ಕೆ.ಅಣ್ಣಾಮಲೈ ಮತ್ತು ಸಿಎಂ ದೇವೇಂದ್ರ ಫಡ್ನವೀಸ್ 
ದೇಶ

ಮುಂಬೈ ಬಗ್ಗೆ ಅಣ್ಣಾಮಲೈ ಹೇಳಿಕೆಯಿಂದ ಬಿಜೆಪಿ ಅಂತರ; ಗಂಭೀರವಾಗಿ ಪರಿಗಣಿಸಬೇಡಿ ಎಂದ ಸಿಎಂ ಫಡ್ನವೀಸ್ | CM Devendra Fadnavis

ಮುಂಬೈ: ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ 2 ದಿನ ಬಾಕಿಯಿರುವಂತೆ ಮುಂಬೈ ಮಹಾರಾಷ್ಟ್ರದ ನಗರವಲ್ಲ, ಅಂತಾರಾಷ್ಟ್ರೀಯ ಸಿಟಿ ಎಂಬ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಹೇಳಿಕೆ ಮಹಾರಾಷ್ಟ್ರದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದು, ಬಿಜೆಪಿ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದೆ
ಈ ಕುರಿತು ಮೊದಲು ಕೆ.ಅಣ್ಣಾಮಲೈ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಅವರಿಗೆ ಹಿಂದಿ ಬರಲ್ಲ, ಬೇರೆ ಭಾಷೆ ಮಾತನಾಡುವುವಾಗ ಹೇಳುವ ಅರ್ಥ ಅಪಾರ್ಥವಾಗಿದೆ ಎಂದಿದ್ದರು. ಆದರೆ ನಿನ್ನೆ(ಜ. 12) ಅವರ ಹೇಳಿಕೆಯ ರಾಜಕೀಯದ ಗಂಭೀರತೆಯನ್ನ ಅರ್ಥ ಮಾಡಿಕೊಂಡ ಬಳಿಕ ಅವರು, ಗಂಭೀರವಾಗಿ ಪರಿಗಣಿಸಬಾರದು ಎಂದು ತಿಳಿಸಿದ್ದಾರೆ.
ಮುಂಬೈ ಬದಲಿಗೆ ಬಾಂಬೆ ಎಂದು ತಪ್ಪಾಗಿ ಬಳಸಿದ್ದಾರೆ. ನಾವು ಕೆಲವೊಮ್ಮೆ ಚೆನ್ನೈ ಬದಲಿಗೆ ಮದ್ರಾಸ್ ಎಂದು ಕರೆಯುತ್ತೇವೆ. ಯಾರಾದರೂ ಸರಿಪಡಿಸಿದಾಗ ತಕ್ಷಣ ಸರಿಪಡಿಸಿಕೊಳ್ತೇವೆ. ಅಣ್ಣಾಮಲೈ ಅವರು ಮಹಾರಾಷ್ಟ್ರದವರಲ್ಲ, ರಾಷ್ಟ್ರೀಯ ಬಿಜೆಪಿ ನಾಯಕರಲ್ಲ. ಮತ್ತು ಅವರ ಹೇಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಾರದು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಕೆ.ಅಣ್ಣಾಮಲೈ ಹೇಳಿದ್ದೇನು?

ಕೆಲವು ದಿನಗಳ ಹಿಂದೆ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಅಣ್ಣಾಮಲೈ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಬಾಂಬೆ ಮಹಾರಾಷ್ಟ್ರದ ನಗರವಲ್ಲ ಮತ್ತು ಅದನ್ನು ಅಂತರರಾಷ್ಟ್ರೀಯ ನಗರ ಎಂದು ಹೇಳಿದ್ದರು. ಜೊತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಪಾಲಿಕೆಯನ್ನು ಬಿಜೆಪಿ ಮೇಯರ್ ಅಧಿಕಾರಕ್ಕೆ ಬಂದ್ರೆ ಅಭಿವೃದ್ಧಿಯಾಗುತ್ತದೆ ಎಂದಿದ್ದರು. 

ರಸಮಲೈ ಎಂದು ಕಿಡಿಕಾರಿದ್ದ ರಾಜ್​ ಠಾಕ್ರೆ

ಭಾನುವಾರ(ಜ. 11) ದಾದರ್​ನ ಶಿವತೀರ್ಥದಲ್ಲಿ ನಡೆದ ಬಿಎಂಸಿ ಚುನಾವಣೆಯ ಶಿವಸೇನಾ ಮತ್ತು ಎಂಎನ್​ಎಸ್ ಜಂಟಿ ರ್ಯಾಲಿಯಲ್ಲಿ ಮಾತನಾಡಿದ್ದ ರಾಜ್​ ಠಾಕ್ರೆ, ಬಾಂಬೆ ಮಹಾರಾಷ್ಟ್ರದ ನಗರವಲ್ಲ. ಅದು ಅಂತರರಾಷ್ಟ್ರೀಯ ನಗರ ಎಂಬ ಅಣ್ಣಾಮಲೈ ಹೇಳಿಕೆಯನ್ನು ಗುರಿಯಾಗಿಸಿಕೊಂಡು ರಸ್ಮಲೈ ಎಂದು ಕರೆದು ಕಿಡಿಕಾರಿದ್ದು, ಮುಂಬೈ ಬಗ್ಗೆ ಮಾತನಾಡಲು ಅವರು ಯಾರು ಎಂದು ವಾಗ್ದಾಳಿ ನಡೆಸಿದ್ದರು. 
ಇತ್ತೀಚೆಗೆ ತಮಿಳುನಾಡಿನಿಂದ ಮುಂಬೈ ಬಂದ ರಸ್ಮಲೈ ಮುಂಬೈ ಮಹಾರಾಷ್ಟ್ರದ ನಗರವಲ್ಲ. ಇದು ಅಂತಾರಾಷ್ಟ್ರೀಯ ನಗರ ಎಂದು ಹೇಳುತ್ತಾನೆ. ಅವರಿಗೂ ಮುಂಬೈಗೂ ಏನೂ ಸಂಬಂಧ, ಮುಂಬೈ ಬಗ್ಗೆ ಮಾತನಾಡಲು ಅವರು ಯಾರು? ಅದಕ್ಕಾಗಿ ಬಾಳಾ ಸಾಹೇಬ್ ಠಾಕ್ರೆ ಹಟಾವೊ ಲುಂಗಿ, ಬಜಾವೊ ಪುಂಗಿ ಎಂದು ಹೇಳಿದ್ದರು ಎಂದು ಅಪಹಾಸ್ಯ ಮಾಡಿದ್ದು, ಈ ಹೇಳಿಕೆ ರಾಜ್ಯದ ರಾಜಧಾನಿಯ ಮೇಲಿನ ಸಾರ್ವಭೌಮತ್ವಕ್ಕೆ ನೇರ ಬೆದರಿಕೆಯಾಗಿದೆ. ಮಹಾರಾಷ್ಟ್ರದಿಂದ ಮುಂಬೈಯನ್ನು ಬೇರ್ಪಡಿಸಲು ಬಿಜೆಪಿಯಿಂದ ಪಿತೂರಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕೆ.ಅಣ್ಣಾಮಲೈ ತಿರುಗೇಟು

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಾಡಿದ ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ, ನನಗೆ ಬೆದರಿಕೆ ಹಾಕಲು ಆದಿತ್ಯ ಠಾಕ್ರೆ ಮತ್ತು ರಾಜ್ ಠಾಕ್ರೆ ಯಾರು? ನಾನು ರೈತನ ಮಗನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅವರು ನನ್ನನ್ನು ನಿಂದಿಸಲು ಸಭೆಗಳನ್ನು ಆಯೋಜಿಸಿದ್ದಾರೆ. ನಾನು ಅಷ್ಟು ಮುಖ್ಯನಾಗಿದ್ದೇನೆಯೇ ಎಂಬು ನನಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಮುಂಬೈ ಬಂದ್ರೆ ಕಾಲುಗಳನ್ನು ಕತ್ತರಿಸುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಮುಂಬೈಗೆ ಬರುತ್ತೇನೆ. ಇಂತಹ ಬೆದರಿಕೆಗಳಿಗೆ ಹೆದರಿದ್ದರೆ ನಾನು ನನ್ನ ಹಳ್ಳಿಯಲ್ಲೇ ಇರುತ್ತಿದ್ದೆ. ಕಾಮರಾಜ್ ಭಾರತದ ಶ್ರೇಷ್ಠ ನಾಯಕರು ಅಂತ ಹೇಳಿದ್ರೆ ಅವರು ಇನ್ಮುಂದೆ ತಮಿಳರಲ್ಲವೇ? ಮುಂಬೈ ವಿಶ್ವದರ್ಜೆ ನಗರ ಎಂದು ಹೇಳಿದ್ರೆ ಹೇಗೆ ಅದು ಮಹಾರಾಷ್ಟ್ರದ ನಗರ ಆಗಲ್ಲವೇ? ಇವರೆಲ್ಲಾ ಅಜ್ಞಾನಿಗಳು ಎಂದಿದ್ದಾರೆ (ಏಜೆನ್ಸೀಸ್).