ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ
ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ತಮ್ಮ ತಾಯಿ ಮೇಲೆ ಉದ್ದೇಶಪೂರ್ವಕವಾಗಿಯೇ ಅಪರಿಚಿತ ವ್ಯಕ್ತಿಯೊಬ್ಬ ಹಿಟ್ ಅಂಡ್ ರನ್ ಮೂಲಕ ಕಾರು ಡಿಕ್ಕಿ ಹೊಡೆದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಂಗಳವಾರ(ಫೆ. 03) ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ(Shehzad Poonawala) ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ತಮ್ಮ ತಾಯಿ ಆಸ್ಪತ್ರೆಯಲ್ಲಿರುವ ಫೋಟೋ ಶೇರ್ ಮಾಡಿರುವ ಪೂನವಾಲಾ, ಕೆಲವು ಗಂಟೆಗಳ ಹಿಂದೆ, ಅಪರಿಚಿತ ದುಷ್ಟನೊಬ್ಬ ನನ್ನ ತಾಯಿ ಮೇಲೆ ಉದ್ದೇಶಪೂರ್ವಕವಾಗಿ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ನನ್ನ ತಾಯಿ ಈಗ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.
ಹಾಗೆಯೇ ನನ್ನ ಅತ್ಯಂತ ದಯಾಳು ಮತ್ತು ಒಳ್ಳೆಯ ಮನುಷ್ಯರಲ್ಲಿ ಅವರು ಒಬ್ಬರು. ಈ ವಯಸ್ಸಿನಲ್ಲಿ ಈ ರೀತಿಯ ಹಿಂಸೆ ನೋಡಿ ನನಗೆ ರಕ್ತ ಕುದಿಯುತ್ತಿದೆ. ಆರೋಪಿಯನ್ನು ತಕ್ಷಣ ಪುಣೆ ಪೊಲೀಸರು ಬಂಧಿಸಿ, ಅಪರಾಧದಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಸಿಎಂ ಫಡ್ನವೀಸ್, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ.
ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಿಎಂ ಕಚೇರಿ, ಘಟನೆ ತುಂಬಾ ದುರದೃಷ್ಟಕರ, ಈಗಾಗಲೇ ಸಿಎಂ ದೇವೇಂದ್ರ ಫಡ್ನವೀಸ್ ಪೂನಾವಾಲಾ ಅವರೊಂದಿಗೆ ಮಾತನಾಡಿದ್ದಾರೆ. ತಾಯಿ ಶೀಘ್ರದಲ್ಲೇ ಗುಣಮುಖವಾಗಲೆಂದು ಆರೈಸಿದ್ದಾರೆ. ಮತ್ತು ಆರೋಪಿ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಮತ್ತು ಪುಣೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದೆ (ಏಜೆನ್ಸೀಸ್).