Dimpal Mehta | ಮೀರಾ ಭಯಾಂದರ್ ಮುನ್ಸಿಪಲ್ ಕಾರ್ಪೊರೇಷನ್‌ನ ನೂತನ ಮೇಯರ್ ದಿಂಪಾಲ್ ಮೆಹ್ತಾ
ಮುಂಬೈ: ಮಹಾರಾಷ್ಟ್ರದ ಮೀರಾ ಭಯಾಂದರ್ ಮುನ್ಸಿಪಲ್ ಕಾರ್ಪೊರೇಷನ್‌ನ ನೂತನ ಮೇಯರ್ ಆಗಿ ಭಾರತೀಯ ಜನತಾ ಪಕ್ಷದ ಕಾರ್ಪೊರೇಟರ್ ದಿಂಪಾಲ್ ಮೆಹ್ತಾ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತೀವ್ರ ವಿರೋಧ ವ್ಯಕ್ತಪಡಿಸಿವೆ.
ಮರಾಠಿ ಮಾತನಾಡುವ ನಾಯಕರನ್ನು ಮಾತ್ರ ಮೇಯರ್ ಸ್ಥಾನದಲ್ಲಿ ಕೂರಿಸಬೇಕೆನ್ನುವುದು ಎರಡು ಪಕ್ಷಗಳ ಒತ್ತಾಯವಾಗಿದ್ದು, 95 ಸದಸ್ಯರ ಈ ಕಾರ್ಪೋರೇಷನ್ನಲ್ಲಿ ಬಿಜೆಪಿ 78 ಚುನಾಯಿತ ಸದಸ್ಯರನ್ನು ಹೊಂದಿದರೆ, ಕಾಂಗ್ರೆಸ್ 13, ಶಿವಸೇನೆ (ಶಿಂಧೆ ಬಣ) 3 ಕಾರ್ಪೊರೇಟರ್‌ಗಳನ್ನು ಹೊಂದಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಅನಿಲ್ ಪಾಟೀಲ್ ಕೂಡ ಗೆಲುವು ಸಾಧಿಸಿದ್ದು, ಅವರು ಕೂಡ ತಮ್ಮ ಮೂಲ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟ ರಚನೆ
ಮೇಯರ್ಚ ಚುನಾವಣೆಯ ಸ್ಪರ್ಧೆಗೆ ಕಾಂಗ್ರೆಸ್ ಮತ್ತು ಶಿವಸೇನೆ (ಶಿಂಧೆ ಬಣ) ಜಂಟಿ ರಂಗವನ್ನು ರಚಿಸಿದ್ದವು. ಹಿರಿಯ ನಾಯಕ ನರೇಂದ್ರ ಮೆಹ್ತಾರ ಅತ್ತಿಗೆ ದಿಂಪಾಲ್ ಮೆಹ್ತಾರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಇತ್ತ ಕಾಂಗ್ರೆಸ್-ಶಿವಸೇನಾ ಮೈತ್ರಿಕೂಟವು ರುಬಿನಾ ಖತುನ್ರನ್ನು ಹುರಿಯಾಳಾಗಿಸಿತ್ತು.
ಅಂತಿಮವಾಗಿ ಸಂಖ್ಯಾಬಲದ ಆಧಾರದ ಮೇಲೆ ದಿಂಪಾಲ್ ಮೆಹ್ತಾ ಸುಲಭವಾಗಿ ಜಯಗಳಿಸಿದರು.
ಬಿಜೆಪಿಯ ಸಮರ್ಥನೆ
ವಿರೋಧ ಪಕ್ಷಗಳ ಟೀಕೆಗಳನ್ನು ತಳ್ಳಿಹಾಕಿರುವ ಬಿಜೆಪಿ, ಅಭಿವೃದ್ಧಿಯೇ ತನ್ನ ಮಾನದಂಡ ಎಂದು ಹೇಳಿದೆ. ದಿಂಪಾಲ್ ಮೆಹ್ತಾ ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಹಾಗೂ ಎರಡು ಬಾರಿ ಕಾರ್ಪೊರೇಟರ್ ಆಗಿ ಉತ್ತಮ ಅನುಭವ ಹೊಂದಿದ್ದಾರೆ. ಅವರ ಅರ್ಹತೆ ಮತ್ತು ಕಾರ್ಯವೈಖರಿಯನ್ನು ನೋಡಿ ಪಕ್ಷವು ಈ ಜವಾಬ್ದಾರಿ ನೀಡಿದೆಯೇ ಹೊರತು ಭಾಷೆಯ ಆಧಾರದ ಮೇಲಲ್ಲ ಎಂಬುದು ಬಿಜೆಪಿಯ ನಿಲುವು(ಏಜೆನ್ಸೀಸ್).