ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್  
ದೇಶ

ಬಿಜೆಪಿ ಸಿಎಂ ಸ್ಥಾನದಿಂದ ಇಳಿಸಿ ರಾಜಕೀಯವಾಗಿ ನಿತೀಶ್ ಕುಮಾರ್ ಅವರನ್ನು ಮುಗಿಸಿದೆ: ತೇಜಸ್ವಿ ಯಾದವ್ | Tejashwi Yadav

ಪಾಟ್ನಾ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಬಲವಂತದಿಂದ ಸಿಎಂ ಸ್ಥಾನದಿಂದ ಕೆಳಗಿಳಿಸುವ ಮೂಲಕ ಬಿಜೆಪಿ ಅವರನ್ನು ರಾಜಕೀಯವಾಗಿ ಮುಗಿಸಿದೆ ಎಂದು ಆರ್​ಜೆಡಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಬಿಹಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿವ ಸಾಮ್ರಾಟ್ ಚೌಧರಿ, ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಬಿಜೆಪಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಉಳಿಯಲು ಬಿಡುವುದಿಲ್ಲ ಎಂದು ನಮಗೆ ತಿಳಿದಿತ್ತು.2030ರವರೆಗೆ ಅವರೇ ಎನ್‌ಡಿಎಯನ್ನು ಮುನ್ನಡೆಸುತ್ತಾರೆ ಎಂದು ಹೇಳ್ತಿದ್ದರು. ಆದರೆ ಈಗ ಅವರನ್ನು ಮುಗಿಸಿದ್ದಾರೆ ಎಂದಿದ್ದಾರೆ.

ಯಾವುದೇ ರಾಜ್ಯಕ್ಕೆ ರಾಜಕೀಯ ಮತ್ತು ಆಡಳಿತದಲ್ಲಿ ಸ್ಥಿರತೆ ಮುಖ್ಯ. ಆದರೆ ಅದಕ್ಕೆ ಬಿಹಾರ ಅಪವಾದವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಐದು ಸರ್ಕಾರಗಳನ್ನು ಕಂಡಿದೆ ಎಂದು ನಿತೀಶ್ ಕುಮಾರ್ ಪದೇ-ಪದೇ ಎನ್‌ಡಿಎ ಒಳಗೆ ಮತ್ತು ಹೊರಗೆ ಹೋದ ಅವಧಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಶಿಷ್ಯರಾಗಿರುವ ಸಾಮ್ರಾಟ್ ಚೌಧರಿಯ ಬಗ್ಗೆ ನನಗೆ ಸಂತೋಷವಾಗಿದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಅವರ ಏಳಿಗೆಯನ್ನು ಸಹಿಸದವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಸಾಮ್ರಾಟ್ ಚೌಧರಿಯವರ ತಂದೆಯ ಹಳೆಯ ಭಾಷಣವನ್ನು ಉಲ್ಲೇಖಿಸಿರುವ ಯಾದವ್, ಶಕುನಿ ಚೌಧರಿ ನರೇಂದ್ರ ಮೋದಿಯನ್ನು ಜೀವಂತವಾಗಿ ಸಮಾಧಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದು ಬಿಜೆಪಿಯ ಉನ್ನತ ನಾಯಕತ್ವವನ್ನು ಹೆದರಿಸಿರುವಂತೆ ತೋರುತ್ತದೆ, ಅವರು ತಮ್ಮ ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ (ಏಜೆನ್ಸೀಸ್).