ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ 
ದೇಶ

ಬಿಜೆಪಿ ಎಂದರೆ ಕೇವಲ ರಾಜಕೀಯ ಪಕ್ಷವಲ್ಲ, ಅದೊಂದು ಪವಿತ್ರ ಸಂಪ್ರದಾಯ ಎಂದ ನೂತನ ಅಧ್ಯಕ್ಷ ನಿತಿನ್ ನಬಿನ್ | Nitin Nabin

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ನಿತಿನ್ ನಬಿನ್(Nitin Nabin) ಅವರು ಮಂಗಳವಾರ (ಜ.20) ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಲ್ಲದೆ, ಭಾರತೀಯ ಜನತಾ ಪಕ್ಷವು ಕೇವಲ ಒಂದು ರಾಜಕೀಯ ಸಂಘಟನೆಯಲ್ಲ, ಅದೊಂದು ಬೃಹತ್ ರಾಷ್ಟ್ರೀಯ ಚಳವಳಿ ಎಂದು ಹೇಳಿದ್ದಾರೆ.
ಈ ಬಗ್ಗೆ ಅಧಿಕಾರ ಸ್ವೀಕರಿಸಿದ ಬಳಿಕ ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಬಿನ್, ಭಾರತೀಯ ಜನತಾ ಪಕ್ಷವು ಕೇವಲ ಒಂದು ರಾಜಕೀಯ ಸಂಘಟನೆಯಲ್ಲ, ಅದೊಂದು ಬೃಹತ್ ರಾಷ್ಟ್ರೀಯ ಚಳವಳಿ ಎಂದಿದ್ದಾರೆ. ಇಲ್ಲಿ ಸಂಘಟನೆ ಎಂದರೆ ಕೇವಲ ವ್ಯವಸ್ಥೆಯಲ್ಲ, ಅದೊಂದು ಪವಿತ್ರವಾದ ಪರಂಪರೆ ಮತ್ತು ಸಂಪ್ರದಾಯ ಎಂದು ಬಣ್ಣಿಸಿದ್ದಾರೆ.
ಪಕ್ಷದ ಕೇಡರ್ ಆಧಾರಿತ ಸಂರಚನೆಯನ್ನು ಶ್ಲಾಘಿಸಿದ ನಬಿನ್, ನಮ್ಮ ಪಕ್ಷವು ವ್ಯಕ್ತಿ ಕೇಂದ್ರಿತವಲ್ಲ, ಬದಲಿಗೆ ಸಿದ್ಧಾಂತ ಮತ್ತು ರಾಷ್ಟ್ರಭಕ್ತಿ ಕೇಂದ್ರಿತವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಈ ಪವಿತ್ರ ಸಂಪ್ರದಾಯದ ರಕ್ಷಕ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ನಬಿನ್​, ನನಗೆ ಸಿಕ್ಕಿರುವುದು ಅಧಿಕಾರವಲ್ಲ, ಬದಲಿಗೆ ಕೋಟ್ಯಂತರ ಕಾರ್ಯಕರ್ತರ ನಂಬಿಕೆಯ ಜವಾಬ್ದಾರಿಯಾಗಿದೆ. ಅಂತ್ಯೋದಯದ ಗುರಿ ತಲುಪುವವರೆಗೆ ನಮ್ಮ ಹೋರಾಟ ನಿಲ್ಲದು ಎಂದಿದ್ದಾರೆ.
ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ ಬೆಳೆದು ಬಂದಿರುವ ರಾಷ್ಟ್ರೀಯತೆಯ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುವುದಾಗಿ ನಬಿನ್​ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೆ, ಬಿಜೆಪಿ ಒಂದು ಕುಟುಂಬವಿದ್ದಂತೆ. ಇಲ್ಲಿ ಶಿಸ್ತು ಎನ್ನುವುದು ನಮ್ಮ ಉಸಿರು. ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

ಕಾರ್ಯಕರ್ತರಲ್ಲಿ ನವೋತ್ಸಾಹ

ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ನಿತಿನ್ ನಬಿನ್, ಯುವ ನಾಯಕತ್ವ ಮತ್ತು ಅನುಭವದ ಮಿಶ್ರಣವಾಗಿ ಕಾಣುತ್ತಿದ್ದಾರೆ. ಮುಂಬರುವ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ನಬಿನ್ ಅವರ ಈ ತೀವ್ರಗಾಮಿ ಮತ್ತು 'ಸಾಂಪ್ರದಾಯಿಕ ಭಾಷಣವು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ನಬಿನ್ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು,(ಏಜೆನ್ಸೀಸ್).