BJP | ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್‌ಗೆ ಹೊಸ ಉಸ್ತುವಾರಿಗಳ ನಿಯೋಜನೆ! 
ದೇಶ

ಮುಂಬರುವ ಚುನಾವಣಾ ಸಮರಕ್ಕೆ ಸಜ್ಜಾದ ಕಮಲ ಪಡೆ: ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್‌ಗೆ ಹೊಸ ಉಸ್ತುವಾರಿಗಳ ನಿಯೋಜನೆ! | BJP

ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ (BJP) ತನ್ನ ಸಂಘಟನೆಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಮೇಲಿನ ಮೂರು ಪ್ರಮುಖ ರಾಜ್ಯಗಳಿಗೆ ಹೊಸ ಚುನಾವಣಾ ಉಸ್ತುವಾರಿ ಹಾಗೂ ಸಹ-ಉಸ್ತುವಾರಿಗಳನ್ನು ನಿಯೋಜಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರ ರಾಜಕಾರಣವನ್ನೇ ನಿರ್ಧರಿಸುವ ಉತ್ತರ ಪ್ರದೇಶದ ಉಸ್ತುವಾರಿಯಾಗಿ ವಿನೋದ್ ತಾವ್ಡೆ ಹಾಗೂ ಸಹ-ಉಸ್ತುವಾರಿಯಾಗಿ ಜಗದೀಶ್ ಈಶ್ವರ್‌ಭಾಯಿ ಪಟೇಲ್​ರನ್ನು ನೇಮಿಸಲಾಗಿದೆ. ಪಂಜಾಬ್​ನ ಜವಾಬ್ದಾರಿಯನ್ನು ಸತೀಶ್ ಪೂನಿಯಾಗೆ, ಗುಜರಾತ್ ರಾಜ್ಯಕ್ಕೆ ತರುಣ್ ಚುಘ್​​ರನ್ನು ಉಸ್ತುವಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೂರೂ ರಾಜ್ಯಗಳಲ್ಲಿ ಪಕ್ಷದ ಬಲವನ್ನು ವೃದ್ಧಿಸುವುದು ಮತ್ತು ಮುಂಬರುವ ಚುನಾವಣಾ ಚಟುವಟಿಕೆಗಳನ್ನು ತಳಮಟ್ಟದಿಂದ ಸಂಘಟಿಸುವುದು ಈ ನೇಮಕಾತಿಗಳ ಪ್ರಮುಖ ಉದ್ದೇಶವಾಗಿದೆ.

ಮುಂದಿನ ವರ್ಷ ಸಾಲು ಸಾಲು ಚುನಾವಣೆಗಳು!..

ಇವುಗಳಲ್ಲಿ 403 ಶಾಸಕ ಬಲ ಹೊಂದಿರುವ ಉತ್ತರ ಪ್ರದೇಶ ಹಾಗೂ 182 ಕ್ಷೇತ್ರಗಳಿರುವ ಗುಜರಾತ್ ಮತ್ತು 117 ಕ್ಷೇತ್ರಗಳಿರುವ ಪಂಜಾಬ್ ರಾಜಕೀಯವಾಗಿ ಭಾರಿ ಕುತೂಹಲ ಮೂಡಿಸಿವೆ. ಇದರ ಜೊತೆಗೆ ಉತ್ತರಾಖಂಡ (70), ಮಣಿಪುರ (60), ಹಿಮಾಚಲ ಪ್ರದೇಶ (68) ಮತ್ತು ಗೋವಾ (40) ರಾಜ್ಯಗಳನ್ನು ಸಾಮಾನ್ಯವಾಗಿ ನೋಡುವಂತಿಲ್ಲ.

ನಿತಿನ್​ ನವೀನ್​ ನೇತೃತ್ವದ ತಂಡ ಹೀಗಿದೆ!....

ಚುನಾವಣಾ ಸಿದ್ಧತೆಗಳ ಭಾಗವಾಗಿ ಬಿಜೆಪಿಯು ತನ್ನ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಸಹ ಸಂಪೂರ್ಣವಾಗಿ ಪುನರ್​ ರಚಿಸಿದ್ದು, ಒಟ್ಟು 65 ಪದಾಧಿಕಾರಿಗಳ ಹೊಸ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ 51 ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಇದರಲ್ಲಿ 12 ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯದ 6 ನಾಯಕರು ಸೇರಿದ್ದಾರೆ. ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದ್ದರೆ, ರಾಮ್ ಮಾಧವ್ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್​ರನ್ನು ರಾಷ್ಟ್ರೀಯ ಕೋಶಾಧಿಕಾರಿಯನ್ನಾಗಿ ಮತ್ತೆ ನೇಮಕ ಮಾಡಲಾಗಿದ್ದರೆ, ನಮ್ಮ ರಾಜ್ಯದವರೇ ಆದ ಬಿ ಎಲ್ ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಪಕ್ಷದ ಯುವ ಮೋರ್ಚಾ ಅಧ್ಯಕ್ಷರಾಗಿ ಗುಜರಾತ್‌ನ ಹೇಮಂಗ್ ಜೋಶಿ ಮತ್ತು ಐಟಿ ವಿಭಾಗದ ಮುಖ್ಯಸ್ಥರಾಗಿ ಛತ್ತೀಸ್‌ಗಢದ ದೀಪಕ್ ಮ್ಹಾಸ್ಕೆ ಅಧಿಕಾರ ವಹಿಸಿಕೊಂಡಿದ್ದಾರೆ. ದಶಕದ ಬಳಿಕ ನಡೆದ ಈ ದೊಡ್ಡ ಬದಲಾವಣೆಯು ಕೇಂದ್ರ ಸಚಿವ ಸಂಪುಟದ ಪುನರ್​ರಚನೆಯ ಸುಳಿವನ್ನೂ ಸಹ ನೀಡಿದೆ(ಏಜೆನ್ಸೀಸ್​).