BJP Rajya Sabha List | ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ 
ದೇಶ

ರಾಜ್ಯಸಭಾ ಸಮರ; ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಬಿಹಾರದಿಂದ ಅಖಾಡಕ್ಕೆ..ಬಿಜೆಪಿಯ 9 ನಾಯಕರಿಗೆ ಒಲಿದ ಅದೃಷ್ಟ! | BJP Rajya Sabha List

ದೆಹಲಿ: ಮಾರ್ಚ್ 16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (BJP Rajya Sabha List) ಮಂಗಳವಾರ ತನ್ನ 9 ಅಭ್ಯರ್ಥಿಗಳನ್ನು ಘೋಷಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಬಿಹಾರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.
ಬಿಹಾರದಿಂದ ನಿತಿನ್ ನವೀನ್​ ಮತ್ತು ಶಿವೇಶ್ ಕುಮಾರ್​​, ಅಸ್ಸಾಂನಿಂದ ತೇರಶ್ ಗೋವಲ್ಲ ಮತ್ತು ಜೋಗೆನ್ ಮೋಹನ್, ಛತ್ತೀಸ್‌ಗಢದಲ್ಲಿ ಲಕ್ಷ್ಮಿ ವರ್ಮಾ, ಹರಿಯಾಣದಿಂದ ಸಂಜಯ್ ಭಾಟಿಯಾ, ಒಡಿಶಾದಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಮನಮೋಹನ್ ಸಮಲ್ ಮತ್ತು ಸುಜೀತ್ ಕುಮಾರ್, ಪಶ್ಚಿಮ ಬಂಗಾಳದಿಂದ ರಾಹುಲ್ ಸಿನ್ಹಾರನ್ನು ಅಭ್ಯರ್ಥಿಗಳನ್ನಾಗಿ ಪಕ್ಷ ಷೋಷಿಸಿದೆ.

ಅಭ್ಯರ್ಥಿಗಳ ಹಿನ್ನಲೆ

ಸಂಜಯ್ ಭಾಟಿಯಾ 2019 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಲ್ ಕ್ಷೇತ್ರದಿಂದ 6,56,142 ಮತಗಳ ದಾಖಲೆಯ ಅಂತರದಿಂದ ಗೆದ್ದರು, ಇದು ಹರಿಯಾಣದ ಇತಿಹಾಸದಲ್ಲಿಯೇ ಅತ್ಯಧಿಕ ಮತಗಳ ಗೆಲುವಾಗಿದೆ.
ಜೋಗೆನ್ ಮೋಹನ್ ಪ್ರಸ್ತುತ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರದಲ್ಲಿ ಸಾರಿಗೆ, ಬೆಟ್ಟ ಪ್ರದೇಶಗಳ ಅಭಿವೃದ್ಧಿ, ಸಹಕಾರ, ಮತ್ತು ಸ್ಥಳೀಯ ಮತ್ತು ಬುಡಕಟ್ಟು ನಂಬಿಕೆ ಮತ್ತು ಸಂಸ್ಕೃತಿ ಸೇರಿದಂತೆ ಹಲವಾರು ಖಾತೆಗಳನ್ನು ಹೊಂದಿದ್ದಾರೆ.
ತೇರಶ್ ಗೋವಾಲ್ಲಾ ಅಸ್ಸಾಂನ ದಿಬ್ರುಗಢ ಜಿಲ್ಲೆಯ ದುಲಿಯಾಜನ್ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಾಗಿದ್ದಾರೆ. ಶಿವೇಶ್ ಕುಮಾರ್ ಈ ಹಿಂದೆ ಬಿಹಾರದ ಅಗಿಯಾನ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದು, ರಾಹುಲ್ ಸಿನ್ಹಾ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷರಾಗಿದ್ದಾರೆ.

ಉಪೇಂದ್ರ ಕುಶ್ವಾಹ ಕಥೆ ಏನು..?

ಬಿಹಾರ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗುವ ಮುನ್ಸೂಚನೆ ಸಿಕ್ಕಿದ್ದು, ರಾಷ್ಟ್ರೀಯ ಲೋಕ ಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಬಿಹಾರದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇವೆ ಎಂದು ಮೂಲಗಳು ತಿಳಿಸಿವೆ.
ಕುಶ್ವಾಹ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​​ರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದ್ದು, ಖಾಲಿ ಇರುವ ರಾಜ್ಯಸಭಾ ಸ್ಥಾನ ಮತ್ತು ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯ ಕುರಿತು ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಈ ಸಭೆ ಸಕಾರಾತ್ಮಕವಾಗಿತ್ತು ಮತ್ತು ಕುಶ್ವಾಹರನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟದ ಕಾರ್ಯತಂತ್ರದ ಭಾಗವಾಗಿ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎನ್ನುವುದು ಮೂಲಗಳ ಮಾಹಿತಿ.
243 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಪಕ್ಷವು ಬಿಹಾರದ ಐದು ರಾಜ್ಯಸಭಾ ಸ್ಥಾನಗಳಲ್ಲಿ ನಾಲ್ಕನ್ನು ಗೆಲ್ಲುವ ನಿರೀಕ್ಷೆ ಇದೆ(ಏಜೆನ್ಸೀಸ್​).