Pune Candidate | ಈ ಹಿಂದೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರನ್ನು ಟೀಕಿಸಿದ್ದ ಪೂಜಾ ಮೋರೆ ಜಾಧವ್
ಮುಂಬೈ: ಈ ಹಿಂದೆ ಮರಾಠಾ ಕೋಟಾ ಆಂದೋಲನದ ವೇಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅವರ ಪತ್ನಿ ಅಮೃತಾರನ್ನು ಟೀಕಿಸಿದ್ದ ಹಳೆಯ ವಿಡಿಯೋಗಳು ವೈರಲ್ ಆಗಿರುವ ಹಿನ್ನಲೆಯಲ್ಲಿ ಪುಣೆ ನಾಗರಿಕ ಚುನಾವಣೆಯಿಂದ ಪೂಜಾ ಮೋರೆ ಜಾಧವ್ ನಾಮಪತ್ರವನ್ನು ಬಿಜೆಪಿ ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕೋಟಾದಡಿಯಲ್ಲಿ ವಾರ್ಡ್ ಸಂಖ್ಯೆ 2 ರಿಂದ ಪೂಜಾ ಜಾಧವ್ ಬಿ ಫಾರ್ಮ್ ಪಡೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಪೂಜಾ ನೀಡಿದ್ದಾರೆನ್ನಲಾದ ಹಳೇ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಅವರ ನಾಮಪತ್ರ ಪರಿಶೀಲನೆಗೆ ಒಳಪಟ್ಟಿತು. ಈ ಹೇಳಿಕೆಗಳು ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ಹೊಡೆತ ನೀಡಬಹುದು ಎಂದು ಆಲೋಚಿಸಿ ಪಕ್ಷ ಅವರ ಉಮೇದುವಾರಿಕೆಯನ್ನು ಹಿಂಪಡೆದಿದೆ ಎಂದು ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ದೃಢಪಡಿಸಿದ್ದಾರೆ.
ಪೂಜಾ ಮೋರೆ ರಿಯಾಕ್ಷನ್..
ಈ ವಿವಾದದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪೂಜಾ ಮೋರೆ ಜಾಧವ್, ಸಾಮಾಜಿಕ ಜಾಲತಾಣಗಳದ ಬಳಕೆದಾರರು ತಮ್ಮನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡಿದ್ದು, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ನನಗೆ ಬಿಜೆಪಿಯ ಸಿದ್ಧಾಂತ ಮೇಲೆ ನಂಬಿಕೆ ಇಲ್ಲ ಎಂದು ಬಿಂಬಿಸಲು ಈ ಪ್ರಯತ್ನ ನಡೆಸಿದ್ದಾರೆ. ಈ ಟ್ರೋಲಿಂಗ್ ಪರಿಗಣಿಸಿ, ನನ್ನ ನಾಮಪತ್ರವನ್ನು ಹಿಂತೆಗೆದುಕೊಳ್ಳುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡೆ. ಆ ವಿಡಿಯೋದಲ್ಲಿರುವ ಹುಡುಗಿ ಬೇರೆ ಯಾರೋ ಇದ್ದು, ವಿನಾಕಾರಣ ನನ್ನನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದರು.
ನಾನು ಕ್ರಿಮಿನಲ್ ಪ್ರಕರಣಗಳ ಕುರಿತಾಗಿ ಆಗಾಗ್ಗೆ ನ್ಯಾಯಾಲಯಕ್ಕೆ ಭೇಟಿ ನೀಡಿದ್ದೇನೆ. ಕಾನೂನು ಪ್ರಕರಣಗಳನ್ನು ಎದುರಿಸಲು ನನ್ನ ಬಳಿ ಹಣವಿಲ್ಲದ ಸಂದರ್ಭಗಳಿವೆ, ಆದರೆ ನಾನು ಈ ವಿಷಯವಾಗಿ ನಾನು ಯಾವತ್ತಿಗೂ ಹಿಂದೆ ಹೆಜ್ಜೆ ಇಟ್ಟಿಲ್ಲ, ಇಂತಹ ದೊಡ್ಡ ಪಕ್ಷದಿಂದ ಟಿಕೆಟ್ ಪಡೆಯುವುದು ತನ್ನಂತಹ ತಳಮಟ್ಟದ ಕಾರ್ಯಕರ್ತೆಗೆ ಅಪರೂಪದ ಅವಕಾಶ ಎಂದರು.
ಸಮಾಜದಲ್ಲಿ ಅತ್ಯಂತ ಕೆಳ ಹಂತದಲ್ಲಿ ಗುರುತಿಸಿಕೊಂಡಿರುವ ಜನರಿಗೆ ನ್ಯಾಯ ಒದಗಿಸಲು, ಅವರ ಪರವಾಗಿ ಕೆಲಸ ಮಾಡಲು ಇದು ಅದೃಷ್ಟದ ಅವಕಾಶವಾಗಿತ್ತು ಎಂದು ಹೇಳಿದರು. ಮಹಾರಾಷ್ಟ್ರದ 28 ನಾಗರಿಕ ಸಂಸ್ಥೆಗಳ ಜೊತೆಗೆ ಪುಣೆ ಮಹಾನಗರ ಪಾಲಿಕೆ ಚುನಾವಣೆಗಳು ಜನವರಿ 15 ರಂದು ನಡೆಯಲಿದ್ದು, ಮರುದಿನವೇ ಫಲಿತಾಂಶ ಹೊರಬೀಳಲಿದೆ. ನಾಮಪತ್ರ ಪರಿಶೀಲನೆ ಪ್ರಕ್ರಿಯೆಯನ್ನು ನಿರ್ವಹಿಸಲು ಮತ್ತು ಚುನಾವಣೆಯನ್ನು ಸುಗಮವಾಗಿ ನಡೆಸಲು ಸಿದ್ಧರಿದ್ದೇವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ(ಏಜೆನ್ಸೀಸ್).