ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮತದಾರರನ್ನು ಸೆಳೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬಿಜೆಪಿಯ ಚುನಾವಣಾ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದ್ದಾರೆ. ಮಹಿಳೆಯರಿಗೆ ಪ್ರತಿ ತಿಂಗಳು ಭರ್ಜರಿ ಹಣಕಾಸು ನೆರವು ಹಾಗೂ ಏಕರೂಪ ನಾಗರಿಕ ಸಂಹಿತೆ (UCC) ಜಾರಿಯಂತಹ ಆಶ್ವಾಸನೆಗಳನ್ನು ನೀಡುವ ಮೂಲಕ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.
ಮಹಿಳೆಯರಿಗೆ ಮಾಸಿಕ 3,000 ಆಶ್ವಾಸನೆ
ಕೋಲ್ಕತ್ತಾದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, "ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಮಹಿಳೆಯರ ಸಬಲೀಕರಣಕ್ಕಾಗಿ ಪ್ರತಿ ತಿಂಗಳು 3,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು," ಎಂದು ಘೋಷಿಸಿದರು. ಇದು ಟಿಎಂಸಿ ಸರ್ಕಾರದ 'ಲಕ್ಷ್ಮೀರ್ ಭಂಡಾರ್' ಯೋಜನೆಗೆ ಪ್ರತಿಯಾಗಿ ಬಿಜೆಪಿ ಹೂಡಿರುವ ಬ್ರಹ್ಮಾಸ್ತ್ರ ಎಂದು ವಿಶ್ಲೇಷಿಸಲಾಗುತ್ತಿದೆ.
6 ತಿಂಗಳಲ್ಲೇ ಏಕರೂಪ ನಾಗರಿಕ ಸಂಹಿತೆ (UCC) ಜಾರಿ!
ಪ್ರಣಾಳಿಕೆಯಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಯುಸಿಸಿ ಜಾರಿ. "ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕೇವಲ 6 ತಿಂಗಳ ಒಳಗೆ ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಲಾಗುವುದು," ಎಂದು ಶಾ ಸ್ಪಷ್ಟಪಡಿಸಿದರು. ಇದು ರಾಜ್ಯದ ರಾಜಕೀಯ ಧ್ರುವೀಕರಣಕ್ಕೆ ಹೊಸ ವೇದಿಕೆ ಕಲ್ಪಿಸುವ ಮುನ್ಸೂಚನೆ ನೀಡಿದೆ.
ಮಮತಾ ಬ್ಯಾನರ್ಜಿ ಆಡಳಿತಕ್ಕೆ 'ಕಗ್ಗತ್ತಲೆಯ ಕಾಲ' ಎಂದು ಕಿಡಿ
ಕಳೆದ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತವನ್ನು ಅಮಿತ್ ಶಾ ತೀವ್ರವಾಗಿ ಟೀಕಿಸಿದರು."ಬಂಗಾಳದ ಕಳೆದ 15 ವರ್ಷಗಳು ಕಗ್ಗತ್ತಲೆಯ ಅವಧಿಯಾಗಿತ್ತು. ಜನರು ಭಯದಲ್ಲಿ ಬದುಕುತ್ತಿದ್ದಾರೆ," ಎಂದು ಆರೋಪಿಸಿದರು.
ನಮ್ಮ ಸಂಕಲ್ಪ ಪತ್ರವು ಪ್ರತಿಯೊಂದು ವರ್ಗದ ಜನರನ್ನು ನಿರಾಶೆಯಿಂದ ಹೊರತರುವ ಮಾರ್ಗವಾಗಿದೆ. ರೈತರ ಭಯವನ್ನು ಹೋಗಲಾಡಿಸಿ ಅವರಿಗೆ ಹೊಸ ಹಾದಿ ತೋರಿಸಲಿದೆ ಎಂದರು. ಪ್ರಧಾನಿ ಮೋದಿ ಅವರ 'ವಿಕಸಿತ ಭಾರತ'ದ ಕನಸನ್ನು ಬಂಗಾಳದಲ್ಲಿ ನನಸು ಮಾಡಲು ಈ ಪ್ರಣಾಳಿಕೆ ರೋಡ್‌ಮ್ಯಾಪ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನುಸುಳುಕೋರರ ವಿರುದ್ಧ 'ಜೀರೋ ಟಾಲರೆನ್ಸ್'
ಅಕ್ರಮ ನುಸುಳುವಿಕೆ ವಿಚಾರದಲ್ಲಿ ಬಿಜೆಪಿ ತನ್ನ ಕಠಿಣ ನಿಲುವನ್ನು ಪುನರುಚ್ಚರಿಸಿದೆ. "ಪತ್ತೆ ಹಚ್ಚಿ, ಅಳಿಸಿ ಹಾಕಿ ಮತ್ತು ಗಡೀಪಾರು ಮಾಡಿ (Detect, Delete and Deport)" ಎಂಬುದು ನಮ್ಮ ಸರ್ಕಾರದ ನೀತಿಯಾಗಲಿದೆ ಎಂದು ಅಕ್ರಮ ವಲಸಿಗರ ವಿರುದ್ಧ ಅಮಿತ್ ಶಾ ಗುಡುಗಿದರು.
ಬಂಗಾಳದ ಪ್ರತಿ ಮನೆಗೂ ಈ ಸಂಕಲ್ಪ ಪತ್ರವನ್ನು ತಲುಪಿಸುವುದಾಗಿ ಹೇಳಿದ ಶಾ, ಈ ಬಾರಿ ಬಂಗಾಳದಲ್ಲಿ ಬದಲಾವಣೆ ನಿಶ್ಚಿತ ಎಂದು ಘೋಷಿಸಿದರು,(ಏಜೆನ್ಸೀಸ್).