Mahua Moitra | ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದೇ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದು, ಕೋಲ್ಕತ್ತಾದಲ್ಲಿ ಬೀಡುಬಿಟ್ಟಿರುವ ಇಬ್ಬರು ಹಿರಿಯ ಬಿಜೆಪಿ ನಾಯಕರ ರಹಸ್ಯ ಸ್ಥಳ ಮತ್ತು ಅವರ ಚಲನವಲನಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರುವ ಮೊಯಿತ್ರಾ, ಕಟುವಾದ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ನಲ್ಲಿ ಸಂಸದೆ ಮಹುವಾ ಮೊಯಿತ್ರಾ, ಹಿಟ್ ಲಿಸ್ಟ್ನಂತೆ ಕಾಣುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರಾದ ಸೌರಭ್ ಸಿಂಗ್, ಪ್ರೊಫೆಸರ್ ಸ್ವದೇಶ್ ಸಿಂಗ್ ಮತ್ತು ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರ ಚಿತ್ರಗಳಿವೆ. ವಿಶೇಷವೆಂದರೆ, ಸೌರಭ್ ಮತ್ತು ಸ್ವದೇಶ್ ಚಿತ್ರಗಳನ್ನು ಕೆಂಪು ಬಣ್ಣದಲ್ಲಿ ವೃತ್ತಾಕಾರವಾಗಿ ಗುರುತಿಸಲಾಗಿದ್ದು, ಫೋಟೋ ಮೇಲೆ S+S ಎಂದು ಬರೆಯಲಾಗಿದೆ.
ಹೋಟೆಲ್‌ನಿಂದ ಹೋಟೆಲ್‌ಗೆ ಬೆನ್ನಟ್ಟಿದ ಮೊಯಿತ್ರಾ!
ಛತ್ತೀಸ್‌ಗಢದ ಮಾಜಿ ಬಿಜೆಪಿ ಶಾಸಕ ಸೌರಭ್ ಸಿಂಗ್ ಬಂಗಾಳದ ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಮೊಯಿತ್ರಾ ಗಂಭೀರವಾಗಿ ಆರೋಪಿಸಿದ್ದು, ಸೌರಭ್ ಸಿಂಗ್, ಹುಷಾರಾಗಿರಿ! ನನ್ನ ಟ್ವೀಟ್ ಬಳಿಕ ನೀವು ಎಲ್ಜಿನ್ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ನೊವೊಟೆಲ್‌ಗೆ ತೆರಳಿ ಹಣ ವಿತರಣೆ ಮುಂದುವರಿಸುತ್ತಿದ್ದೀರ. ನೆನಪಿರಲಿ, ಇದು ಬಂಗಾಳ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಕೂಡ ನಿಮ್ಮನ್ನು ಇಲ್ಲಿ ಉಳಿಸಲು ಸಾಧ್ಯವಿಲ್ಲ ಎಂದು ಅವರು ನೇರವಾಗಿ ಎಚ್ಚರಿಸಿದ್ದಾರೆ.
ಇದು ಬಿಜೆಪಿ ನಾಯಕರಿಗೆ ಮೊಯಿತ್ರಾ ನೀಡುತ್ತಿರುವ ಎರಡನೇ ಎಚ್ಚರಿಕೆಯಾಗಿದ್ದು, ಸತ್ಯವತಿ ಕಾಲೇಜಿನ ಪ್ರಾಧ್ಯಾಪಕಿ ಸ್ವದೇಶ್ ಸಿಂಗ್ ಮತ್ತು ಸೌರಭ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಹೆಸರಿನಲ್ಲಿ ಜನರನ್ನು ಕರೆಸಿಕೊಂಡು ವಸೂಲಿ ಮಾಡುತ್ತಿದ್ದಾರೆ ಮತ್ತು ನಗದು ಹಂಚುತ್ತಿದ್ದಾರೆ ಎಂದು ಸಂಸದೆ ದೂರಿದ್ದಾರೆ. ನಾವು ನಿಮ್ಮ ಪ್ರತಿಯೊಂದು ನಡೆಯನ್ನು ಗಮನಿಸುತ್ತಿದ್ದೇವೆ, ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿರುವಾಗಲೇ ಸಂಸದೆಯೊಬ್ಬರು ವಿರೋಧ ಪಕ್ಷದ ನಾಯಕರ ಇರುವಿಕೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರುವುದು ಭದ್ರತೆಯ ದೃಷ್ಟಿಯಿಂದಲೂ ಚರ್ಚೆಗೆ ಕಾರಣವಾಗಿದೆ. ಮೊಯಿತ್ರಾ ಅವರ ಈ ಓಪನ್ ಥ್ರೆಟ್ ಮತ್ತು ಗಂಭೀರ ಆರೋಪಗಳ ಕುರಿತು ಬಿಜೆಪಿ ಇದುವರೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ(ಏಜೆನ್ಸೀಸ್).