Shehzad Poonawalla | ಕೇಸರಿ ಪಾಳಯಕ್ಕೆ ಬಿಗ್ ಶಾಕ್!: ಕಾಂಗ್ರೆಸ್ ಬಂಡಾಯದಿಂದ ಬಿಜೆಪಿ ವಕ್ತಾರ ಹುದ್ದೆಯವರೆಗೆ, 18 ವರ್ಷಗಳ ಪಯಣಕ್ಕೆ ಪೂನಾವಾಲಾ ಇತಿಶ್ರೀ?
ನವದೆಹಲಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ವಕ್ತಾರರಲ್ಲೊಬ್ಬರಾದ ಶೆಹಜಾದ್ ಪೂನಾವಾಲ (Shehzad Poonawalla) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್-ನ್ಯೂಸ್18 ವರದಿ ಮಾಡಿದೆ. ಪೂನಾವಾಲ ವೈಯಕ್ತಿಕ ಕಾರಣಗಳನ್ನು ನೀಡಿ ಬಿಜೆಪಿಯ ಹಿರಿಯ ನಾಯಕರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಈ ಬೆಳವಣಿಗೆಯ ಕುರಿತು ಶೀಘ್ರದಲ್ಲೇ ಅಧಿಕೃತ ಹೇಳಿಕೆ ಹೊರಬೀಳುವ ನಿರೀಕ್ಷೆಯಿದೆ.
ದೃಶ್ಯ ಮಾಧ್ಯಮಗಳ ಚರ್ಚಾಗೋಷ್ಠಿಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದ ಹಾಗೂ ತಮ್ಮ ತೀಕ್ಷ್ಣ ರಾಜಕೀಯ ವಾಗ್ದಾಳಿಗಳಿಂದ ಗುರುತಿಸಿಕೊಂಡಿದ್ದ ಪೂನಾವಾಲ, ಬಿಜೆಪಿ ಪಕ್ಷದ ಪ್ರಮುಖ ಸಾರ್ವಜನಿಕ ಮುಖವಾಗಿದ್ದರು. ಪ್ರಮುಖ ರಾಜಕೀಯ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಿದ್ದರು.
ಸಕ್ರಿಯ ರಾಜಕಾರಣದಿಂದ ನಿರ್ಗಮಿಸುವ ತಮ್ಮ ನಿರ್ಧಾರದ ಕುರಿತು ಪೂನಾವಾಲ ಇತ್ತೀಚೆಗಷ್ಟೇ ಸುಳಿವು ನೀಡಿದ್ದರು. ತಾವು ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ್ದ ಹಳೆಯ ಸಂದರ್ಶನದ ವಿಡಿಯೋವೊಂದನ್ನು ರೀಟ್ವೀಟ್ ಮಾಡಿದ ಮಾರನೇ ದಿನವೇ ಈ ರಾಜೀನಾಮೆ ಸುದ್ದಿ ಹರಿದಾಡುತ್ತಿದೆ. ಆ ಸಂದರ್ಶನದಲ್ಲಿ ಅವರು, ತಾವು ಸುಮಾರು 18 ರಿಂದ 19 ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದು, ತಾವಂದುಕೊಂಡ ಸಾಧನೆಯನ್ನು ತಲುಪಿರುವುದಾಗಿ ಹೇಳಿಕೊಂಡಿದ್ದರು.
ನಾನು ಸುಮಾರು 18-19 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶಿಸಿದ್ದರಿಂದ ಈಗ 18-19 ವರ್ಷಗಳನ್ನು ಪೂರೈಸಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ತಲುಪಬೇಕಾದ ಹಂತವನ್ನು ತಲುಪಿದ್ದೇನೆ ಎಂದು ಭಾವಿಸುತ್ತೇನೆ. 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರವೇ ನಾನು ಸಕ್ರಿಯ ರಾಜಕಾರಣದಿಂದ ದೂರ ಸರಿಯಲು ನಿರ್ಧರಿಸಿದ್ದೆ ಎಂದು ಪೂನಾವಾಲ ಹೇಳಿದ್ದರು. 2024 ರ ಲೋಕಸಭಾ ಚುನಾವಣೆಯ ಗೆಲುವಿನ ನಂತರ, ಮುಂದಿನ ಒಂದು ಅಥವಾ ಎರಡು ವರ್ಷಗಳ ಕಾಲ ಪ್ರಮುಖ ಚುನಾವಣೆಗಳಲ್ಲಿ ಕೆಲಸ ಮಾಡಿ, ಬಳಿಕ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ನಿರ್ಗಮಿಸಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದರು.
ಇನ್ನೊಂದೆಡೆ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಎಕ್ಸ್ ಖಾತೆಯ ಬಯೋ ವಿವರದಲ್ಲಿ ಅವರು ತಮ್ಮನ್ನು ಪ್ರಧಾನಿ ನರೇಂದ್ರ ಮೋದಿ ಅವರ ಆಜೀವ ಅನುಯಾಯಿ (lifelong follower) ಎಂದು ಬರೆದುಕೊಂಡಿದ್ದರೂ, ಅಲ್ಲಿ ಬಿಜೆಪಿ ಎಂಬ ಉಲ್ಲೇಖವಿಲ್ಲ. ಆದರೆ ಅವರ ಇನ್‌ಸ್ಟಾಗ್ರಾಮ್ ಖಾತೆಯ ವಿವರಣೆಯಲ್ಲಿ ಇಂದಿಗೂ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರ ಎಂದೇ ನಮೂದಿಸಲಾಗಿದೆ. ಇಲ್ಲಿಯವರೆಗೂ ಶೆಹಜಾದ್ ಪೂನಾವಾಲ ಅಥವಾ ಬಿಜೆಪಿ ಕಡೆಯಿಂದ ರಾಜೀನಾಮೆಯ ಕುರಿತು ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಮೂಲ ಕಾಂಗ್ರೆಸ್ಸಿಗ ಈ ಪೂನಾವಾಲಾ
ವಕೀಲ ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರರಾಗಿರುವ 38 ವರ್ಷದ ಪೂನಾವಾಲ, ತಮ್ಮ ರಾಜಕೀಯ ವೃತ್ತಿಜೀವನವನ್ನು ಕಾಂಗ್ರೆಸ್ ಪಕ್ಷದಿಂದ ಪ್ರಾರಂಭಿಸಿದ್ದರು. 2017ರಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದು ಅವರು ದೇಶಾದ್ಯಂತ ಸುದ್ದಿಯಾಗಿದ್ದರು. ಕಾಂಗ್ರೆಸ್‌ನ ಆಂತರಿಕ ಸಾಂಸ್ಥಿಕ ಚುನಾವಣೆಗಳು ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಫಿಕ್ಸ್ ಆಗಿವೆ ಎಂದು ಗಂಭೀರ ಆರೋಪ ಮಾಡಿದ್ದರು.
ಈ ಘಟನೆಯು ಕಾಂಗ್ರೆಸ್ ಪಕ್ಷದೊಂದಿಗೆ ಅವರ ಸಂಬಂಧವನ್ನು ಹಳಸುವಂತೆ ಮಾಡಿತು. ಹಲವಾರು ಕಾಂಗ್ರೆಸ್ ನಾಯಕರು ಹಾಗೂ ಅವರ ಸ್ವಂತ ಸಹೋದರ ತಹ್ಸೀನ್ ಪೂನಾವಾಲ ಸೇರಿದಂತೆ ಕುಟುಂಬದ ಸದಸ್ಯರೇ ಅವರಿಂದ ಅಂತರ ಕಾಯ್ದುಕೊಂಡರು. ತದನಂತರ ಅವರು ಬಿಜೆಪಿ ಸೇರ್ಪಡೆಯಾಗಿ, ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಬಡ್ತಿ ಪಡೆದರು. ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ವಿಷಯಗಳಲ್ಲಿ ಬಿಜೆಪಿ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ(ಏಜೆನ್ಸೀಸ್).