ಸೋನಾಕ್ಷಿ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ ಎಂದ ತಂದೆ ಶತ್ರುಘ್ನ ಸಿನ್ಹಾ
- ನನ್ನ ಮಗಳ ಮೇಲೆ ಬಿಜೆಪಿ ಐಟಿ ಸೆಲ್ ಕಣ್ಣಿಟ್ಟಿದೆ!
- ನೀಟ್ ಪ್ರತಿಭಟನೆಗೆ ಬೆಂಬಲ ನೀಡಿದಕ್ಕೆ ಟ್ರೋಲ್ ಮಾಡಲಾಗುತ್ತಿದೆ
- ಸೋನಾಕ್ಷಿ ತಂದೆಗೆ ತಕ್ಕ ಮಗಳು
- ಸೋನಾಕ್ಷಿ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ ಎಂದ ತಂದೆ ಶತ್ರುಘ್ನ ಸಿನ್ಹಾ
ಮುಂಬೈ: ಜಂತರ್-ಮಂತರ್ನಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ್ದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಜಾರ್ಖಂಡ್ನಲ್ಲಿ ನಡೆದ ಹೋರಾಟದ ಬಗ್ಗೆ ಮೌನವಹಿಸಿದ್ದು, ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು.
ಹೀಗಾಗಿ, ಅಂತಹ ನಟ-ನಟಿಯರನ್ನು ಟ್ರೋಲ್ ಮಾಡುವ ಮೂಲಕ ಅವರ ದ್ವಂದ್ವ ನೀತಿಯನ್ನು ಪ್ರಶ್ನಿಸಲಾಗುತ್ತಿತ್ತು. ಈ ಟ್ರೋಲ್ಗೆ ಅತ್ಯಧಿಕವಾಗಿ ಬಲಿಯಾದ ನಟಿ ಎಂದರೆ ಅದು ಸೋನಾಕ್ಷಿ ಸಿನ್ಹಾ.
ಈಗ, ತಮ್ಮ ಮಗಳನ್ನು ಟ್ರೋಲ್ ಮಾಡುವುದರ ಹಿಂದೆ ಬಿಜೆಪಿ ಐಟಿ ಸೆಲ್ನ ಕೈವಾಡವಿದೆ ಎಂದು ತ್ರಣಮೂಲ ಕಾಂಗ್ರೆಸ್ನ ಸಂಸದ ಹಾಗೂ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ (Shatrughan Sinha on Sonakshi Sinha) ಆರೋಪಿಸಿದ್ದಾರೆ.
ಹಣ ಕೊಟ್ಟು ಟ್ರೋಲ್ ಮಾಡಿಸಲಾಗುತ್ತಿದೆ - ಶತ್ರುಘ್ನ ಸಿನ್ಹಾ ಕಿಡಿ
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ, ಮಗಳು ಸೋನಾಕ್ಷಿ ಸಿನ್ಹಾ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿಜೆಪಿ (CJP) ಪ್ರತಿಭಟನೆ ಹಾಗೂ ಲಡಾಖ್‌ನ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹದ ಕುರಿತು ಸೋನಾಕ್ಷಿ ಧ್ವನಿ ಎತ್ತಿದ್ದರು. ಇದರ ಬೆನ್ನಲ್ಲೇ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ಹಾಗೂ ಟ್ರೋಲ್‌ಗಳು ಎದುರಾಗಿದ್ದವು.
ಈ ಬಗ್ಗೆ ಮಾತನಾಡಿದ ಶತ್ರುಘ್ನ ಸಿನ್ಹಾ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರಿಗೆ ಹೆಚ್ಚಾಗಿ ಹಣ ನೀಡಲಾಗಿರುತ್ತದೆ. ಬಿಜೆಪಿಯ ನೀತಿಗಳ ವಿರುದ್ಧ ಯಾರೇ ದ್ವನಿ ಎತ್ತಿದರೂ, ಇಂತಹ ಟ್ರೋಲ್‌ಗಳು ಅವರ ಬೆನ್ನುಬೀಳುತ್ತವೆ. ಇವರ ಹಿಂದೆ ಬಿಜೆಪಿಯ ಐಟಿ ಸೆಲ್ ಕೆಲಸ ಮಾಡುತ್ತಿದೆ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಹಣ ಪಡೆದು ಟ್ರೋಲ್ ಮಾಡುವವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಅರಿವೂ ಇರುವುದಿಲ್ಲ. ಇವರಿಗೆ ಕೇವಲ ಸ್ಕ್ರಿಪ್ಟ್ ಅನ್ನು ಬರೆದುಕೊಡಲಾಗಿರುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋನಾಕ್ಷಿ ರಾಜಕೀಯ ಪ್ರವೇಶದ ಬಗ್ಗೆ ತಂದೆಯ ಮಾತು!
ಸೋನಾಕ್ಷಿ ಸಿನ್ಹಾ ಮುಂಬರುವ ದಿನಗಳಲ್ಲಿ ಸಕ್ರಿಯ ರಾಜಕೀಯಕ್ಕೆ ಕಾಲಿಡುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶತ್ರುಘ್ನ ಸಿನ್ಹಾ, ನಾನು ಖಚಿತವಾಗಿ ಏನನ್ನೂ ಹೇಳಲಾರೆ. ಮೊದಲೆಲ್ಲ ನಾನು ಅವರನ್ನು ಕೇಳುತ್ತಿದ್ದೆ, ಅವರು ಒಬ್ಬ ಯೋಗ್ಯ ತಂದೆಗೆ ಅತ್ಯಂತ ಯೋಗ್ಯ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ಬೆಂಬಲ ವಿವಾದಕ್ಕೆ ಕಾರಣ?
ವಿದ್ಯಾರ್ಥಿ ಪ್ರತಿಭಟನೆ ಮತ್ತು ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ಬಹಿರಂಗವಾಗಿ ಬೆಂಬಲಿಸಿದ ಮೊದಲ ಕೆಲವೇ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಸೋನಾಕ್ಷಿ ಸಿನ್ಹಾ ಕೂಡ ಒಬ್ಬರು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ, ಸೋನಾಕ್ಷಿ ಅವರು ಜೆನ್ ಜೀ (Gen Z) ವಿದ್ಯಾರ್ಥಿಗಳ ವಿಜಯವನ್ನು ಸಂಭ್ರಮಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದುವೇ ವಿವಾದಕ್ಕೆ ಪ್ರಮುಖ ಕಾರಣವಾಯಿತು ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ, ನಟಿ ಹಾಗೂ ಸಂಸದೆ ಕಂಗನಾ ರಾವತ್ ಕೂಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಯಾರದೂ ಹೆಸರನ್ನು ನೇರವಾಗಿ ಉಲ್ಲೇಖಿಸದ ಕಂಗನಾ, ಇತ್ತೀಚಿನ ದಿನಗಳಲ್ಲಿ ಕೆಲವರು ಪಿಕ್‌ಪ್ಯಾಕೆಟರ್ ತರ ಉಡುಗೆ ತೊಡುತ್ತಾರೆ ಹಾಗೂ ವರ್ತಿಸುತ್ತಾರೆ. ಅರ್ಧ ಪ್ಯಾಂಟ್ ಮತ್ತು ಬ್ಯಾಕ್‌ವರ್ಡ್ ಕ್ಯಾಪ್ ಧರಿಸಿ ಪ್ರತಿಭಟನಾಕಾರರ ಗಟರ್‌ಚಾಪ್ ನಡವಳಿಕೆಯನ್ನು ಪ್ರಚಾರ ಮಾಡುತ್ತಾರೆ ಎಂದು ಪೋಸ್ಟ್ ಮಾಡಿದ್ದರು.
ಕಂಗನಾ ಅವರ ಈ ಮಾತುಗಳು ನೇರವಾಗಿ ಸೋನಾಕ್ಷಿ ಅವರನ್ನು ಉದ್ದೇಶಿಸಿವೆ ಎಂದು ನೆಟ್ಟಿಗರಲ್ಲಿ ಗುಸುಗುಸು ಆರಂಭವಾಗಿತ್ತು. ಆದರೆ, ಈ ಎಲ್ಲ ಟ್ರೋಲ್‌ಗಳು ಮತ್ತು ಚರ್ಚೆಗಳ ಬಗ್ಗೆ ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ಮಾತ್ರ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ, (ಏಜನ್ಸೀಸ್).