Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 
ದೇಶ

ನನ್ನ ಸ್ಪರ್ಧೆ ತಡೆಯಲು ಎರಡು ಸುಳ್ಳು ಕೇಸ್...ಬಿಜೆಪಿ ಕುತಂತ್ರವನ್ನು ಜನರು ವಿಫಲಗೊಳಿಸುತ್ತಾರೆ ಎಂದ ಮಮತಾ ಬ್ಯಾನರ್ಜಿ | Mamata Banerjee

ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿ ತಾರಕಕ್ಕೇರಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಸುರಿಯುತ್ತಿದೆ.
ಶನಿವಾರ ಪಶ್ಚಿಮ ಮೇದಿನಿಪುರ ಜಿಲ್ಲೆಯ ಕೇಶಿಯಾರಿಯಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಚುನಾವಣಾ ಆಯೋಗದ ಬೆಂಬಲದೊಂದಿಗೆ ಬಿಜೆಪಿ ಸರ್ಕಾರವು ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಬರೋಬ್ಬರಿ 90 ಲಕ್ಷ ಹೆಸರುಗಳನ್ನು ತೆಗೆದುಹಾಕಿದೆ ಎಂದು ಮಮತಾ ದೂರಿದ್ದು, ತೆಗೆದುಹಾಕಲಾದ 90 ಲಕ್ಷ ಮತದಾರರಲ್ಲಿ 60 ಲಕ್ಷ ಹಿಂದೂಗಳು ಮತ್ತು 30 ಲಕ್ಷ ಮುಸ್ಲಿಮರಿದ್ದಾರೆ ಎಂದು ಅಂಕಿ-ಅಂಶ ಸಮೇತ ಬಹಿರಂಗಪಡಿಸಿದರು.
ಈ ಎಸ್​​ಐಆರ್​ ಪ್ರಕ್ರಿಯೆ ಒತ್ತಡದಿಂದ ಸುಮಾರು 250ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಘಾತಕಾರಿ ವಿಷಯ ಹಂಚಿಕೊಂಡ ದೀದಿ, ಇದೊಂದು ವ್ಯವಸ್ಥಿತವಾದ ದೊಡ್ಡ ಹಗರಣವಾಗಿದ್ದು, ಚುನಾವಣಾ ಫಲಿತಾಂಶವನ್ನು ಬದಲಿಸಲು ಮಾಡುತ್ತಿರುವ ಸಂಚು ಎಂದು ಆರೋಪಿಸಿದರು.
ಪೌರತ್ವದ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಮಮತಾ, ನಾವು ಪದೇ ಪದೇ ನಮ್ಮ ಪೌರತ್ವವನ್ನು ಸಾಬೀತುಪಡಿಸಬೇಕೇ? ಬಂಗಾಳಿ ಮಾತನಾಡುವ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವ ಬಿಜೆಪಿಯ ಭರವಸೆಯನ್ನು ಕಟುವಾಗಿ ವಿರೋಧಿಸಿದ ದೀದಿ, ಯುಸಿಸಿ ಜಾರಿಯಾದರೆ ಜನರ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈವಿಧ್ಯಮಯ ಸಂಪ್ರದಾಯಗಳಿಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ದೀದಿ ಸ್ಪರ್ಧೆ ತಪ್ಪಿಸಲು ಸುಳ್ಳು ಕೇಸ್​!

ಭವಾನಿಪುರ ಕ್ಷೇತ್ರದಿಂದ ಸುವೇಂದು ಅಧಿಕಾರಿ ವಿರುದ್ಧದ ತಮ್ಮ ಸ್ಪರ್ಧೆಯನ್ನು ತಪ್ಪಿಸಲು ಬಿಜೆಪಿ ಎರಡು ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಆರೋಪಿಸಿರುವ ಮಮತಾ ಬ್ಯಾನರ್ಜಿ, ಬಿಜೆಪಿ ಇಂತಹ ಕುತಂತ್ರಗಳನ್ನು ಮಾಡುತ್ತಿದ್ದರೂ, ಟಿಎಂಸಿ ಕಾರ್ಯಕರ್ತರು ಅದನ್ನು ವಿಫಲಗೊಳಿಸಿದ್ದಾರೆ ಎಂದರು. ಇವಿಎಂ ಯಂತ್ರಗಳ ಎಣಿಕೆಯಲ್ಲಿ ತಾರತಮ್ಯ ಮಾಡುವ ಸಾಧ್ಯತೆಯಿದೆ ಎಂದು ಸಂಶಯ ವ್ಯಕ್ತಪಡಿಸುತ್ತಾ, ಬಿಜೆಪಿಗೆ ಅನುಕೂಲಕರವಾದ ಕ್ಷೇತ್ರಗಳ ಫಲಿತಾಂಶಗಳನ್ನು ಮೊದಲು ಘೋಷಿಸಿ, ಟಿಎಂಸಿ ಮುನ್ನಡೆ ಸಾಧಿಸುವ ಕ್ಷೇತ್ರಗಳ ಫಲಿತಾಂಶಗಳನ್ನು ವಿಳಂಬ ಮಾಡುವ ಸಾಧ್ಯತೆಯಿದೆ. ಮತದಾರರು ಇವಿಎಂಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದರು(ಏಜೆನ್ಸೀಸ್​).