ಮತ್ತೆ 'ಕಮಲ-ತಕ್ಕಡಿ' ದೋಸ್ತಿ 
ದೇಶ

ಮತ್ತೆ 'ಕಮಲ-ತಕ್ಕಡಿ' ದೋಸ್ತಿ: ಅಕಾಲಿ ದಳದ ಮರು ಸೇರ್ಪಡೆಯಿಂದ ಎನ್‌ಡಿಎ ಪರಿಪೂರ್ಣವಾಯ್ತು ಎಂದ ಅಮಿತ್ ಷಾ! | BJP Akali Dal Alliance

ನವದೆಹಲಿ: ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (Akali Dal Alliance) ಮಂಗಳವಾರ ಅಧಿಕೃತವಾಗಿ ಮೈತ್ರಿ ಘೋಷಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಮತ್ತು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಜಂಟಿಯಾಗಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ದಶಕಗಳ ಕಾಲದ ಮಿತ್ರಪಕ್ಷಗಳಾಗಿದ್ದವು. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೊಡ್ಡ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ, 2020ರ ಸೆಪ್ಟೆಂಬರ್​​ನಲ್ಲಿ ಅಕಾಲಿ ದಳವು ಎನ್‌ಡಿಎ ಒಕ್ಕೂಟದಿಂದ ಹೊರಬಂದಿತ್ತು. ರೈತರ ವ್ಯಾಪಕ ಪ್ರತಿಭಟನೆಯ ನಂತರ ಕೇಂದ್ರ ಸರ್ಕಾರವು ಆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೂ, ಉಭಯ ಪಕ್ಷಗಳ ನಡುವಿನ ಅಂತರ ಇಲ್ಲಿಯವರೆಗೂ ಮುಂದುವರಿದಿತ್ತು.

ಆದರೆ, ಇತ್ತೀಚಿನ ದಿನಗಳಲ್ಲಿ ಎರಡೂ ಪಕ್ಷಗಳ ನಾಯಕರು ಮತ್ತೆ ಒಂದಾಗುವ ಕುರಿತು ಅನೇಕ ರೀತಿಯ ಸುಳಿವುಗಳನ್ನು ನೀಡುತ್ತಿದ್ದರು. ಪಂಜಾಬ್‌ನಲ್ಲಿ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯು ಈ ಮೈತ್ರಿಗೆ ಪ್ರಮುಖ ಮುನ್ಸೂಚನೆಯಾಗಿತ್ತು.

ಹಿಂದಿನ ಚುನಾವಣಾ ಇತಿಹಾಸ ಮತ್ತು ಅಂಕಿಅಂಶಗಳು

ಈ ಎರಡೂ ಪಕ್ಷಗಳು ಈ ಹಿಂದೆ ಒಟ್ಟಾಗಿ ಆರು ಲೋಕಸಭಾ ಚುನಾವಣೆಗಳು (1998, 1999, 2004, 2009, 2014 ಮತ್ತು 2019) ಹಾಗೂ ಐದು ವಿಧಾನಸಭಾ ಚುನಾವಣೆಗಳನ್ನು (1997, 2002, 2007, 2012 ಮತ್ತು 2017) ಎದುರಿಸಿದ್ದವು. 2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದಾಗ ಅಕಾಲಿ ದಳ 15 ಸ್ಥಾನಗಳನ್ನು ಮತ್ತು ಬಿಜೆಪಿ 3 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಮೈತ್ರಿ ಮುರಿದುಬಿದ್ದ ನಂತರ 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಈ ಚುನಾವಣೆಯಲ್ಲಿ ಅಕಾಲಿ ದಳವು ಕೇವಲ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಮತ್ತೊಂದೆಡೆ, ಬಿಜೆಪಿ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಉಭಯ ಪಕ್ಷಗಳ ಮರುಮೈತ್ರಿಯ ಬಗ್ಗೆ ವ್ಯಾಪಕ ಊಹಾಪೋಹಗಳು ಕೇಳಿಬಂದಿದ್ದವು, ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಅಕಾಲಿ ದಳ ಪಂಜಾಬ್‌ನಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದರೆ, ಬಿಜೆಪಿಗೆ ರಾಜ್ಯದಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಹಿಂದಿನ ಚುನಾವಣಾ ಹಿನ್ನಡೆಗಳನ್ನು ಮೆಟ್ಟಿನಿಲ್ಲಲು ಮತ್ತು 2027ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಕೈಜೋಡಿಸಿದ್ದು, ಪಂಜಾಬ್ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಅಕಾಲಿ ದಳದ ಸೇರ್ಪಡೆಯಿಂದ ಎನ್‌ಡಿಎ ಪರಿಪೂರ್ಣ: ಅಮಿತ್ ಷಾ

ಶಿರೋಮಣಿ ಅಕಾಲಿ ದಳ ಮರಳಿ ಬಂದಿರುವುದರಿಂದ ಎನ್‌ಡಿಎ ಒಕ್ಕೂಟ ಪರಿಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಣ್ಣಿಸಿದ್ದಾರೆ. ಅಕಾಲಿ ದಳವನ್ನು ಬಿಜೆಪಿಯ ಅತ್ಯಂತ ಹಳೆಯ ಮಿತ್ರಪಕ್ಷ ಎಂದು ಕರೆದ ಅವರು, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ನೇತೃತ್ವದಲ್ಲಿ ಉಭಯ ಪಕ್ಷಗಳ ನಡುವೆ ಇದ್ದ ಸುದೀರ್ಘ ರಾಜಕೀಯ ಬಾಂಧವ್ಯವನ್ನು ಸ್ಮರಿಸಿದರು.

ಬಾದಲ್ ಸಾಹೇಬರ ನೇತೃತ್ವದಲ್ಲಿ ಅಕಾಲಿ ದಳ ನಮ್ಮ ಅತ್ಯಂತ ಹಳೆಯ ಪಾಲುದಾರ ಪಕ್ಷವಾಗಿತ್ತು. ನಾವು ಒಟ್ಟಾಗಿ ಹಲವಾರು ಚುನಾವಣೆಗಳನ್ನು ಎದುರಿಸಿದ್ದೇವೆ, ಸೋಲು-ಗೆಲುವುಗಳನ್ನು ಕಂಡಿದ್ದೇವೆ. ಆದರೆ ನಮ್ಮ ಸಂಬಂಧ ಮುರಿದುಬಿದ್ದಿತ್ತು. ಇಂದು ಆ ಸಂಬಂಧ ಮತ್ತೆ ಸರಿಯಾಗಿರುವುದು ನಮಗೆ ತುಂಬಾ ಸಂತಸ ತಂದಿದೆ ಎಂದು ಅಮಿತ್ ಷಾ ಹೇಳಿದರು.

ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಅಕಾಲಿ ದಳ ಎನ್‌ಡಿಎ ಬ್ಯಾನರ್ ಅಡಿಯಲ್ಲಿ ಒಟ್ಟಾಗಿ ಎದುರಿಸಲಿವೆ ಎಂದು ತಿಳಿಸಿದ ಷಾ, ಪಂಜಾಬ್‌ಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಉಭಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನಿಲುವುಗಳನ್ನು ಪ್ರಕಟಿಸಲಿವೆ ಎಂದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಪ್ರಕಾಶ್ ಸಿಂಗ್ ಬಾದಲ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಸೇರಿದಂತೆ ಎರಡೂ ಪಕ್ಷಗಳ ಹಿರಿಯ ನಾಯಕರ ನಡುವಿನ ದೀರ್ಘಕಾಲದ ಒಡನಾಟವನ್ನೂ ಅವರು ನೆನಪಿಸಿಕೊಂಡರು.

ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ, ಧಾರ್ಮಿಕ ವಿಷಯಗಳ ಪ್ರಸ್ತಾಪ

ಇದೇ ಸಂದರ್ಭದಲ್ಲಿ ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಷಾ, ಪಂಜಾಬ್ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಆಪ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಸರ್ಕಾರವು ಒಂದು ರೀತಿಯಲ್ಲಿ ಭರವಸೆಗಳನ್ನು ಮುರಿದ ಸರ್ಕಾರವಾಗಿದೆ. ಅದು ತನ್ನ ಯಾವುದೇ ವಾಗ್ದಾನಗಳನ್ನು ಈಡೇರಿಸಿಲ್ಲ, ಪಂಜಾಬ್ ಜನತೆ ಇನ್ನೂ ಕಾಯುತ್ತಲೇ ಇದ್ದಾರೆ ಎಂದು ಷಾ ಟೀಕಿಸಿದರು. ಸಿಖ್ ಗುರುಗಳಿಗೆ ಅವಮಾನ ಮಾಡಿದವರನ್ನು ಬಿಜೆಪಿ ಮತ್ತು ಎಸ್‌ಎಡಿ ಮೈತ್ರಿಕೂಟ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ-ಎಸ್‌ಎಡಿ ಮೈತ್ರಿಯು ರಾಜ್ಯದಲ್ಲಿ ಬದಲಾವಣೆ ತರುವ ಜನರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಿದೆ ಎಂದ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತದಾರರು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಲಿದ್ದು, 2027ರ ಚುನಾವಣೆಯಲ್ಲಿ ಪ್ರಚಂಡ ಜನಾದೇಶ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳಾ ಮೀಸಲಾತಿ ವಿಧೇಯಕಕ್ಕೆ ಬಾದಲ್​ ಬೆಂಬಲ!

ದೇಶದಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಸುಖ್‌ಬೀರ್ ಸಿಂಗ್ ಬಾದಲ್ ಕಳೆದ ಆಗಷ್ಟ್​​ನಲ್ಲಿ ಆಗ್ರಹಿಸಿದ್ದರು. ಮಹಿಳೆಯರ ಘನತೆ, ಸಮಾನತೆ ಮತ್ತು ಸಮಾನ ಹಕ್ಕುಗಳನ್ನು ಎತ್ತಿಹಿಡಿದ ಸಿಖ್ ಗುರುಗಳ ಬೋಧನೆಗಳಿಂದ ಪಕ್ಷ ಈ ಪ್ರೇರಣೆ ಪಡೆದಿದೆ ಎಂದು ಅವರು ಹೇಳಿದರು. ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಈಗಾಗಲೇ ತನ್ನ ಹೌಸ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ಮಾದರಿಯಾಗಿದೆ ಎಂದು ಅವರು ಉಲ್ಲೇಖಿಸಿದರು(ಏಜೆನ್ಸೀಸ್​).