ದಶಕದಲ್ಲಿ ಮಾಡಿ ತೋರಿಸಿದೆ. ಕೈ ಅವಧಿಯಲ್ಲಿ ಅಸ್ಸಾಂ ಸುಮಾರು 32 ವರ್ಷಗಳ ಕಾಲ ಎಎಫ್‌ಎಸ್‌ಪಿಎ (AFSPA) ಕಾಯ್ದೆಯ ನೆರಳಿನಲ್ಲಿ ಬದುಕಬೇಕಾಯಿತು. ಆದರೆ ಇಂದು ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿದೆ, ಇದು ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ ಎಂದರು.
ಈಶಾನ್ಯ ರಾಜ್ಯಗಳ ದೀರ್ಘಕಾಲೀನ ಪ್ರಗತಿಯ ಬಗ್ಗೆ ಕಾಂಗ್ರೆಸ್ ಎಂದಿಗೂ ಗಂಭೀರವಾಗಿ ಯೋಚಿಸಲಿಲ್ಲ, ಆದರೆ ಬಿಜೆಪಿ ಆಳ್ವಿಕೆಯಲ್ಲಿ ಅವಕಾಶಗಳು ಹೆಚ್ಚಾದ ಕಾರಣ ಅಸ್ಸಾಂನ ಯುವಕರು ಇಂದು ಉದ್ಯೋಗ ಅರಸಿ ಹೊರಹೋಗುವ ಬದಲು ರಾಜ್ಯಕ್ಕೆ ಮರಳುತ್ತಿದ್ದಾರೆ ಎಂದು ಹೇಳಿದರು.

31 ಪ್ರಮುಖ ಅಂಶಗಳ ಪ್ರಣಾಳಿಕೆ

ಬಿಜೆಪಿಯ ಈ ಸಂಕಲ್ಪ ಪತ್ರ ಒಟ್ಟು 31 ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ಭಾರತಕ್ಕೆ ನೀಡುತ್ತಿರುವ ಆದ್ಯತೆಯನ್ನು ಉಲ್ಲೇಖಿಸಿದ ಹಣಕಾಸು ಸಚಿವರು, ಮೋದಿ ಈ ಪ್ರದೇಶಕ್ಕೆ ಬರೋಬ್ಬರಿ 77 ಬಾರಿ ಭೇಟಿ ನೀಡಿದ್ದಾರೆ. ಆದರೆ ಅಸ್ಸಾಂನಿಂದಲೇ ಸಂಸದರಾಗಿ ಆಯ್ಕೆಯಾಗಿ ಪ್ರಧಾನಿಯಾಗಿದ್ದ ಕಾಂಗ್ರೆಸ್ ನಾಯಕರು (ಮನಮೋಹನ್ ಸಿಂಗ್) 10 ಬಾರಿಗಿಂತ ಹೆಚ್ಚು ಇಲ್ಲಿಗೆ ಭೇಟಿ ನೀಡಿರಲಿಕ್ಕಿಲ್ಲ ಎಂದು ಟೀಕಿಸಿದರು.
ಅಸ್ಸಾಂ ಇಂದು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಜನರ ತಲಾವಾರು ಆದಾಯವು ಶೇಕಡಾ 54 ರಷ್ಟು ಏರಿಕೆಯಾಗಿರುವುದು ದೊಡ್ಡ ಸಾಧನೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನವ ಅಸ್ಸಾಂ ನಿರ್ಮಾಣದ ದೃಷ್ಟಿಕೋನವನ್ನು ಇದೇ ವೇಳೆ ಸಭೆಯ ಮುಂದೆ ಇಟ್ಟರು. ಹೂಡಿಕೆ, ಹಣಕಾಸಿನ ವರ್ಗಾವಣೆ ಮತ್ತು ಬೆಳವಣಿಗೆಯ ದರದಲ್ಲಿ ಅಸ್ಸಾಂ ಅಭೂತಪೂರ್ವ ಬದಲಾವಣೆ ಕಂಡಿದ್ದು, ಬಿಜೆಪಿ ಸರ್ಕಾರವು ಕೇವಲ ಭರವಸೆಗಳನ್ನು ನೀಡುವುದಿಲ್ಲ, ಬದಲಾಗಿ ಮಾಡಿದ ಕೆಲಸಗಳ ಆಧಾರದ ಮೇಲೆ ಜನರ ಮುಂದೆ ಮತ ಕೇಳುತ್ತಿದೆ ಎಂದು ಸೀತಾರಾಮನ್ ಹೇಳಿದರು.
ಭೂಮಿಯ ಹಕ್ಕುಗಳು, ಸ್ಥಳೀಯ ಜನರ ಘನತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವಲ್ಲಿ ಬಿಜೆಪಿ ಬದ್ಧವಾಗಿದೆ ಎಂಬ ಭರವಸೆ ನೀಡಿದ ಹಣಕಾಸು ಸಚಿವರು, ಈ ಚುನಾವಣಾ ಪ್ರಣಾಳಿಕೆಯು ಅಸ್ಸಾಂನ ಭವಿಷ್ಯದ ದಶಕದ ಪರಿವರ್ತನೆಗೆ ದಾರಿದೀಪವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು(ಏಜೆನ್ಸೀಸ್​​).