ಜೈರಾಮ್ ರಮೇಶ್  
ದೇಶ

ಮಹಿಳಾ ಮೀಸಲಾತಿ ಮಸೂದೆ ಹೆಸರಲ್ಲಿ ಬಿಜೆಪಿ ತನ್ನ ಹಿಡನ್ ಅಜೆಂಡಾ ಹೊಂದಿದೆ: ಜೈರಾಮ್ ರಮೇಶ್ | Jairam Ramesh

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ನೆಪದಲ್ಲಿ ಕೇಂದ್ರ ಸರ್ಕಾರ ತರುತ್ತಿರುವ ಮಸೂದೆಗಳ ನಿಜವಾದ ಉದ್ದೇಶ ದುರುದ್ದೇಶಪೂರಿತವಾಗಿದ್ದು, ಅವುಗಳನ್ನು ಅವುಗಳ ಪ್ರಸ್ತುತ ರೂಪದಲ್ಲಿ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಗುರುವಾರ (ಏ. 16) ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್(Jairam Ramesh) ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಕೇಂದ್ರ ಮೂರು ಮಸೂದೆಗಳನ್ನು ಮಂಡಿಸುತ್ತಿದೆ. ಅವುಗಳನ್ನು ಮಹಿಳಾ ಮೀಸಲಾತಿ ಮಸೂದೆ ಎಂದು ಪ್ರಚಾರ ಮಾಡ್ತಿದೆ. ಅದು ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮಹಿಳಾ ಮೀಸಲಾತಿಯಾಗಿದೆ. ಮೂಲಭೂತವಾಗಿ ಅವು ಡಿಲಿಮಿಟೇಶನ್‌ಗೆ ಸಂಬಂಧಿಸಿವೆ ಎಂದು ತಿಳಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅವು ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮಹಿಳಾ ಮೀಸಲಾತಿಯಾಗಿದೆ. ಮೂಲಭೂತವಾಗಿ ಅವು ಡಿಲಿಮಿಟೇಶನ್‌ಗೆ ಸಂಬಂಧಿಸಿವೆ. ಬಿಜೆಪಿ ಈಗ ಪ್ರಬಲವಾಗಿರುವ ಕೆಲವು ಜನನಿಬಿಡ ರಾಜ್ಯಗಳಿಗೆ ಸವಲತ್ತು ನೀಡುವ ಡಿಲಿಮಿಟೇಶನ್ ಪ್ರಸ್ತಾಪಗಳ ಬಗ್ಗೆ ದೇಶಾದ್ಯಂತ ಅನೇಕ ಕಳವಳಗಳು ವ್ಯಕ್ತವಾಗಿವೆ.
ಲೋಕಸಭೆಯಲ್ಲಿ ಹಲವಾರು ರಾಜ್ಯಗಳ ಸಾಪೇಕ್ಷ ಬಲವು ವಾಸ್ತವವಾಗಿ ಕುಸಿಯುತ್ತದೆ. ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಅನ್ನು ವಾಸ್ತವವಾಗಿ ಮಾಡಿದ ವಿಧಾನವು ಪ್ರಧಾನಿ ಮೋದಿ-ಅಮಿತ್ ಶಾ ಜೋಡಿ ಎಷ್ಟು ಪೈಶಾಚಿಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಈ ಮಸೂದೆಗಳು ಹಾನಿಕಾರಕಾಗಿದ್ದು, ಪ್ರಸ್ತುತ ರೂಪದಲ್ಲೇ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಬೇಡಿಕೆ ಸರಳವಾಗಿದ್ದು, ಪ್ರಸ್ತುತ 543 ಲೋಕಸಭಾ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಿಡಬೇಕು. ಮತ್ತು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಮಹಿಳೆಯರಿಗೆ ಪ್ರತ್ಯೇಕ ಸ್ಥಾನಗಳನ್ನು ನೀಡಬೇಕು. 2023ರಲ್ಲೂ ಇದು ವಿರೋಧ ಪಕ್ಷದ ನಿಲುವಾಗಿತ್ತು. ಈಗಲೂ ಅದೇ ನಿಲುವು ನಮ್ಮದ್ದು. ಇದೇ ನಿಜವಾದ ಅಧಿಕಾರ ಹಂಚಿಕೆ ಎಂದು ಹೇಳಿದ್ದಾರೆ (ಏಜೆನ್ಸೀಸ್).