ಮಾಜಿ ಸಿಎಂ ಮಮತಾ ಬ್ಯಾನರ್ಜಿ 
ದೇಶ

ಬಂಗಾಳದಲ್ಲಿ ಬಿಜೆಪಿ ಗೆದ್ದಿಲ್ಲ, ಕಳ್ಳತನದಿಂದ ವಶಪಡಿಸಿಕೊಂಡಿದೆ; ಶೀಘ್ರದಲ್ಲೇ ಟಿಎಂಸಿ ಮತ್ತೆ ಅಧಿಕಾರಕ್ಕೇರಲಿದೆ: ಮಮತಾ ಬ್ಯಾನರ್ಜಿ | Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿಯತ್ತಿನಿಂದ ಗೆದ್ದಿಲ್ಲ, ಕಳ್ಳತನದಿಂದ ವಶಪಡಿಸಿಕೊಂಡಿದೆ ಎಂದು ಆರೋಪಿಸಿರುವ ಟಿಎಂಸಿ ಮುಖ್ಯಸ್ಥೆ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ(Mamata Banerjee), ಶೀಘ್ರದಲ್ಲೇ ಟಿಎಂಸಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾದ ಕ್ಯಾಥೆಡ್ರಲ್ ರಸ್ತೆಯಲ್ಲಿ ಶುಕ್ರವಾರ(ಆ. 28) ನಡೆದ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ವಿಭಾಗದ ಸಂಸ್ಥಾಪನಾ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಇಲ್ಲಿ ಬಿಜೆಪಿಗೆ ಯಾವುದೇ ಸಂಘಟನೆಯಿಲ್ಲ. ಅದು ಬಂಗಾಳದಾದ್ಯಂತ ತನ್ನ ಕೆಲಸವನ್ನು ಪೊಲೀಸರ ಮೂಲಕ ಮಾಡಿಸುತ್ತಿದೆ. ಈ ಬಾರಿ ನಾನು ಪೊಲೀಸರ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಗುಡುಗಿದ್ದಾರೆ.
ಶೀಘ್ರದಲ್ಲೇ ಬಂಗಾಳದಲ್ಲಿ ಮತ್ತೊಂದು ಬದಲಾವಣೆ ಉಂಟಾಗಲಿದ್ದು, ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಕಾರ್ಯಕರ್ತರ ದೌರ್ಜನ್ಯಗಳಿಗೆ ಉತ್ತರ ದೊರೆಯಲಿದೆ. ಶೀಘ್ರದಲ್ಲೇ ನಾನು ಜಿಲ್ಲಾ ಪ್ರವಾಸವನ್ನು ಆರಂಭಿಸುತ್ತೇನೆ. ಒಂದು ವೇಳೆ ಅನುಮತಿ ಸಿಗದಿದ್ದರೆ, ನಾನು ಕಾಲ್ನಡಿಗೆಯನ್ನೇ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.
ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿಯಲ್ಲಿ ಪೊಲೀಸರು ಇತ್ತೀಚೆಗೆ ನಡೆಸಿದ ಕ್ರಮವನ್ನು ತೀವ್ರವಾಗಿ ಟೀಕಿಸಿದ ಅವರು, ಈ ಪೊಲೀಸ್ ಪಡೆಗಳು ನನಗೆ ಗೊತ್ತಿಲ್ಲ. ನಾನು ಕೆಲಸ ಮಾಡಿದ ಪೊಲೀಸ್ ಪಡೆ ಮಾನವೀಯತೆಯಿಂದ ಕೂಡಿತ್ತೇ ಹೊರತು ಅಮಾನವೀಯವಾಗಿರಲಿಲ್ಲ. ಅವರು ಜನರಿಗೆ ಸಹಾಯ ಮಾಡುತ್ತಿದ್ದರು. ಮಸೀದಿಯಲ್ಲಿ ನಮಾಜ್ ಮುಗಿಸಿ ಹೊರಬಂದ ಮೂವರನ್ನು ಬಂಧಿಸಲಾಗಿದೆ. ಹಿಂದಿನ ಪೊಲೀಸರು ಜನರ ಮೇಲೆ ಬುಲ್ಡೋಜರ್‌ಗಳನ್ನು ಹರಿಸುತ್ತಿರಲಿಲ್ಲ, ಬದಲಾಗಿ ಜನರ ಬೆಂಬಲಕ್ಕೆ ನಿಲ್ಲುತ್ತಿದ್ದರು ಎಂದಿದ್ದಾರೆ (ಏಜೆನ್ಸೀಸ್).