Mahesh landge | ಬಿಜೆಪಿ ಶಾಸಕ ಮಹೇಶ್ ಲ್ಯಾಂಡ್ಗೆ  
ದೇಶ

ದಾದಾ ನನ್ನನ್ನು ಕ್ಷಮಿಸಿಬಿಡಿ...ವೇದಿಕೆಯಲ್ಲೇ ಕಣ್ಣೀರಿಟ್ಟ ಶಾಸಕ; ವಿರೋಧಿಗಳ ಮನಸ್ಸನ್ನು ಗೆದ್ದಿದ್ದ ಅಜಿತ್​ ಪವಾರ್​ | Mahesh Landge

ಮುಂಬೈ: ಚಿಂಚ್‌ವಾಡ್‌ನ ಪ್ರೊ. ರಾಮಕೃಷ್ಣ ಮೋರ್ ಸಭಾಂಗಣದಲ್ಲಿ ನಡೆದ ಅಜಿತ್​ ದಾದಾರ ಸಂತಾಪ ಸೂಚಕ ಸಭೆ ಎಲ್ಲರನ್ನೂ ಭಾವುಕರನ್ನಾಗುವಂತೆ ಮಾಡಿತ್ತು, ಇಡೀ ಕಾರ್ಯಕ್ರಮ ಮುಗಿಯುವವರೆಗೂ ನಡೆದಿದ್ದು ಅಜಿತ್​ ಪವಾರ್​ರ ಗುಣಗಾನ. ಈ ವೇಳೆ ಬಿಜೆಪಿ ಶಾಸಕ ಮಹೇಶ್ ಲ್ಯಾಂಡ್ಗೆ ಅಜಿತ್ ದಾದಾ, ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮಾತ್ರ ಹೇಳಿ ವೇದಿಕೆಯಿಂದ ನಿರ್ಗಮಿಸಿದ್ದು, ಎಲ್ಲರ ಕಣ್ಣಾಲಿಗಳು ತೇವವಾಗುವಂತೆ ಮಾಡಿತು.
ಸ್ವಪಕ್ಷೀಯರಷ್ಟೆ ಅಲ್ಲದೇ, ವಿಪಕ್ಷದ ಸಾಕಷ್ಟು ನಾಯಕರಿಗೆ ಅಜಿತ್​ ದಾದಾ ಅಚ್ಚು ಮೆಚ್ಚು, ಅವರ ಹಾಸ್ಯದ ಮಾತುಗಳು, ಜನಸಾಮಾನ್ಯರೊಂದಿಗೆ ಅವರು ಬೆರೆಯುತ್ತಿದ್ದ ರೀತಿ ಅದೆಷ್ಟೆ ಸಣ್ಣ ಪುಟ್ಟ ನಾಯಕರಿಗೆ ಮಾದರಿಯಾಗಿದೆ.

ಅಜಿತ್​ VS ಲ್ಯಾಂಡ್ಗೆ

ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದು ಕೇವಲ ಅಭ್ಯರ್ಥಿಗಳ ನಡುವೆ ಮಾತ್ರವಲ್ಲ, ಅಂದಿನ ಡಿಸಿಎಂ ಅಜಿತ್ ಪವಾರ್ ಮತ್ತು ಬಿಜೆಪಿಯ ಭೋಸಾರಿ ಶಾಸಕ ಮಹೇಶ್ ಲ್ಯಾಂಡ್ಗೆ ನಡುವಿನ ಕದನವಾಗಿ ಮಾರ್ಪಟ್ಟಿತ್ತು.
ಜನವರಿ 16 ರಂದು ಫಲಿತಾಂಶಗಳೊಂದಿಗೆ ಮುಕ್ತಾಯಗೊಂಡ ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಚುನಾವಣೆಗೆ ಮುನ್ನ ಪಿಂಪ್ರಿ -ಚಿಂಚ್‌ವಾಡ್ ಪ್ರದೇಶವು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಡುವೆ ತೀವ್ರ ಪೈಪೋಟಿ ನಡೆಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಮಹಾರಾಷ್ಟ್ರದ ದಿವಂಗತ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಬಿಜೆಪಿಯ ಭೋಸಾರಿ ಶಾಸಕ ಮಹೇಶ್ ಲ್ಯಾಂಡ್ಗೆ ನಡುವೆ ತೀವ್ರ ಪೈಪೋಟಿ ನಡೆಯಿತು.

ಸ್ಮಾರಕ ನಿರ್ಮಿಸಿ ಎಂದ ಶಾಸಕ ಲ್ಯಾಂಡ್ಗೆ

ಮಹಾರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ದಿವಂಗತ ಅಜಿತದಾದಾ ಪವಾರ್ ಅವರ ಸ್ಮರಣಾರ್ಥ ಪಿಂಪ್ರಿ-ಚಿಂಚವಾಡದಲ್ಲಿರುವ ಹೊಸ ಆಡಳಿತ ಕಟ್ಟಡದ ಬಳಿ ಸ್ಮಾರಕ ನಿರ್ಮಿಸಬೇಕೆಂದು ಶಾಸಕ ಲ್ಯಾಂಡ್ಗೆ ಒತ್ತಾಯಿಸಿದ್ದಾರೆ.
ಚಿಂಚವಾಡದಲ್ಲಿರುವ ಶಾಪಿಂಗ್​ ಮಾಲ್​ ಎದುರು 33.86 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ನೂತನ ಆಡಳಿತ ಸಂಕೀರ್ಣದಲ್ಲಿ ಸುಮಾರು 8.65 ಎಕರೆ ಪ್ರದೇಶದಲ್ಲಿ ಕಟ್ಟಡದ ಕೆಲಸ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ನಗರಸಭೆಯ ಎಲ್ಲಾ ಆಡಳಿತಾತ್ಮಕ ಕಾರ್ಯಗಳು ಇಲ್ಲಿಂದಲೇ ನಡೆಯುತ್ತವೆ. ಆದ್ದರಿಂದ ಇಲ್ಲಿ ದಿವಂಗತ ಅಜಿತದಾದಾರ ಕಂಚಿನ ಪ್ರತಿಮೆ ನಿರ್ಮಿಸಲು ಸೂಚಿಸಿದ್ದಾರೆ.
 ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ಕಾರ್ಪೊರೇಟರ್‌ಗಳ ಮೊದಲ ಸಾಮಾನ್ಯ ಸಭೆಯಲ್ಲಿಯೇ ದಾದರ ಸ್ಮಾರಕದ ಪ್ರಸ್ತಾವನೆಯನ್ನು ಅನುಮೋದಿಸಬೇಕು ಮತ್ತು ಪಿಂಪ್ರಿ-ಚಿಂಚ್‌ವಾಡಕರ್‌ಗಳ ಪರವಾಗಿ ಗೌರವ ಸಲ್ಲಿಸಬೇಕು ಎಂದು ಲ್ಯಾಂಡ್ಗೆ ಒತ್ತಾಯಿಸಿದ್ದು, ಹಳೆ ಪುರಸಭೆಯ ಸಭಾಂಗಣದಲ್ಲಿ ಅಜಿತ್‌ದಾದರ ತೈಲವರ್ಣಚಿತ್ರವನ್ನು ತಕ್ಷಣವೇ ಸ್ಥಾಪಿಸಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ.
ಈ ಹಿಂದೆ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದ ಅಜಿತ್‌ ಪವಾರ್ ಮಹಾರಾಷ್ಟ್ರದ ಅಭಿವೃದ್ಧಿಗೆ ವೇಗ ನೀಡಿದ್ದರು ಎಂದಿರುವ ಶಾಸಕ ಲ್ಯಾಂಡ್ಗೆ, ಮೂಲಸೌಕರ್ಯ, ನಾಗರಿಕ ಸೇವೆಗಳು, ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅಭಿವೃದ್ಧಿ-ಆಧಾರಿತ ನೀತಿಗಳಿಂದಾಗಿ ರಾಜ್ಯ ದಾದಾರನ್ನು ವಿಶೇಷವಾಗಿ ಸ್ಮರಿಸುತ್ತದೆ ಎಂದರು.
ಅಂತಹ ಮೇರು ನಾಯಕನ ಅಗಲಿಕೆಯಿಂದ ಮಹಾರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದ್ದು, ಅವರ ಅಭಿವೃದ್ದಿ ಕೆಲಸಗಳನ್ನು ಪೋಷಿಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ ಎಂದರು. ಸದ್ಯ ಕಾಮಗಾರಿ ನಡೆಯುತ್ತಿರುವ ಆಡಳಿತ ಕಟ್ಟಡದ ಸಭಾಂಗಣಕ್ಕೆ ಅಜಿತದಾದ ಪವಾರ್ ಹಾಲ್ ಎಂದು ಹೆಸರಿಸಬೇಕು ಮತ್ತು ನಗರದ ಆರಂಭದಿಂದ ಇಂದಿನವರೆಗಿನ ಅಭಿವೃದ್ಧಿ ಪ್ರಯಾಣ ಮತ್ತು ಭವಿಷ್ಯದ ಯೋಜನೆಯನ್ನು ಎತ್ತಿ ತೋರಿಸುವ ಪಿಂಪ್ರಿ-ಚಿಂಚ್‌ವಾಡ್ ಅಜಿತ್ ಸೃಷ್ಟಿಯನ್ನು ನಿರ್ಮಿಸಬೇಕು ಎಂಬುದು ಇದರ ಪರಿಕಲ್ಪನೆಯಾಗಿದೆ. 
ಅಜಿತದಾದಾಗೆ ಪಿಂಪ್ರಿ-ಚಿಂಚ್‌ವಾಡ್ ನಗರವನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡುವ ಕನಸ್ಸಿತ್ತು, ಆ ಕನಸನ್ನು ನನಸಾಗಿಸಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲು ನಿರ್ಧರಿಸಿದ್ದೇವೆ. ಈ ಸ್ಮಾರಕವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ, ಇದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ ಎಂದು ಶಾಸಕ ಲ್ಯಾಂಡ್ಗೆ ಹೇಳಿದರು(ಏಜೆನ್ಸೀಸ್​​).