BJP Meeting | ನಾಳೆ ಕೋಲ್ಕತ್ತಾದಲ್ಲಿ ಕಮಲ ನಾಯಕರ ಹೈ-ವೋಲ್ಟೇಜ್ ಮೀಟಿಂಗ್!
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಹೈ-ವೋಲ್ಟೇಜ್ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಕೋಲ್ಕತ್ತಾದಲ್ಲಿ ರಾಜಕೀಯ ಚಟುವಟಿಕೆಗಳು ಹಿಂದೆಂದಿಗಿಂತಲೂ ವೇಗ ಪಡೆದುಕೊಂಡಿದ್ದು, ಮೇ 4ರ ಮಹಾ ಎಣಿಕೆಗೆ ಸನ್ನದ್ಧವಾಗಿರುವ ಬಿಜೆಪಿ, ಶನಿವಾರ (ಮೇ.2) ತನ್ನೆಲ್ಲಾ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರ ಮಹತ್ವದ ಸಭೆ (BJP Meeting) ಕರೆದಿರುವುದಾಗಿ ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಮತ ಎಣಿಕೆ ಕೇಂದ್ರಗಳ ನಿರ್ವಹಣೆ ಮತ್ತು ಬೂತ್ ಮಟ್ಟದ ಸಮನ್ವಯದ ಕುರಿತು ಅಂತಿಮ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಬಹುಮತದ ಮುನ್ಸೂಚನೆ ನೀಡಿರುವುದರಿಂದ ಕೇಸರಿ ಪಡೆ ಭಾರಿ ಉತ್ಸಾಹದಲ್ಲಿದ್ದು, ಮುಂದಿನ ಬಾರಿ ಪ್ರಧಾನಿ ಮೋದಿ ಬಂಗಾಳಕ್ಕೆ ಭೇಟಿ ನೀಡುವುದು ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕಾಗಿಯೆ ಎಂದು ಬಿಜೆಪಿ ನಾಯಕರು ವಿಶ್ವಾಸದಿಂದ ಬೀಗುತ್ತಿದ್ದಾರೆ.
ಹಲವಾರು ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿಗೆ 146 ರಿಂದ 161 ಸ್ಥಾನಗಳನ್ನು ನೀಡಿದ್ದು, ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 125 ರಿಂದ 140 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಅಂಕಿಅಂಶಗಳು ಬಿಜೆಪಿಯಲ್ಲಿ ವಿಜಯೋತ್ಸವದ ಕಳೆ ತಂದಿದ್ದರೆ, ಟಿಎಂಸಿ ಪಾಳಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ. ಮಮತಾ ಬ್ಯಾನರ್ಜಿ ಈ ಸಮೀಕ್ಷೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ತಮ್ಮ ಪಕ್ಷವು 226 ರಿಂದ 230 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ನಾಲ್ಕನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೆಲುವಿನ ವಿಶ್ವಾಸದ ನಡುವೆಯೇ ಮಮತಾ ಬ್ಯಾನರ್ಜಿ ಇವಿಎಂ ಭದ್ರತೆಯ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಬಿಜೆಪಿ ಮತಯಂತ್ರಗಳನ್ನು ಹಾಳುಮಾಡಲು ಯತ್ನಿಸಬಹುದು ಎಂದು ಆರೋಪಿಸಿದ್ದಾರೆ. ಸ್ಟ್ರಾಂಗ್ ರೂಮ್‌ಗಳ ಮೇಲೆ 24 ಗಂಟೆಗಳ ಕಾಲ ಹದ್ದಿನ ಕಣ್ಣಿಡುವಂತೆ ತನ್ನ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಂಗಾಳದ ಗದ್ದುಗೆ ಮಮತಾ ಬ್ಯಾನರ್ಜಿ ಪಾಲಾಗಲಿದೆಯೇ ಅಥವಾ ಬಿಜೆಪಿ ಹೊಸ ಇತಿಹಾಸ ಬರೆಯಲಿದೆಯೇ ಎಂಬ ಕುತೂಹಲಕ್ಕೆ ಮೇ 4 ರಂದು ತೆರೆ ಬೀಳಲಿದೆ. ಅಲ್ಲಿಯವರೆಗೆ ಇಡೀ ದೇಶದ ಚಿತ್ತ ಬಂಗಾಳದ ಮತ ಎಣಿಕೆ ಕೇಂದ್ರಗಳತ್ತ ನೆಟ್ಟಿದೆ(ಏಜೆನ್ಸೀಸ್).