Terrorist Remark 
ದೇಶ

ಪ್ರಧಾನಿ ಮೋದಿಗೆ ಭಯೋತ್ಪಾದಕ ಪಟ್ಟ; ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ ನಿಯೋಗ! | Terrorist Remark

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ( Terrorist Remark) ಎಂದು ಕರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಕೆಂಡಕಾರುತ್ತಿದ್ದು, ಖರ್ಗೆ ಹೇಳಿಕೆಗೆ ಅಧಿಕೃತವಾಗಿ ಆಕ್ಷೇಪಣೆ ವ್ಯಕ್ತಪಡಿಸಲು ಕೇಂದ್ರ ಸಚಿವ ಕಿರಣ್ ರಿಜಿಜು ನೇತೃತ್ವದ ಬಿಜೆಪಿ ನಿಯೋಗವು ಬುಧವಾರ (ಏ.22) ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ನೀಡಿದೆ.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಿಜಿಜು, ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿಯನ್ನು ಟೀಕಿಸಿರುವ ರೀತಿ ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 175 ರ ಅಡಿಯಲ್ಲಿ ಅಪರಾಧವಾಗಿದೆ, ಇದು ಪ್ರಾಥಮಿಕವಾಗಿ ಮಾನನಷ್ಟ ಪ್ರಕರಣವಾಗಿದೆ ಎಂದು ಪಕ್ಷವು ಆರೊಪಿಸಿದೆ. ಈ ಗಂಭೀರ ವಿಚಾರವನ್ನು ಚುನಾವಣಾ ಆಯೋಗವು ತಕ್ಷಣವೇ ಗಮನಕ್ಕೆ ತೆಗೆದುಕೊಳ್ಳಬೇಕು ಮತ್ತು ಕಾಂಗ್ರೆಸ್ ಮುಖ್ಯಸ್ಥರು ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ನಾನು ಹೇಳಿದ್ದು ಬೇರೆ ರೀತಿ...ಎಂದ ಖರ್ಗೆ

ಇತ್ತ ತಮ್ಮ ಹೇಳಿಕೆಯಿಂದ ಸೃಷ್ಟಿಯಾದ ವಿವಾದದ ಬಗ್ಗೆ ಕಲ್ಬುರ್ಗಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ತಮ್ಮ ಮಾತುಗಳನ್ನು ಅಕ್ಷರಶಃ ತೆಗೆದುಕೊಳ್ಳಬಾರದು, ರಾಜಕೀಯ ವಿರೋಧಿಗಳಲ್ಲಿ ಭಯ ಸೃಷ್ಟಿಸಲು ಸರ್ಕಾರಿ ಸಂಸ್ಥೆಗಳನ್ನು ಬಳಸುತ್ತಿರುವುದನ್ನು ಟೀಕಿಸುವುದು ಮಾತ್ರ ತಮ್ಮ ಉದ್ದೇಶವಾಗಿತ್ತು ಎಂದು ಹೇಳಿದರು. ಚುನಾವಣೆಗಳ ಸಮಯದಲ್ಲಿ ಜನರನ್ನು ಮೌನಗೊಳಿಸಲು ಮತ್ತು ರಾಜಕೀಯ ಚಟುವಟಿಕೆಗಳ ಮೇಲೆ ಪ್ರಭಾವ ಬೀರಲು ಸಿಬಿಐ, ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಲು ತಾವು ಆ ಪದ ಬಳಸಿದ್ದಾಗಿ ಅವರು ವಿವರಿಸಿದರು.
ನಾನು ಪ್ರಧಾನ ಮಂತ್ರಿಯವರನ್ನು ನೇರವಾಗಿ ಭಯೋತ್ಪಾದಕ ಎಂದು ಕರೆದಿಲ್ಲ, ಬದಲಾಗಿ ತನಿಖಾ ಸಂಸ್ಥೆಗಳ ದಾಳಿಗಳ ಮೂಲಕ ಅವರು ಜನರಲ್ಲಿ ಭಯೋತ್ಪಾದನೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಮತ್ತು ಜನರನ್ನು ಹೆದರಿಸಿ ಮೌನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾಗಿ ಖರ್ಗೆ ತಿಳಿಸಿದರು. ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಮೂಲಕ ಚುನಾವಣೆಯಲ್ಲಿ ಅವರನ್ನು ಸೋಲಿಸುವ ತಂತ್ರವನ್ನು ತಾವು ಚೆನ್ನೈನಲ್ಲಿ ನೀಡಿದ್ದ ಹೇಳಿಕೆಯಲ್ಲಿ ಉಲ್ಲೇಖಿಸಿರುವುದಾಗಿ ಅವರು ಸ್ಪಷ್ಟಪಡಿಸಿದರು.

ನಾವು ಇದನ್ನು ಒಪ್ಪಲ್ಲ ಎಂದ ಬಿಜೆಪಿ ನಾಯಕರು

ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟೀಕರಣವನ್ನು ಬಿಜೆಪಿ ನಾಯಕರು ಸಾರಾಸಗಟಾಗಿ ತಿರಸ್ಕರಿಸಿದ್ದು, ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಲ್ಲಾ, ಕಾಂಗ್ರೆಸ್ ಪಕ್ಷವು ದ್ವೇಷವನ್ನು ಬಿತ್ತುವ ಮೂಲಕ ಭಾರತದ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಅಪವಿತ್ರ ಮೈತ್ರಿಕೂಟವು ಪ್ರಧಾನ ಮಂತ್ರಿಯವರನ್ನು ಗುರಿಯಾಗಿಸಿಕೊಳ್ಳುವ ಭರದಲ್ಲಿ ಭಾರತೀಯರನ್ನೇ ಭಯೋತ್ಪಾದಕರು ಎಂದು ಕರೆಯುತ್ತಿದೆ. ಇಂತಹ ವೈಯಕ್ತಿಕ ದಾಳಿಗಳಿಂದ ಅವರ ಚುನಾವಣಾ ಭವಿಷ್ಯವೇನೂ ಬದಲಾಗುವುದಿಲ್ಲ ಎಂದು ಗೋಯಲ್ ಕಿಡಿಕಾರಿದ್ದಾರೆ. ಇನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ವಕ್ತಾರ ಸಂಬಿತ್ ಪಾತ್ರ, ಖರ್ಗೆ ಅವರ ಸ್ಪಷ್ಟನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಖರ್ಗೆ ಮಾತುಗಳು ಉದ್ದೇಶಪೂರ್ವಕ ಹಾಗೂ ರಾಜಕೀಯ ಪ್ರೇರಿತವಾಗಿದ್ದು, ದೇಶದ ಪ್ರಧಾನಿಯನ್ನು ಹೀಯಾಳಿಸುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಖರ್ಗೆ ಹೇಳಿದ್ದೇನು..?

ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ನಿರ್ಧಾರವನ್ನು ತೀವ್ರವಾಗಿ ಪ್ರಶ್ನಿಸುವ ಭರದಲ್ಲಿ ಪ್ರಧಾನಿ ಮೋದಿಯನ್ನು ಉಲ್ಲೇಖಿಸಿ ನೀಡಿದ್ದ ಹೇಳಿಕೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಸಮರಕ್ಕೆ ಕಾರಣವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಖರ್ಗೆ, ಅಣ್ಣಾದೊರೈ ಅವರ ಫೋಟೋ ಹಾಕುವ ಎಐಎಡಿಎಂಕೆ ಜನರು ಮೋದಿ ಜೊತೆ ಹೇಗೆ ಸೇರುತ್ತಾರೆ..? ಅವರೊಬ್ಬ ಭಯೋತ್ಪಾದಕ ಎಂದು ಕಿಡಿಕಾರಿದ್ದರು. ಮೋದಿಯವರ ಪಕ್ಷಕ್ಕೆ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲ. ಇಂತಹ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ಎಐಎಡಿಎಂಕೆ ನಾಯಕರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ. ಇದು ಅಣ್ಣಾದೊರೈ, ಕಾಮರಾಜ್, ಪೆರಿಯಾರ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಗಳಿಗೆ ಮಾಡುತ್ತಿರುವ ದ್ರೋಹ ಎಂದು ಆರೋಪಿಸಿದ್ದರು(ಏಜೆನ್ಸೀಸ್​).