Zombie Drug Video (ಚಿತ್ರ X)
ಚಂಡೀಗಢ: ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ 'ಜಾಂಬಿ ಡ್ರಗ್ಸ್' (
ವೈರಲ್ ಕ್ಲಿಪ್ ವಿಷಯದಲ್ಲಿ ಪಂಜಾಬ್‌ನ ಆಮ್ ಆದ್ಮಿ ಪಾರ್ಟಿ (AAP) ಹಾಗೂ ಭಾರತೀಯ ಜನತಾ ಪಾರ್ಟಿ (BJP) ನಡುವೆ ತೀವ್ರ ರಾಜಕೀಯ ಕಟುಸಮರ ಆರಂಭವಾಗಿದೆ. ರಸ್ತೆ ಬದಿಯಲ್ಲಿ ತೂರಾಡುತ್ತಿದ್ದ ವ್ಯಕ್ತಿಗಳ ವಿಡಿಯೋಗಳನ್ನು ಇಟ್ಟುಕೊಂಡು ಪಂಜಾಬ್ ಸರ್ಕಾರದ ವಿರುದ್ಧ ಹರಿಹಾಯ್ದ ಸಂಸದ ಹರ್ಭಜನ್ ಸಿಂಗ್‌ಗೆ, "ಅದು ರಾಜಸ್ಥಾನದ ವೀಡಿಯೊ" ಎಂದು ಪೊಲೀಸರು ಫ್ಯಾಕ್ಟ್-ಚೆಕ್ ನೀಡಿದ್ದು, ಇದೀಗ ವಿವಾದದ ಸ್ವರೂಪವೇ ಬದಲಾಗಿದೆ.
ವಿವಾದದ ಹಿನ್ನೆಲೆ ಏನು?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತಲೆಯ ಮೇಲೆ ಪೇಟ ಧರಿಸಿರುವ ಇಬ್ಬರು ವ್ಯಕ್ತಿಗಳು ರಸ್ತೆ ಬದಿಯಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ನಿಲ್ಲಲು ಪರದಾಡುತ್ತಿರುವುದು ಕಂಡುಬಂದಿದೆ. ಮಾದಕ ವಸ್ತುವಾದ 'ಜಾಂಬಿ ಡ್ರಗ್' ಸೇವಿಸಿ ಈ ವ್ಯಕ್ತಿಗಳು ಹೀಗೆ ಮಾಡುತ್ತಿದ್ದಾರೆ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು.
ಹರ್ಭಜನ್ ಸಿಂಗ್ ಟ್ವೀಟ್ ಮತ್ತು ರಾಜಕೀಯ ವಾಗ್ದಾಳಿ
ಈ ವೀಡಿಯೊವನ್ನು ಬಿಜೆಪಿ ಸಂಸದ ಹರ್ಭಜನ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಪಂಜಾಬ್‌ಗೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿದೆ. ಇಲ್ಲಿನ ಸರ್ಕಾರಗಳು ಪಂಜಾಬ್ ಮತ್ತು ಇಲ್ಲಿನ ಯುವಜನತೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದು, ಇದನ್ನೆಲ್ಲಾ ನೋಡಿದರೆ ನನಗೆ ದುಃಖವಾಗುತ್ತದೆ. ಒಂದು ಕಾಲದಲ್ಲಿ ತನ್ನ ಏಳಿಗೆ, ಧೈರ್ಯ ಮತ್ತು ಶೌರ್ಯಕ್ಕೆ ಹೆಸರಾಗಿದ್ದ ಪಂಜಾಬ್‌ನ ಯುವಕರು ಇವತ್ತು ವ್ಯಸನಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಇನ್ನು ಕಾಲ ಮಿಂಚಿಲ್ಲ, ದಯವಿಟ್ಟು ನನ್ನ ಪಂಜಾಬ್ ಮತ್ತು ಇಲ್ಲಿನ ಯುವಕರನ್ನು ಉಳಿಸಿ, ಎಂದು ಟ್ವೀಟ್ ಮಾಡಿದ್ದರು.
ಆಪ್ ಸಚಿವೆ ಡಾ. ಬಲ್ಜಿತ್ ಕೌರ್ ತಿರುಗೇಟು
ಹರ್ಭಜನ್ ಸಿಂಗ್ ಅವರ ಟ್ವೀಟ್‌ಗೆ ಪಂಜಾಬ್ ಸಚಿವೆ ಡಾ. ಬಲ್ಜಿತ್ ಕೌರ್ ತಕ್ಷಣವೇ ತಿರುಗೇಟು ನೀಡಿದ್ದು, ಈ ವಿಡಿಯೋ ಪಂಜಾಬ್ನದ್ದಲ್ಲ, ಬದಲಾಗಿ ರಾಜಸ್ಥಾನದ ಶ್ರೀ ಗಂಗಾನಗರಕ್ಕೆ ಸೇರಿದ್ದಾಗಿದೆ. ಆದಾಗ್ಯೂ, ಬಿಜೆಪಿ ನಾಯಕರನ್ನು ಮೆಚ್ಚಿಸಲು ಹರ್ಭಜನ್ ಸಿಂಗ್ ಪಂಜಾಬ್‌ನ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸತ್ಯಾಸತ್ಯತೆ ಏನು?
ಈ ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಈ ಘಟನೆ ನಡೆದಿದ್ದು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ. ಅಷ್ಟೇ ಅಲ್ಲದೆ, ವೀಡಿಯೊದಲ್ಲಿದ್ದ ವ್ಯಕ್ತಿಗಳು ನಿಜವಾಗಿಯೂ ಯಾವುದೇ ಮಾದಕದ್ರವ್ಯ ಸೇವಿಸಿದ್ದರೇ ಅಥವಾ ಬೇರೇನಾದರೂ ಕಾರಣವಿತ್ತೇ ಎಂಬುದಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಸ್ವತಂತ್ರ ಹಾಗೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ
ರಸ್ತೆ ಬದಿಯ ವೀಡಿಯೊ ಒಂದನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಪಂಜಾಬ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರೆ, ಸುಳ್ಳು ಮಾಹಿತಿಯ ಮೂಲಕ ಪಂಜಾಬ್‌ನ ಇಮೇಜ್ ಹಾಳುಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಪ್ ಪ್ರತ್ಯಾರೋಪ ಮಾಡಿದೆ. ಒಟ್ಟಿನಲ್ಲಿ, ಈ ವೈರಲ್ ವೀಡಿಯೊ ಇದೀಗ ಪಂಜಾಬ್‌ನ ಮಾದಕದ್ರವ್ಯ ರಾಜಕೀಯದಲ್ಲಿ ಹೊಸ ಕಾಳಗಕ್ಕೆ ಕಾರಣವಾಗಿದೆ (ಏಜೆನ್ಸೀಸ್).