ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ
- ಬಿಜೆಪಿ ದೇಶದ ಅತಿದೊಡ್ಡ ಬಿಕ್ಕಟ್ಟು ಎಂದು ಅಖಿಲೇಶ್ ಯಾದವ್ ವಾಗ್ದಾಳಿ
- ದ್ವೇಷ ಹರಡುವುದನ್ನು ಬಿಟ್ಟರೆ ಬಿಜೆಪಿಗೆ ಬೇರೆ ಅಜೆಂಡಾ ಇಲ್ಲ ಎಂದು ಆರೋಪ
- ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕುರಿತು ಸರ್ಕಾರದ ವಿರುದ್ಧ ಕಿಡಿ
BJP criticism: ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶ ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟು ಬಿಜೆಪಿಯೇ ಎಂದು ಹೇಳಿರುವ ಅವರು, ದ್ವೇಷ ಹರಡುವುದನ್ನು ಬಿಟ್ಟರೆ ಪಕ್ಷಕ್ಕೆ ಬೇರೆ ಅಜೆಂಡಾ ಇಲ್ಲ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈನಲ್ಲಿ ಅಖಿಲೇಶ್ ಯಾದವ್ ಮಾತನಾಡಿ, ಜಯಪ್ರಕಾಶ್ ನಾರಾಯಣ್ ಅವರ ಪರಂಪರೆಯನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದು ಟೀಕಿಸಿದ್ದು, ಜೆಪಿಎನ್‌ಐಸಿ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್, ಔಷಧಿಗಳ ಬೆಲೆ, ಪೊಲೀಸ್ ವ್ಯವಸ್ಥೆ ಹಾಗೂ ಆಂಬ್ಯುಲೆನ್ಸ್ ಸೇವೆಗಳ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರೈತರಿಗೆ ಗೊಬ್ಬರ ಸಿಗುತ್ತಿಲ್ಲ
ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ಮತ್ತು ಬೀಜ ಸಿಗುತ್ತಿಲ್ಲ, ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂದು ಆರೋಪಿಸಿರುವ ಅವರು, ದೊಡ್ಡ ಕಂಪನಿಗಳಿಗೆ ಅನುಕೂಲವಾಗುವ ನೀತಿಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ದೂರಿದ್ದಾರೆ. ಇನ್ನು, ಮಾಧ್ಯಮಗಳ ಮೇಲಿನ ನಿರ್ಬಂಧದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅಖಿಲೇಶ್, ಸರ್ಕಾರವನ್ನು ಪ್ರಶ್ನಿಸುವವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ನೇಪಾಳದಲ್ಲಿ ಸಂಭವಿಸಿರುವ ಪ್ರವಾಹದಿಂದ ಉಂಟಾದ ಹಾನಿಗೆ ಭಾರತ ಸರ್ಕಾರ ಸಾಧ್ಯವಾದಷ್ಟು ನೆರವು ನೀಡಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ,(ಏಜೆನ್ಸೀಸ್).