ಪ್ರಧಾನಿ ನರೇಂದ್ರ ಮೋದಿ ಜೊತೆ ಕ್ಯಾಪ್ಟನ್ ಅಮರೀಂದರ್ ಸಿಂಗ್  
ದೇಶ

ಪಕ್ಷಗಳು ಬದಲಾಗುತ್ತವೆ, ಆದರೆ...: ಮತ್ತೆ ಕಾಂಗ್ರೆಸ್‌ ಕದ ತಟ್ಟಿದರಾ ಕ್ಯಾಪ್ಟನ್...? ಹಬ್ಬಿದ್ದ ವದಂತಿಗಳಿಗೆ ಕೊನೆಗೂ ಕೊಟ್ರು ಕ್ಲಾರಿಟಿ! | Captain Amarinder Singh

ಚಂಡೀಗಢ: ಪಂಜಾಬ್ ರಾಜಕಾರಣದಲ್ಲಿ ನನಗೆ ಆರು ದಶಕಗಳ ಸುದೀರ್ಘ ಅನುಭವವಿದ್ದರೂ, ರಾಜ್ಯದ ವಿಷಯಗಳಿಗೆ ಸಂಬಂಧಿಸಿದಂತೆ ಬಿಜೆಪಿ ನನ್ನ ಅಭಿಪ್ರಾಯ ಅಥವಾ ಸಲಹೆಗಳನ್ನು ಪಡೆಯುತ್ತಿಲ್ಲ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಚಂಡೀಗಢ: ಪಂಜಾಬ್ ರಾಜಕಾರಣದಲ್ಲಿ ನನಗೆ ಆರು ದಶಕಗಳ ಸುದೀರ್ಘ ಅನುಭವವಿದ್ದರೂ, ರಾಜ್ಯದ ವಿಷಯಗಳಿಗೆ ಸಂಬಂಧಿಸಿದಂತೆ ಬಿಜೆಪಿ ನನ್ನ ಅಭಿಪ್ರಾಯ ಅಥವಾ ಸಲಹೆಗಳನ್ನು ಪಡೆಯುತ್ತಿಲ್ಲ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಮತ್ತು ರಾಜ್ಯದಲ್ಲಿ ಜಯಗಳಿಸಲು ಬಿಜೆಪಿ ತಂತ್ರಗಾರಿಕೆ ನಡೆಸುತ್ತಿರುವ ಮಧ್ಯೆಯೇ ಅವರ ಈ ಹೇಳಿಕೆ ಹೊರಬಿದ್ದಿದೆ.

ಆಜ್ ತಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಜೆಪಿ ನಾಯಕ ಅಮರೀಂದರ್ ಸಿಂಗ್, ಪಂಜಾಬ್‌ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿರುವ ಕೆಲವು ಪದಾಧಿಕಾರಿಗಳು ರಾಜ್ಯ ರಾಜಕಾರಣಕ್ಕೆ ಬಂದು ಕನಿಷ್ಠ ಒಂದು ವರ್ಷವೂ ಪೂರ್ಣಗೊಂಡಿಲ್ಲ. ಹೀಗಿದ್ದರೂ, ಸುಮಾರು 60 ವರ್ಷಗಳಿಂದ ಪಂಜಾಬ್‌ನ ವಿದ್ಯಮಾನಗಳನ್ನು ಹತ್ತಿರದಿಂದ ಕಂಡಿರುವ ನನ್ನನ್ನು ಸಂಪರ್ಕಿಸುವ ಸೌಜನ್ಯವನ್ನೂ ಪಕ್ಷ ತೋರಿಸುತ್ತಿಲ್ಲ ಎಂದು ಹೇಳಿದ್ದಾರೆ.

ನಾನು ಮತ್ತು ನನ್ನ ಸಹೋದ್ಯೋಗಿಗಳು ಪಂಜಾಬ್‌ನ ಚುನಾವಣಾ ರಾಜಕೀಯದಲ್ಲಿ ಆರು ದಶಕಗಳನ್ನು ಕಳೆದಿದ್ದೇವೆ. ಪಂಜಾಬ್ ಹಲವು ಕಷ್ಟಪರಿಪೂರ್ಣ ಹಂತಗಳನ್ನು ಹಾದುಹೋಗಿರುವುದನ್ನು ನಾವು ಕಂಡಿದ್ದೇವೆ. ರಾಜ್ಯಕ್ಕಾಗಿ ಹಲವು ಕೆಲಸಗಳನ್ನು ಮಾಡಿದ್ದೇವೆ. ನಮ್ಮ ಈ ಸುದೀರ್ಘ ಅನುಭವದಿಂದ ಬರುವ ಸಲಹೆ-ಅಭಿಪ್ರಾಯಗಳನ್ನು ಬಿಜೆಪಿ ಆಲಿಸುತ್ತದೆ ಮತ್ತು ಅದಕ್ಕೆ ಮೌಲ್ಯ ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಅಷ್ಟೇ ಎಂದು ಸಿಂಗ್ ತಿಳಿಸಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು 2021 ರಲ್ಲಿ ಕಾಂಗ್ರೆಸ್ ತೊರೆದು ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ನಂತರ 2022 ರಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.

ಇದನ್ನೂ ಓದಿ:ಪ್ರಶಾಂತ್ ಕಿಶೋರ್‌ಗೆ ಬಿಗ್​ ಶಾಕ್: ಟಿಕೆಟ್ ಸಿಕ್ಕ 24 ಗಂಟೆಯಲ್ಲೇ ಜನ ಸುರಾಜ್‌ಗೆ ಗುಡ್​ ಬೈ ಎಂದ ಅಭ್ಯರ್ಥಿ!.. ನೀಡಿದ ಕಾರಣ ಎಂತದ್ದು ಗೊತ್ತಾ..? | Bhushan Jha

ಕಾಂಗ್ರೆಸ್‌ಗೆ ಮರಳುವ ವದಂತಿಗಳಿಗೆ ಸ್ಪಷ್ಟನೆ

ಚುನಾವಣೆಗೂ ಮುನ್ನ ಅಮರೀಂದರ್ ಸಿಂಗ್ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಈ ಹೇಳಿಕೆಗಳು ಹೊರಬಿದ್ದಿವೆ. ಈ ಸಾಧ್ಯತೆಯ ಬಗ್ಗೆ ಕೇಳಿದಾಗ, ರಾಜಕೀಯ ಪಕ್ಷಗಳು ಬದಲಾಗುತ್ತಿರುತ್ತವೆ, ಆದರೆ ತಾವು ಬಿಜೆಪಿಯನ್ನು ತೊರೆಯುವ ಆಲೋಚನೆ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾನು ಕಾಂಗ್ರೆಸ್ ಅಥವಾ ಬಿಜೆಪಿಯಲ್ಲಿ ಇನ್ನು ಮುಂದೆ ಪ್ರಸ್ತುತನಲ್ಲ ಎಂದು ಎಲ್ಲೂ ಹೇಳಿಲ್ಲ. ರಾಜಕೀಯ ಪಕ್ಷಗಳು ಬದಲಾಗುತ್ತಿರುತ್ತವೆ. ನಾನು ಕಾಂಗ್ರೆಸ್‌ನಲ್ಲಿದ್ದಾಗ ಆಪರೇಷನ್ ಬ್ಲೂ ಸ್ಟಾರ್ ನಂತರ ಅಕಾಲಿ ದಳಕ್ಕೆ ಸೇರಿದ್ದೆ, ಆ ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದೆ. ಅದರರ್ಥ ನಾನು ಈಗ ಬಿಜೆಪಿಯನ್ನು ತೊರೆದು ಮತ್ತೊಂದು ಪಕ್ಷಕ್ಕೆ ಸೇರುತ್ತೇನೆ ಎಂದಲ್ಲ ಎಂದು ಅವರು ಹೇಳಿದರು.

ಪಂಜಾಬ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಬಿಜೆಪಿಯ ಸಕ್ರಿಯ ಸದಸ್ಯನಾಗಿ ತಮ್ಮ ಜವಾಬ್ದಾರಿಯಾಗಿದೆ ಎಂದಿರುವ ಸಿಂಗ್​, ರಾಜ್ಯದ ಕುರಿತಾಗಿ ನನಗೇನು ಅನ್ನಿಸುತ್ತದೋ ಅದನ್ನು ಪಕ್ಷಕ್ಕೆ ತಿಳಿಸುವುದು ನನ್ನ ಕರ್ತವ್ಯ. ಅದರರ್ಥ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ ಎಂದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರ ವಯಸ್ಸೆಷ್ಟು..?

ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಅವರ ನೆನಪಿನಲ್ಲಿ ಹೊರತರಲಾದ ಬಿಷನ್ ವಿತ್ ಲವ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮ ವಯಸ್ಸಿನ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ತಮಗೆ ಈಗ 84 ವರ್ಷ ವಯಸ್ಸಾಗಿದೆ, ಆದರೆ ವಯಸ್ಸು ರಾಜಕೀಯ ಜೀವನದ ಅಂತ್ಯವಲ್ಲ ಎಂಬುದನ್ನು ಸುಳಿವು ನೀಡಿದರು. ಇದೇ ವೇಳೆ ಅವರು 81 ನೇ ವಯಸ್ಸಿನಲ್ಲಿ ದೇಶದ ಪ್ರಧಾನಿಯಾದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಉದಾಹರಣೆಯನ್ನು ನೀಡಿದರು. ನನಗೆ 84 ವರ್ಷ, ಆದರೆ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾದಾಗ ನನ್ನಷ್ಟೆ ವಯಸ್ಸು ಎನ್ನುವ ಮೂಲಕ ರಾಜಕೀಯದಲ್ಲಿ ಮುಂದುವರೆಯುವ ಬಯಕೆಯನ್ನು ಪರೋಕ್ಷವಾಗಿ ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಅಮರೀಂದರ್ ಸಿಂಗ್ ಅವರು ಮತ್ತೊಮ್ಮೆ ಪಂಜಾಬ್ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಆಸೆಯಾಗಿದೆ ಎಂದು ಹೇಳಿದರು. ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಸೈಯದ್ ಕಿರ್ಮಾನಿ ಮತ್ತು ಮದನ್ ಲಾಲ್ ಉಪಸ್ಥಿತರಿದ್ದರು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ(ಏಜೆನ್ಸೀಸ್​)