West Bengal Elections: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣ ಕೇವಲ ರಾಜಕೀಯ ಸಿದ್ಧಾಂತಗಳ ಸಂಘರ್ಷವಾಗಿ ಉಳಿದಿಲ್ಲ, ಬದಲಾಗಿ ಅದು ವೈಯಕ್ತಿಕ ಪ್ರತಿಷ್ಠೆ, ಭಾಷಾ ಸಂವೇದನೆ ಮತ್ತು ಪ್ರಾದೇಶಿಕ ಅಸ್ಮಿತೆಯ ತೀವ್ರ ಹಣಾಹಣಿಯಾಗಿ ಮಾರ್ಪಟ್ಟಿದೆ.
ನಿನ್ನೆ (ಏ.21) ಕೇಂದ್ರ ಗೃಹ ಸಚಿವ ಅಮಿತ್ ಷಾ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಬಳಸಿದ್ದಾರೆನ್ನಲಾದ ಈ ದೀದಿ ಎಂಬ ಪದಪ್ರಯೋಗವು ಈಗ ತೃಣಮೂಲ ಕಾಂಗ್ರೆಸ್ (TMC) ಪಾಲಿಗೆ ಬಿಜೆಪಿಯನ್ನು ಕಟ್ಟಿಹಾಕಲು ಸಿಕ್ಕಿರುವ ಪ್ರಬಲ ಅಸ್ತ್ರವಾಗಿದೆ. 2021ರ ಚುನಾವಣೆಯ ಇತಿಹಾಸವನ್ನು ಮರುಕಳಿಸಲು ಹೊರಟಿರುವ ಟಿಎಂಸಿ, ಬಿಜೆಪಿಯ ಈ ಮಾತನ್ನೆ, ಅವರ ಪತನದ ಹಾದಿಯನ್ನಾಗಿ ಬಿಂಬಿಸುತ್ತಿದೆ.
ಇತಿಹಾಸದ ಕಹಿ ನೆನಪು...ದೀದಿ ಓ ದೀದಿ ಮತ್ತು ಬಿಜೆಪಿಯ ಹಿನ್ನಡೆ
ಈ ಇಡೀ ವಿವಾದದ ಬೇರುಗಳು 2021ರ ವಿಧಾನಸಭಾ ಚುನಾವಣೆಯಲ್ಲಿವೆ. ಅಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರತಿಯೊಂದು ಪ್ರಚಾರ ಸಭೆಯಲ್ಲೂ ಮಮತಾ ಬ್ಯಾನರ್ಜಿ ಅವರನ್ನು "ದೀದಿ ಓ ದೀದಿ" ಎಂದು ವಿಶಿಷ್ಟ ದಾಟಿಯಲ್ಲಿ ಕರೆಯುತ್ತಿದ್ದರು. ಬಿಜೆಪಿ ಅದನ್ನು ಕೇವಲ ರಾಜಕೀಯ ಲೇವಡಿ ಎಂದು ಭಾವಿಸಿತ್ತಾದರೂ, ಬಂಗಾಳದ ಜನತೆ, ವಿಶೇಷವಾಗಿ ಮಹಿಳಾ ಮತದಾರರು ಇದನ್ನು ರಾಜ್ಯದ ಏಕೈಕ ಮಹಿಳಾ ಮುಖ್ಯಮಂತ್ರಿಗೆ ತೋರಿದ ಅಗೌರವ ಮತ್ತು ಅಣಕ ಎಂಬ ರೀತಿಯಲ್ಲಿ ಪರಿಗಣಿಸಿದರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಂದು ಟಿಎಂಸಿ ಇದನ್ನು ಬಂಗಾಳದ ಮಗಳಿಗೆ ಮಾಡಿದ ಅವಮಾನ ಎಂಬ ಭಾವನಾತ್ಮಕ ಅಭಿಯಾನವನ್ನಾಗಿ ಪರಿವರ್ತಿಸಿತ್ತು. ಫಲಿತಾಂಶ ಎಲ್ಲರಿಗೂ ತಿಳಿದಿರುವಂತೆ, ಬಿಜೆಪಿ ಭಾರೀ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಸೋಲನುಭವಿಸಬೇಕಾಯ್ತು. ಈಗ 2026ರಲ್ಲಿ ಅಮಿತ್ ಷಾರ ಈ ದೀದಿ ಎಂಬ ಉಲ್ಲೇಖವನ್ನು ಟಿಎಂಸಿ ಅದೇ ಮಾದರಿಯಲ್ಲಿ ವಿಶ್ಲೇಷಿಸುತ್ತಿದೆ. ಬಿಜೆಪಿ ಕಳೆದ ಚುನಾವಣೆಯ ಸೋಲಿನಿಂದ ಏನನ್ನೂ ಕಲಿತಿಲ್ಲ ಎಂಬುದು ಟಿಎಂಸಿಯ ನೇರ ಆರೋಪವಾಗಿದೆ.
ಬಂಗಾಳಿ ಅಸ್ಮಿತೆ ಮತ್ತು ಹೆಮ್ಮೆಯ ಸಂಕೇತವಾಗಿ ಮಮತಾ
ಮಮತಾ ಬ್ಯಾನರ್ಜಿ ಅವರನ್ನು ಕೇವಲ ಒಬ್ಬ ರಾಜಕಾರಣಿಯಾಗಿ ಅಲ್ಲದೆ, ಬಂಗಾಳಿ ಸಂಸ್ಕೃತಿ ಮತ್ತು ಅಸ್ಮಿತೆಯ ರಕ್ಷಕಿಯಾಗಿ ಬಿಂಬಿಸುವುದು ಟಿಎಂಸಿಯ ಯಶಸ್ವಿ ತಂತ್ರಗಾರಿಕೆ. ಬಿಜೆಪಿ ನಾಯಕರು ಬಳಸುವ ಹಿಂದಿ ಮಿಶ್ರಿತ ದಾಟಿ ಅಥವಾ ವಿಶಿಷ್ಟ ಪದಪ್ರಯೋಗಗಳನ್ನು ಹೊರಗಿನವರು (Bohiragoto) ಸ್ಥಳೀಯ ಸಂವೇದನೆಗಳನ್ನು ತುಳಿಯಲು ಮಾಡುತ್ತಿರುವ ಪ್ರಯತ್ನ ಎಂದು ಟಿಎಂಸಿ ವ್ಯಾಖ್ಯಾನಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟಿಎಂಸಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಈ ಅವಮಾನವನ್ನು ಕ್ಷಮಿಸಲು ಅಥವಾ ಮರೆಯಲು ಸಾಧ್ಯವಿಲ್ಲ. ಬಿಜೆಪಿ ತನ್ನದೇ ಮಾತುಗಳಿಂದ ತನ್ನ ಭವಿಷ್ಯವನ್ನು ಬರೆದುಕೊಂಡಿದೆ ಎಂದು ಎಚ್ಚರಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಟಿಎಂಸಿ ಈ ಹೇಳಿಕೆಗಳನ್ನು ಕೇವಲ ಮಮತಾ ಅವರಿಗೆ ಮಾಡಿದ ಅವಮಾನ ಎಂದು ಸೀಮಿತಗೊಳಿಸದೆ, ಇಡೀ ಬಂಗಾಳದ ಜನತೆಗೆ ಮಾಡಿದ ಅವಮಾನ ಎಂದು ವಿಸ್ತರಿಸುತ್ತಿದೆ. ಇದು ಮತದಾರರಲ್ಲಿ ಪ್ರಾದೇಶಿಕ ಭಾವನೆ ಕೆರಳಿಸುವ ಉದ್ದೇಶವಾಗಿದೆ.
ಬಿಜೆಪಿಯ ಸಮರ್ಥನೆ ಮತ್ತು ನಿರೂಪಣೆ ಬದಲಿಸುವ ಪ್ರಯತ್ನ
ಟಿಎಂಸಿಯ ಈ ಆರೋಪಗಳನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕುತ್ತಿದ್ದು, ಪಕ್ಷದ ನಾಯಕರ ಪ್ರಕಾರ, ಈ ಹೇಳಿಕೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಧಾನಿ ಅಥವಾ ಗೃಹ ಸಚಿವರ ಮಾತುಗಳಲ್ಲಿ ಅಗೌರವಕ್ಕಿಂತ, ಟಿಎಂಸಿ ಸರ್ಕಾರದ ವೈಫಲ್ಯಗಳ ಬಗ್ಗೆ ಆಕ್ರೋಶವಿರುತ್ತದೆ ಎಂಬುದು ಬಿಜೆಪಿಯ ವಾದ. ಬಿಜೆಪಿಯು ತನ್ನ ಪ್ರಚಾರದ ದಿಕ್ಕನ್ನು ಅವಮಾನದ ಚರ್ಚೆಯಿಂದ ಆಡಳಿತ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಕಡೆಗೆ ತಿರುಗಿಸಲು ಹರಸಾಹಸ ಪಡುತ್ತಿದ್ದು, ಸಂದೇಶ್‌ಖಾಲಿ ಘಟನೆ, ಶಾಲಾ ನೇಮಕಾತಿ ಹಗರಣ ಮತ್ತು ಮಹಿಳೆಯರ ಸುರಕ್ಷತೆಯಂತಹ ಗಂಭೀರ ವಿಷಯಗಳ ಮೇಲೆ ಮತದಾರರ ಗಮನ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಟಿಎಂಸಿ ಸೃಷ್ಟಿಸುತ್ತಿರುವ ಈ ಭಾವನಾತ್ಮಕ ಅಲೆಯ ಮುಂದೆ ಬಿಜೆಪಿಯ ಅಭಿವೃದ್ಧಿ ಅಥವಾ ಭ್ರಷ್ಟಾಚಾರದ ನಿರೂಪಣೆಗಳು ಗೌಣವಾಗುವ ಭೀತಿ ಪಕ್ಷದ ನಾಯಕರಲ್ಲಿ ಇರುವುದು ಸುಳ್ಳಲ್ಲ.
ಮತದಾರರ ಮೇಲೇನು ಪರಿಣಾಮ...?
ಬಂಗಾಳದ ರಾಜಕೀಯವು ಯಾವಾಗಲೂ ಭಾವನೆಗಳ ಮೇಲೆ ನಿಂತಿದೆ. ಇಲ್ಲಿ ತರ್ಕಕ್ಕಿಂತ ಹೆಚ್ಚಾಗಿ ಗೌರವ ಮತ್ತು ಸಂಸ್ಕೃತಿ ಪ್ರಮುಖ ಪಾತ್ರ ವಹಿಸುತ್ತವೆ. ಮಮತಾ ಬ್ಯಾನರ್ಜಿ ಭದ್ರಕೋಟೆ ಎಂದರೆ ಅದು ಮಹಿಳಾ ಮತದಾರರು. ಅವರ ಬಗ್ಗೆ ಬಳಕೆಯಾಗುವ ಸಣ್ಣ ಅಸಭ್ಯ ಅಥವಾ ಅಣಕದ ಪದವೂ ಈ ಮತಬ್ಯಾಂಕ್ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಹೊರಗಿನವರು vs ಒಳಗಿನವರು: ಈ ಚರ್ಚೆಯು ಬಿಜೆಪಿಯನ್ನು ಹಿಂದಿ ಭಾಷಿಕರ ಅಥವಾ ಉತ್ತರ ಭಾರತದ ಪಕ್ಷ ಎಂದು ಬಿಂಬಿಸಲು ಟಿಎಂಸಿಗೆ ಸಹಾಯ ಮಾಡುತ್ತದೆ, ಇದು ಬಂಗಾಳಿ ಭಾಷಾ ಪ್ರೇಮಿಗಳನ್ನು ಸೆಳೆಯಲು ನೆರವಾಗುತ್ತದೆ. ಪದೇ ಪದೇ ವೈಯಕ್ತಿಕ ದಾಳಿಗಳ ಬಗ್ಗೆ ಚರ್ಚೆ ನಡೆದಾಗ, ಸರ್ಕಾರದ ಮೇಲಿರುವ ಭ್ರಷ್ಟಾಚಾರದ ಗಂಭೀರ ಆರೋಪಗಳು ಸಾರ್ವಜನಿಕ ಚರ್ಚೆಯಿಂದ ದೂರ ಸರಿಯುವ ಸಾಧ್ಯತೆ ಇರುತ್ತದೆ, ಇದು ಆಡಳಿತಾರೂಢ ಪಕ್ಷಕ್ಕೆ ಹೆಚ್ಚು ಲಾಭ.
ವಾಕ್ಸಮರದಲ್ಲಿ ಗೆಲ್ಲುವವರು ಯಾರು?
ಪಶ್ಚಿಮ ಬಂಗಾಳದ ಈ ಚುನಾವಣಾ ಸಮರವು ಈಗ ಕೇವಲ ಅಂಕಿ-ಅಂಶಗಳ ಆಟವಾಗಿ ಉಳಿದಿಲ್ಲ. ಇದು ಭಾಷೆ, ಭಾವನೆ ಮತ್ತು ಗೌರವದ ಹೋರಾಟವಾಗಿದೆ. ಟಿಎಂಸಿ ತನ್ನ ಹಳೆಯ ಟ್ರಂಪ್ ಕಾರ್ಡ್ ಯಶಸ್ವಿಯಾಗಿ ಪ್ಲೇ ಮಾಡುತ್ತಿದ್ದರೆ, ಬಿಜೆಪಿ ಈ ಭಾವನಾತ್ಮಕ ಜಾಲದಿಂದ ಹೊರಬಂದು ವಾಸ್ತವಿಕ ಸಮಸ್ಯೆಗಳ ಮೇಲೆ ಚರ್ಚೆ ನಡೆಸಲು ಹೆಣಗಾಡುತ್ತಿದೆ. ಬಿಜೆಪಿ ನಾಯಕರ ಮಾತುಗಳು ಅವರ ಹಾದಿಗೆ ಮುಳ್ಳಾಗುತ್ತವೆಯೇ ಅಥವಾ ಜನರು ಭ್ರಷ್ಟಾಚಾರದ ವಿಷಯಕ್ಕೆ ಆದ್ಯತೆ ನೀಡುತ್ತಾರೆಯೇ ಎಂಬುದು ಮೇ 4ರ ಫಲಿತಾಂಶದಲ್ಲಿ ತಿಳಿಯಲಿದೆ. ಆದರೆ ಸದ್ಯದ ಮಟ್ಟಿಗೆ, ಬಂಗಾಳದ ರಾಜಕೀಯ ಅಖಾಡದಲ್ಲಿ ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಬಿಜೆಪಿಯ ಪಾಲಿಗೆ ಹೆಚ್ಚು ಪ್ರಸ್ತುತವೆನಿಸುತ್ತಿದೆ(ಏಜೆನ್ಸೀಸ್).