Rahul Foreign Trip Controversy | ರಾಹುಲ್ ವಿದೇಶಿ ಪ್ರವಾಸಗಳ ಬಗ್ಗೆ ಬಿಜೆಪಿ ವಾಗ್ದಾಳಿ 
ದೇಶ

22 ವರ್ಷಗಳಲ್ಲಿ 54 ವಿದೇಶ ಪ್ರವಾಸ, 60 ಕೋಟಿ ವೆಚ್ಚ...ರಾಹುಲ್ ಖರ್ಚು ಮತ್ತು ಆದಾಯದ ಬಗ್ಗೆ ತನಿಖೆಗೆ ಒತ್ತಾಯಿಸಿದ ಬಿಜೆಪಿ | Rahul Foreign Trip Controversy

Rahul Foreign Trip Controversy: ಬುಧವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಗಂಭೀರ ಹಣಕಾಸಿನ ಆರೋಪಗಳನ್ನು ಮಾಡುವುದರೊಂದಿಗೆ ಹೊಸ ರಾಜಕೀಯ ವಿವಾದವೊಂದು ಮುನ್ನೆಲೆಗೆ ಬಂದಿದ್ದು, ಕಳೆದ 22 ವರ್ಷಗಳ ಅವಧಿಯಲ್ಲಿ ರಾಹುಲ್ ಗಾಂಧಿಯವರು ಒಟ್ಟು 54 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದಾರೆ ಎಂದು ಪಾತ್ರಾ ಮಾಹಿತಿ ನೀಡಿದ್ದಾರೆ.
ಈ ಪ್ರವಾಸಗಳಿಗಾಗಿ ಅಂದಾಜು 60 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದಿರುವ ಪಾತ್ರಾ, ಈ ಮೊತ್ತವು ರಾಹುಲ್ ಗಾಂಧಿಯವರ ಅಂದಿನ ಒಟ್ಟು ಗಳಿಕೆಗಿಂತ ಅವರ ಖರ್ಚು ಐದು ಪಟ್ಟು ಹೆಚ್ಚಾಗಿದೆ ಎನ್ನುವುದು ಬಿಜೆಪಿ ವಕ್ತಾರರ ಆರೋಪವಾಗಿದೆ.

ಆದಾಯಕ್ಕಿಂತ ಐದು ಪಟ್ಟು ಹೆಚ್ಚು ಖರ್ಚು ಮಾಡಿದ ರಾಹುಲ್​!

ರಾಹುಲ್ ಗಾಂಧಿ ಅನೇಕ ವರ್ಷಗಳಿಂದ ಚುನಾಯಿತ ಪ್ರತಿನಿಧಿಯಾಗಿ ಸಾರ್ವಜನಿಕ ಜೀವನದಲ್ಲಿದ್ದರೂ, ಅವರ ಅಂತರರಾಷ್ಟ್ರೀಯ ಭೇಟಿಗಳ ವೆಚ್ಚದ ವಿವರಗಳನ್ನು ಇದುವರೆಗೆ ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿರುವ ಪಾತ್ರಾ, ಪ್ರತಿಯೊಂದು ವಿದೇಶಿ ಪ್ರವಾಸದ ಸಂದರ್ಭದಲ್ಲೂ ರಾಹುಲ್​ ಜೊತೆಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ವ್ಯಕ್ತಿಗಳು ಇರುತ್ತಿದ್ದರು ಎಂಬ ಅಂಶವನ್ನು ಸಹ ಪ್ರಸ್ತಾಪಿಸಿದರು. 2013-14 ರಿಂದ 2022-23 ರವರೆಗಿನ ಅಂಕಿಅಂಶಗಳನ್ನು ಉಲ್ಲೇಖಿಸಿದ ಬಿಜೆಪಿ ನಾಯಕ, ಈ ಹತ್ತು ವರ್ಷಗಳಲ್ಲಿ ರಾಹುಲ್ ಗಾಂಧಿ ಘೋಷಿತ ಆದಾಯ ಸುಮಾರು 11 ಕೋಟಿ ರೂಪಾಯಿಗಳಷ್ಟಿತ್ತು, ಆದರೆ ವಿದೇಶ ಪ್ರವಾಸದ ಖರ್ಚು ಮಾತ್ರ 60 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ವಿವರಿಸಿದರು.
ಈ ಬೃಹತ್ ಮೊತ್ತದ ವ್ಯತ್ಯಾಸವು ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದಿರುವ ಪಾತ್ರಾ, ಈ ಪ್ರವಾಸಗಳಿಗೆ ಹಣಕಾಸಿನ ಮೂಲ ಯಾವುದು ಮತ್ತು ಯಾರಾದರೂ ವಿದೇಶಿ ಕಂಪನಿಗಳು ಅಥವಾ ವ್ಯಕ್ತಿಗಳು ಈ ವೆಚ್ಚವನ್ನು ಭರಿಸಿದ್ದಾರೆಯೇ ಎಂಬ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಒತ್ತಿಹೇಳಿದರು. ಒಂದು ವೇಳೆ ವಿದೇಶಿ ಮೂಲಗಳಿಂದ ಹಣಕಾಸಿನ ನೆರವು ಪಡೆದಿದ್ದರೆ, ಅದಕ್ಕೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ವರ್ಷವಾರು ಆದಾಯ ಮತ್ತು ವೆಚ್ಚದ ವಿವರಗಳು

2014-15: ಈ ವರ್ಷದಲ್ಲಿ ರಾಹುಲ್ ಗಾಂಧಿಯವರು ವಿದೇಶ ಪ್ರವಾಸಗಳಿಗಾಗಿ ಸುಮಾರು 4.5 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.
2017-18: ಈ ಸಾಲಿನಲ್ಲಿ ರಾಹುಲ್​ ಅಧಿಕೃತ ಗಳಿಕೆ 1.20 ಕೋಟಿ ರೂ. ಆಗಿದ್ದರೆ, ಪ್ರಯಾಣಕ್ಕಾಗಿ ಮಾಡಲಾದ ವೆಚ್ಚ 6 ಕೋಟಿ ರೂ. ಎಂದು ಆರೋಪಿಸಲಾಗಿದೆ. ಅಂದರೆ ಆದಾಯಕ್ಕಿಂತ ಐದು ಪಟ್ಟು ಹೆಚ್ಚು ಖರ್ಚು ಮಾಡಲಾಗಿದೆ.
2018-19: ಈ ಅವಧಿಯಲ್ಲಿ ಅವರ ಆದಾಯ 1.22 ಕೋಟಿ ರೂ. ಆಗಿತ್ತು, ಆದರೆ ವಿದೇಶಿ ಪ್ರವಾಸಗಳ ವೆಚ್ಚ 3.9 ಕೋಟಿ ರೂ.ಗಳಷ್ಟಿತ್ತು.
2019-20: ರಾಹುಲ್ ಗಾಂಧಿಯವರು 1.39 ಕೋಟಿ ರೂ. ಗಳಿಸಿದರೆ, ಅಂತರರಾಷ್ಟ್ರೀಯ ಪ್ರವಾಸಗಳಿಗಾಗಿ ವ್ಯಯಿಸಿದ ಮೊತ್ತ 4.6 ಕೋಟಿ ರೂ.ಗಳೆಂದು ಪಾತ್ರಾ ತಿಳಿಸಿದ್ದಾರೆ.
2021-22: ಈ ವರ್ಷ ಅವರ ಘೋಷಿತ ಆದಾಯ 1.03 ಕೋಟಿ ರೂ. ಆಗಿತ್ತು, ಆದರೆ ವಿದೇಶ ಪ್ರವಾಸದ ಖರ್ಚು 2.6 ಕೋಟಿ ರೂ.ಗಳಷ್ಟಿತ್ತು ಎಂದು ದಾಖಲೆಗಳು ಹೇಳುತ್ತವೆ.

ಖರ್ಚು ಮತ್ತು ಆದಾಯದ ನಡುವೆ ದೊಡ್ಡ ವ್ಯತ್ಯಾಸ

ಈ ಅಂಕಿಅಂಶಗಳನ್ನು ಮಂಡಿಸಿದ ಸಂಬಿತ್ ಪಾತ್ರಾ, ಒಬ್ಬ ಜನಪ್ರತಿನಿಧಿಯ ಆದಾಯ ಮತ್ತು ಅವರ ಜೀವನಶೈಲಿಯ ವೆಚ್ಚಗಳ ನಡುವೆ ಇಷ್ಟು ದೊಡ್ಡ ವ್ಯತ್ಯಾಸವಿರುವುದು ಆರ್ಥಿಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು. ಕಳೆದ ಎರಡು ದಶಕಗಳಲ್ಲಿ ರಾಹುಲ್ ಗಾಂಧಿ ಆಸ್ತಿ ಮೌಲ್ಯದಲ್ಲಿ ಕಂಡುಬಂದಿರುವ ಭಾರಿ ಏರಿಕೆಯ ಬಗ್ಗೆಯೂ ಬಿಜೆಪಿ ನಾಯಕರು ಆಕ್ಷೇಪ ವ್ಯತ್ತಪಡಿಸಿದ್ದಾರೆ.
2004ರಲ್ಲಿ ರಾಹುಲ್ ಗಾಂಧಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ 55.58 ಲಕ್ಷ ರೂಪಾಯಿ ಎಂದು ಘೋಷಿಸಿದ್ದರು. ಆದರೆ, 2024ರ ಚುನಾವಣಾ ಅಫಿಡವಿಟ್‌ನಲ್ಲಿ ಈ ಮೊತ್ತವು ಸುಮಾರು 21 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕೇವಲ 20 ವರ್ಷಗಳಲ್ಲಿ ಕಂಡುಬಂದಿರುವ ಈ ಆಸ್ತಿ ಬೆಳವಣಿಗೆಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ವಿವರಣೆ ನೀಡುವ ಅಗತ್ಯವಿದೆ ಮತ್ತು ಇದು ತನಿಖೆಗೆ ಒಳಪಡಬೇಕು ಎಂದು ಸಂಬಿತ್ ಪಾತ್ರಾ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ(ಏಜೆನ್ಸೀಸ್​).